ಬೆಂಗಳೂರು: ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ವೊಂದರಲ್ಲಿ ಇಟ್ಟಿದ್ದ 30 ಲಕ್ಷ ರೂ. ಮೌಲ್ಯದ ಅರ್ಧ ಕೆ.ಜಿ. ಚಿನ್ನಾಭರಣ ಕಳುವಾಗಿದ್ದು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯಲಹಂಕ ನಿವಾಸಿ ಬಿ.ಎನ್.ಕೃಷ್ಣಕುಮಾರ್ (61) ಯಲಹಂಕ ಉಪನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ವೊಂದರಲ್ಲಿ 2020ರ ಜೂ.17ರಂದು ಸೇಫ್ ಲಾಕರ್ ತೆರೆದಿದ್ದರು. ಅವರ ಮಗ ಸುಮಾರು ಮೂರೂವರೆ ವರ್ಷಗಳಿಂದ ಜರ್ಮನಿಯಲ್ಲಿ ವಾಸವಿದ್ದು, ಈ ಸೇಫ್ ಲಾಕರ್ ಅಪ್ಪ-ಮಗನ ಹೆಸರಿನಲ್ಲಿತ್ತು.
ಕಳೆದ ಜೂ.8ರಂದು 580 ಗ್ರಾಂ ಚಿನ್ನದ ಒಡವೆಗಳನ್ನು ಲಾಕರ್‌ನಲ್ಲಿ ಇಟ್ಟಿದ್ದರು. ನಂತರ ಜರ್ಮನಿಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ ನ.10ರಂದು ಬ್ಯಾಂಕ್‌ಗೆ ಹೋಗಿ ಲಾಕರ್‌ನಲ್ಲಿ ಇಟ್ಟಿದ್ದ ಒಡವೆ ತೆಗೆದುಕೊಳ್ಳಲು ಹೋದಾಗ ಕೋಡೆಡ್ ಬಾಕ್ಸ್‌ನಲ್ಲಿ ಒಡವೆಗಳು ಇರಲಿಲ್ಲ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದಾಗ, 3 ದಿನಗಳ ಬಳಿಕ ಬನ್ನಿ ಎಂದಿದ್ದರು. 3 ದಿನ ಬಿಟ್ಟು ಕೃಷ್ಣಕುಮಾರ್ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ “ನಿಮ್ಮ ಒಡವೆಗಳು ಇರುವ ಬಾಕ್ಸ್ ಏನಾಗಿದೆ ನಮಗೆ ಗೊತ್ತಿಲ್ಲ. ನೀವು ಬೇಕಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಬಹುದು’ ಎಂದು ಮ್ಯಾನೇಜರ್ ಹೇಳಿದ್ದರು.
ಇದರ ಬೆನ್ನಲ್ಲೇ ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿರುವ ಕೃಷ್ಣ ಕುಮಾರ್, ಬ್ಯಾಂಕ್ ಸಿಬ್ಬಂದಿಯೇ ತಮ್ಮ ಚಿನ್ನಾಭರಣ ಹೊತ್ತೂಯ್ದಿರುವ ಸಾಧ್ಯತೆಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮ್ಯಾನೇಜರ್ ವಿಚಾರಣೆಗೆ ಗೈರು: ಇತ್ತ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ಮ್ಯಾನೇಜರ್‌ನನ್ನು ಸಂಪರ್ಕಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿ ಮ್ಯಾನೇಜರ್ ವಿಚಾರಣೆಗೆ ಗೈರಾಗಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವಾಗ ಒಂದು ಕೀ ಕೊಡುತ್ತಾರೆ. ಚಿನ್ನ ಇಟ್ಟು ಬಂದಾಗ ಅವರೇ ಲಾಕ್ ಮಾಡಿಕೊಂಡು ಬರುತ್ತಾರೆ. ಲಾಕ್ ಮಾಡುವಾಗ ಒಂದು ಕೀ ಮಾತ್ರ ಇರುತ್ತದೆ. ಚಿನ್ನ ಹೊರ ತೆಗಿಯುವಾಗ ಎರಡು ಕೀ ಇರಬೇಕು. ದೂರುದಾರರಿಗೆ ಕೀ ಓಪನ್ ಮಾಡಿದಾಗ ಎಸ್‌ಎಂಎಸ್ ಸಂದೇಶ ಬಂದಿಲ್ಲ. ಸದ್ಯ ಮ್ಯಾನೇಜರ್ ಹಾಗೂ ಸಿಬ್ಬಂದಿಗೆ ನೋಟಿಸ್ ಕೊಡಲಾಗಿದ್ದು, ಅವರ ವಿಚಾರಣೆ ಬಳಿಕ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಬರ ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.