ಮೈಸೂರು: ಎರಡು ಹುಲಿ ಸಂರಕ್ಷಿತಾರಣ್ಯಗಳ ನಡುವೆ ವಿಶಾಲವಾಗಿ ಹರಡಿಕೊಂಡಿರುವ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ಅರ್ಧ ಕಿ.ಮೀ.ಗೂ ಹೆಚ್ಚು ನಿರಾತಂಕವಾಗಿ ಈಜಿ ದಡ ಸೇರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ವಿಸ್ತಾರ ವಾಗಿ ಚಾಚಿಕೊಂಡಿರುವ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸೋಮವಾರ ಮುಂಜಾನೆ ಬಂಡೀಪುರ ಅರಣ್ಯದಂಚಿನಿಂದ ಹುಲಿಯೊಂದು ಅರ್ಧ ಕಿ.ಮೀ. ಗೂ ಹೆಚ್ಚು ದೂರ ನೀರಿನಲ್ಲಿ ಈಜಿ ನಾಗರಹೊಳೆ ಅರಣ್ಯವನ್ನು ಪ್ರವೇಶಿಸಿದೆ.
ಈ ದೃಶ್ಯವನ್ನು ಸೆರೆ ಹಿಡಿದಿರುವ ಅರಣ್ಯಾಧಿಕಾರಿಗಳು ಮತ್ತು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿ ದ್ದಂತೆ ಎಲ್ಲೆಡೆ ವೈರಲ್ ಆಗಿದ್ದು ಹುಲಿಯ ಈಜಾಟದ ಸಾಮರ್ಥ್ಯಕ್ಕೆ ಮಾರುಹೋಗಿದ್ದಾರೆ. ಮೈಕೊರೆಯುವ ಚಳಿ, ವಿಶಾಲವಾಗಿ ಚಾಚಿಕೊಂಡ ಹಿನ್ನೀರು, ನೀರಿನ ಸೆಳೆತ, ಆಳವನ್ನು ಲೆಕ್ಕಿಸದ ವ್ಯಾಘ್ರ 400 ಮೀಟರ್‌ಗೂ ಅಧಿಕ ದೂರವಿರುವ ಮತ್ತೂಂದು ದಡವನ್ನು ನಿರಾತಂಕವಾಗಿ ಎರಡು ನಿಮಿಷಗಳ ಅವಧಿಯಲ್ಲಿ ಈಜಿ ದಡ ಸೇರುವ ಮೂಲಕ ತಾನೊಬ್ಬ ಅಪ್ರತಿಮ ಈಜುಪಟು ಎಂಬು ದನ್ನು ಸಾಬೀತು ಪಡಿಸಿದೆ.
ಹುಲಿಯೊಂದು ಸಣ್ಣ ಪ್ರಮಾಣದ ತೊರೆ, ನದಿಯನ್ನು ಈಜಿರುವ ದೃಶ್ಯಗಳು ಕಂಡುಬಂದಿತ್ತಾದರೂ ಜಲಾಶಯ ವೊಂದ ರಲ್ಲಿ ತುಂಬಿ ತುಳುಕುತ್ತಿರುವ ಹಿನ್ನೀರನ್ನು ಯಾವ ನಿರ್ಭಯವೂ ಇಲ್ಲದೇ ಹುಲಿ ಈಜಿರುವ ದೃಶ್ಯ ಇದೇ ಮೊದಲು ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಹುಲಿ ಸೇರಿದಂತೆ ವನ್ಯ ಜೀವಿಗಳಿಗೆ ನಾಗರಹೊಳೆ, ಬಂಡೀಪುರ ಎಂಬ ಕಾಡಿನ ಗಡಿ ಇರುವುದಿಲ್ಲ. ಈ ಎರಡೂ ಪ್ರದೇಶವನ್ನೊಳಗೊಂಡಂತೆ ತನ್ನ ಗಡಿ ಗುರುತಿಸಿಕೊಂಡಿರುತ್ತವೆ.
ಇದನ್ನೂ ಓದಿ;- ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ
ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದಾಗ ಎರಡೂ ಅರಣ್ಯ ಪ್ರದೇಶಗಳಿಗೆ ಓಡಾಡಿಕೊಂಡಿರುವ ಹುಲಿ ನೀರು ತುಂಬಿದಾಗ ಈಜಿ ತನ್ನ ಗಡಿಯಲ್ಲಿ ಓಡಾಡುವುದು ಅದರ ಸ್ವಾಭಾವ. ಜೊತೆಗೆ ನದಿಯಿಂದಾಚೆಗೆ ಹೆಣ್ಣು ಹುಲಿ ಕೂಡುವ ಕಾಲಕ್ಕೆ ಬಂದಿದ್ದರೆ ಅದನ್ನು ಅನುಸರಿಸಿ ಹುಲಿಗಳು ನದಿಯನ್ನು ಈಜಿ ದಡ ಸೇರುತ್ತವೆ. ಹುಲಿ ಸೇರಿದಂತೆ ಎಲ್ಲಾ ವನ್ಯ ಜೀವಿಗಳಿಗೂ ಈಜು ಎಂಬುದು ಸಹಜವಾಗಿ ದಕ್ಕಿರುವ ಕಲೆ ಎಂದು ವನ್ಯ ಜೀವಿ ತಜ್ಞ ಕೃಪಾಕರ್ ಉದಯವಾಣಿಗೆ ತಿಳಿಸಿದ್ದಾರೆ.
“ಹುಲಿಯೊಂದು ಅರ್ಧ ಕಿ.ಮೀ. ದೂರ ಕಬಿನಿ ಹಿನ್ನೀರಿನಲ್ಲಿ ಈಜಿರುವುದು ತೀರಾ ಸಾಮಾನ್ಯ ಸಂಗತಿ. ಈ ನೋಟ ನಮಗೆ ಅಪರೂಪವಾಗಿದ್ದರೂ, ವನ್ಯಜೀವಿಗಳು ನದಿ, ತೊರೆ ದಾಟುವುದು ಸಾಮಾನ್ಯ. ಅವುಗಳಿಗೆ ಈಜುವ ಕಲೆ ಸಹಜವಾಗಿ ಬಂದಿರುವಂತದ್ದು.”
– ಕೃಪಾಕರ ಸೇನಾನಿ, ವನ್ಯಜೀವಿ ತಜ್ಞರು.