Advertisement
ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಯಂತೆ ಮೇ 4ರ ವರೆಗೆ ಪ್ರತೀ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮತ್ತು ವಾರಾಂತ್ಯ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕೊರೊನಾ ಕರ್ಫ್ಯೂ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಕ್ಷೇತ್ರಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
Related Articles
Advertisement
ಮೂಲ್ಕಿ: ರಾಜ್ಯದೆಲ್ಲೆಡೆ ಧಾರ್ಮಿಕ ಸ್ಥಳಗಳಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಏರಿದ ಹಿನ್ನೆಲೆಯಲ್ಲಿ ಮೂಲ್ಕಿ ಪರಿಸರದ ಎಲ್ಲ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಬಪ್ಪನಾಡು ದೇವಸ್ಥಾನದಲ್ಲಿ ಮತ್ತು ಮೂಲ್ಕಿ ಶ್ರೀ ವೆಂಕಟರಮಣ ದೇಗುಲಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ವೆಂಕಟರಮಣ ದೇಗುಲದಲ್ಲಿ ವಾರ್ಷಿಕ ಜಾತ್ರೆಯನ್ನು ಜನಜಂಗುಳಿಯಿಲ್ಲದೇ ಸರಳವಾಗಿ ನಡೆಸಲಾಗಿದೆ. ಚರ್ಚ್, ಮಸೀದಿಗಳಲ್ಲಿ ಕೂಡ ಸಾಮೂಹಿಕ ಪ್ರಾರ್ಥನೆಗೆ ನಡೆಸದೇ ಸರಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಮೂಲ್ಕಿ ಪೊಲೀಸರು ರಾತ್ರಿ 9 ಗಂಟೆ ಯಿಂದ ಬಪ್ಪನಾಡು ದೇಗುಲದ ಬಳಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಹಾಗೂ ಸಂಚಾರವನ್ನು ನಿರ್ಬಂಧಿಸಿ ಕಟ್ಟು ನಿಟ್ಟಿನ ಕ್ರಮ ಕ್ರಮ ಕೈಗೊಳ್ಳಲಾಗಿದೆ.
ನಗರ ಪಂಚಾಯತ್ ಮುಖ್ಯಾಧಿಕಾರಿಗಳ ತಂಡ ಮಾಸ್ಕ್ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ನಾಡು ಸದಾಶಿವ ನಗರ ಮತ್ತು ಬಿಜಾ ಪುರ ಕಾಲನಿಯ ಪ್ರದೇಶಗಳಲ್ಲಿ ವಿಶೇಷವಾಗಿ ಮಾಸ್ಕ್ ಧರಿಸುವ ಮಾಹಿತಿ ನಡೆಸಲಾಗಿದೆ.
ಮಾಸ್ಕ್ ದಂಡ :
ಬುಧವಾರದಿಂದ ಸಾರ್ವಜನಿಕರಿಂದ ಸುಮಾರು 1,800 ರೂ. ಮೊತ್ತವನ್ನು ದಂಡವಾಗಿ ಸಂಗ್ರಹಿಸಲಾಗಿದೆ. ಶುಕ್ರ ವಾರ ರಾತ್ರಿಯಿಂದ ಸೋಮವಾರ ಮುಂಜಾನೆಯ ತನಕ ಇರುವ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು ತಯಾರಿ ಇರಬೇಕು ಹಾಗೂ ಅಂಗಡಿ ಮಂಗಟ್ಟುಗಳು ವಹಿಸಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಲಾಗಿದೆ.
ಕೋವಿಡ್ ಕಟ್ಟೆಚ್ಚರ :
ಹಳೆಯಂಗಡಿ: ರಾಜ್ಯದಲ್ಲಿ ನೂತನ ಕೋವಿಡ್ ಕಾನೂನನ್ನು ಜಾರಿ ಮಾಡಿ ರುವುದರಿಂದ ಇಲ್ಲಿನ ಹಳೆಯಂಗಡಿ ಮತ್ತು ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಗರಿಕರು ಸ್ಪಂದಿಸಿದ್ದು, ದೇಗುಲದ ವಠಾರ ಭಕ್ತರಿಲ್ಲದೇ ಬಿಕೋ ಎನ್ನುತ್ತಿದ್ದವು.
ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರ, ಪಡು ಪಣಂಬೂರು ಹೊಗೆಗುಡ್ಡೆಯ ಎರಡು ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ಮಾಹಾಗಣಪತಿ ದೇವಸ್ಥಾನ ಹಾಗೂ ಪಾವಂಜೆಯಲ್ಲಿ ಒಂದೇ ವಠಾರದಲ್ಲಿರುವ ಶ್ರೀ ಮಹಾಗಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನಕ್ಕೆ ಭಕ್ತರಿಗೆ ಸಂಪೂರ್ಣವಾಗಿ ಪ್ರವೇಶ ನಿರಾಕರಿಸಿದ್ದರಿಂದ ದೇಗುಲದ ವಠಾರದ ಸುತ್ತಮುತ್ತ ಜನಸಂಚಾರವೇ ಇರಲಿಲ್ಲ. ಹಳೆಯಂಗಡಿ ಮಾರುಕಟ್ಟೆಯಲ್ಲಿ ಗ್ರಾಹಕರು ದಿನಸಿ ಮತ್ತಿತರ ವಸ್ತುಗಳನ್ನು ಖರೀದಿಸುವ ಭರಾಟೆ ಹೆಚ್ಚಾಗಿತ್ತು. ಯಾವಾಗ ಲಾಕ್‌ಡೌನ್ ಆಗುತ್ತೆಯೋ ಗೊತ್ತಿಲ್ಲ ಎಂಬ ಆತಂಕದಲ್ಲಿಯೇ ಖರೀದಿ ನಡೆಸಿದ್ದರು.
ಗ್ರಾ.ಪಂ. ಕಚೇರಿಯಲ್ಲಿ ಮದುವೆ ಮತ್ತಿತರ ಶುಭ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ನಾಗರಿಕರು ಭೇಟಿ ನೀಡುವವರ ಸಂಖ್ಯೆಯೂ ಸಹ ಹೆಚ್ಚಾಗಿತ್ತು. ಬ್ಯಾಂಕ್, ಸೊಸೈಟಿ, ಅಂಚೆ ಕಚೇರಿಗಳು ಎಂದಿನಂತೆ ತೆರೆದಿದ್ದವು, ಸಂಚಾರದ ವ್ಯವಸ್ಥೆಗೂ ಯಾವುದೇ ಅಡ್ಡಿಯಾಗಿಲ್ಲ, ಖಾಸಗಿ ಬಸ್ಸುಗಳನ್ನು ಪ್ರಯಾಣಿಕರ ಕೊರತೆ ಎದ್ದು ಕಾಡುತ್ತಿತ್ತು. ಕೆಮ್ರಾಲ್ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೋವಿಡ್‌ನ ಎಚ್ಚರಿಕೆ ಹಾಗೂ ಮಾಹಿತಿಯನ್ನು ಸಂಗ್ರಹಿಸಿದರು.
ಮೂಡುಬಿದಿರೆ: ಶುಕ್ರವಾರದ ಸಂತೆಯ ಸ್ಥಿತಿ ಅನಿಶ್ಚಿತ :
ಮೂಡುಬಿದಿರೆ: ಕೋವಿಡ್ ಪ್ರತಿಬಂಧಕ ಕ್ರಮಗಳನ್ವಯ ಮೂಡುಬಿದಿರೆ ತಾಲೂಕಿನಲ್ಲಿ ಏನೇನು ತೆರೆದಿರುತ್ತವೆ, ಅವಧಿ ಹೇಗಿರುತ್ತದೆ ಎಂಬುದರ ಬಗ್ಗೆ ಜನತೆ ಗೊಂದಲದಲ್ಲಿರುವಂತೆ ಕಂಡಿದೆ.
ಶುಕ್ರವಾರದಿಂದ ಆಹಾರ ಮತ್ತು ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿವೆ ಎಂದು ಹೇಳಲಾಗುತ್ತಿದೆಯಾದರೂ ಯಾವುದೆಲ್ಲ ತೆರೆದಿರುತ್ತವೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಸೂಚನೆ ಲಭಿಸುತ್ತಿಲ್ಲ. ವದಂತಿಗಳು ಜನರಲ್ಲಿ ಕಳವಳ ಹುಟ್ಟಿಸುವಂತಿವೆ.
ಬುಧವಾರ, ಗುರುವಾರದಿಂದಲೇ ಮೂಡುಬಿದಿರೆಯಲ್ಲಿ ಓಡಾಡುತ್ತಿರುವ ಜನರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು ಬಸ್, ವ್ಯಾಪಾರ ಕೇಂದ್ರಗಳಲ್ಲಿ ಜನರ ಒತ್ತಡದ ಪ್ರಮಾಣ ಕಡಿಮೆ ಇತ್ತು.
ಶುಕ್ರವಾರ ಮೂಡುಬಿದಿರೆಯಲ್ಲಿ ವಾರದ ಸಂತೆಯ ದಿನ. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬರುವರೋ ಇಲ್ಲವೋ ಎಂಬುದು ಅನುಮಾನಾಸ್ಪದವಾಗಿ ಉಳಿದಿದ್ದು ಶುಕ್ರವಾರ ಸಂತೆ ತೆರೆದುಕೊಂಡ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಬಹುದಾಗಿದೆ.
ರದ್ದುಗೊಂಡ ಜಾತ್ರೆ, ನೇಮ :
ಕಿನ್ನಿಗೋಳಿ: ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು, ಕೆಮ್ರಾಲ್ ಗ್ರಾ.ಪಂ. ಮಟ್ಟದಲ್ಲಿ ಅಧಿಕಾರಿಗಳು ಸರಕಾರದ ನೂತನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಲು ಮುಂದಾಗಿರುವುದು ಕಂಡುಬಂತು.
ಎಳತ್ತೂರು ಹಾಗೂ ಸುರಗಿರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಹಿತ ಹಲವು ಗ್ರಾಮಗಳ ದೈವ ನೇಮಗಳಿಗೆ ಮೂಲ್ಕಿ ತಹಶೀಲ್ದಾರ್ ಮೂಲಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಕೇವಲ ಪೂಜೆ ಮಾತ್ರ ಅವಕಾಶ ಮಾಡಲಾಗಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಎಳತ್ತೂರು , ಕೆಮ್ರಾಲ್ ಎರಡು ದೇವಸ್ಥಾನದಲ್ಲಿ ಕಳೆದ ವರ್ಷವು ಜಾತ್ರೆ ಸಾಂಕೇತಿಕವಾಗಿ ನಡೆದಿದ್ದು ಈ ವರ್ಷವು ಅದೇ ಪರಿಸ್ಥಿತಿ ಮುಂದುವರಿದೆ. ಕಿನ್ನಿಗೋಳಿ, ಕಟೀಲು ಪೇಟೆಯಲ್ಲಿ ರಾತ್ರಿ 9 ಗಂಟೆಗೆ ಬಳಿಕ ಕರ್ಫ್ಯೂ ವಿಧಿಸಿರುವುದರಿಂದ ಅಂಗಡಿ ಮುಂಗಟ್ಟುಗಳು 8 ಗಂಟೆಗೆ ಮುಚ್ಚಲಾಗಿತ್ತು.