Advertisement

ಕೋರಂ ಇಲ್ಲದ್ದಕ್ಕೆ ಗ್ರಾಮಸಭೆ ಮುಂದೂಡಿಕೆ: ಗ್ರಾಮಸ್ಥರ ಆಕ್ಷೇಪ

10:22 AM Dec 19, 2019 | sudhir |

ಸಸಿಹಿತ್ಲು: ಗ್ರಾಮಸಭೆಗೆ ಬೇಕಾದ ಸೂಕ್ತ ಕೋರಂ ಇಲ್ಲದ ಕಾರಣ ಅಧಿಕಾರಿಗಳು ಸೂಚಿಸಿದ ನಿಯಮದಂತೆ ಗ್ರಾಮಸಭೆ ನಡೆಸಲು ಸಾಧ್ಯವಿಲ್ಲ ಎಂದು ಪಂಚಾಯತ್‌ ಅಧ್ಯಕ್ಷರು ಸೂಚಿಸಿದಾಗ ಗ್ರಾಮಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಡುವೆಯೇ ಗ್ರಾಮಸಭೆಯನ್ನು ಮುಂದೂಡಿದ ಘಟನೆ ಡಿ. 18ರಂದು ಹಳೆಯಂಗಡಿ ಗ್ರಾಮಸಭೆಯಲ್ಲಿ ಜರಗಿತು.

Advertisement

ಸಸಿಹಿತ್ಲು ಅಗ್ಗಿದಕಳಿಯದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಪಂಚಾಯತ್‌ ಅಧ್ಯಕ್ಷೆ ಜಲಜಾ ಪಾಣಾರ್‌ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಾಗ ಗ್ರಾಮಸ್ಥರು ಸಭೆಯಲ್ಲಿ ಕೋರಂ ಇಲ್ಲದೇ ಗ್ರಾಮಸಭೆಯನ್ನು ನಡೆಸಲು ಸಾಧ್ಯವಿದೆಯೇ, ಸಭೆ ನಡೆಸಿದರೂ ಸಹ ಗ್ರಾಮಸ್ಥರ ಸಮಸ್ಯೆಗೆ ಜವಾಬ್ದಾರಿ ಯಾರು, ಕಳೆದ ಭಾರಿ ಸಭೆಯನ್ನು ಮುಂದೂಡಿದ ಬಗ್ಗೆ ಸ್ಪಷ್ಟನೆ ನೀಡಿ ಎಂಬಿತ್ಯಾದಿ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ನೋಡೆಲ್‌ ಅಧಿಕಾರಿ ಅರ್ಧ ತಾಸು ಕಾಯೋಣ ಎಂದು ತಿಳಿಸಿ ಕೊನೆಗೆ ಒಂದು ತಾಸು ಆದಾಗ ಪಿಡಿಒ ಮೂಲಕ ನಿಯಮಗಳನ್ನು ಓದಿಸಿ, ಸಭಾ ಅಧ್ಯಕ್ಷರಿಗೆ ಗ್ರಾಮ ಸಭೆಯನ್ನು ಮುಂದೂಡಿ ಎಂದು ಹೇಳಿ ಸಭೆಯನ್ನು ಮೊಟಕುಗೊಳಿಸಿ, ಸಾಕಷ್ಟು ಗೊಂದಲದಲ್ಲಿ ಮುಕ್ತಾಯವಾಯಿತು.

ಸಭೆ ರದ್ದಾದರೂ ಚರ್ಚೆ
ಗ್ರಾಮಸ್ಥರು ಸಭೆಯನ್ನು ನಡೆಸಿ ಎಂದು ಆಗ್ರಹಿಸಿದಾಗ ಅಧ್ಯಕ್ಷರು ಮುಂದುವರಿಸೋಣ ಎಂದು ಒಮ್ಮೆ ಹೇಳಿದರು, ನಂತರ ಅಧಿಕಾರಿ ನಿಯಮದಂತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ಅಧ್ಯಕ್ಷರು ಸಭೆಯನ್ನು ಮೂಂದೂಡೋಣ ಎಂದು ಘೋಷಿಸಿದರು. ಬೆಳಿಗ್ಗೆ 11ಕ್ಕೆ ಆರಂಭವಾಗಬೇಕಾದ ಸಭೆಯು ಗ್ರಾಮಸ್ಥರ ಕೊರತೆ ಇದೆ ಎಂದು 12ಕ್ಕೆ ಆರಂಭಗೊಂಡಾಗ ಈ ಗೊಂದಲ ಉಂಟಾಯಿತು. ಗ್ರಾಮಸ್ಥರು ಸಭೆಯ ನಿರ್ವಹಣೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿ, ಸಭೆ ರದ್ದಾದರೂ ಸಹ ವೇದಿಕೆಯ ಮುಂಭಾಗದಲ್ಲಿಯೇ ಮಾತಿನ ಜಟಾಪಟಿ ನಡೆಸಿದರು.

ಗ್ರಾಮಸ್ಥರ ಪಟ್ಟು..
ಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿ, ಸೆ.16ರಂದು ಪಾವಂಜೆಯಲ್ಲಿ ನಡೆದ ಗ್ರಾಮ ಸಭೆಯು ಗ್ರಾಮದಲ್ಲಿ ಮೂಲ ಸೌಕರ್ಯ ನೀಡಿಲ್ಲ , ಅಧ್ಯಕ್ಷರು, ಪಿಡಿಒ ಹಾಗೂ ನೋಡೆಲ್‌ ಅಧಿಕಾರಿಗಳ ನಿರುತ್ತರವನ್ನು ವಿರೋಧಿಸಿ ಗ್ರಾಮಸಭೆಯು ರದ್ದುಗೊಂಡಿತ್ತು, ಇದೀಗ ಈ ಸಭೆಯನ್ನು ಸಹ ಅದೇ ರೀತಿ ಮುಂದೂಡುವುದು ಸರಿಯಲ್ಲ, ಕೋರಂ ಇಲ್ಲದಿದ್ದರೂ ಸಭೆಯನ್ನು ನಡೆಸಿ, ಗ್ರಾಮದ ಸಮಸ್ಯೆಗೆ ಸ್ಪಂದಿಸಿ, ಜನರು ಕೇಳುವ ಪ್ರಶ್ನೆಗೆ ಉತ್ತರಿಸುವ ಜವಬ್ದಾರಿ ಯಾರಾದರೂ ವಹಿಸಿಕೊಳ್ಳಿರಿ, ಅಧ್ಯಕ್ಷರು ಸಭೆ ನಡೆಸುವ ಧೈರ್ಯ ಮಾಡಿರಿ, ಹಿಂದೇಟು ಹಾಕಬೇಡಿರಿ, ಎಲ್ಲಕ್ಕೂ ನಿಯಮವೇ ಪ್ರಧಾನವಾದರೇ, ಹಿಂದೆ ನಡೆದ ಸಭೆಯಲ್ಲಿ ನೂರು ಮಂದಿಗಿಂತ ಕಡಿಮೆ ಇದ್ದರೂ ಸಭೆ ನಡೆಸಲಾಗಿದೆ ಎಂದು ಗ್ರಾಮಸ್ಥರಾದ ಯೋಗೀಶ್‌ ಪಾವಂಜೆ, ಮಹಾಬಲ ಸಾಲ್ಯಾನ್‌, ಧನರಾಜ್‌ ಕೋಟ್ಯಾನ್‌, ಯತೀಶ್‌, ಪ್ರವೀಣ್‌, ಶೋಭೇಂದ್ರ, ಶಶಿಕಲಾ ಪುತ್ರನ್‌, ದೇವಕಿ ಮೆಂಡನ್‌, ದಿನೇಶ್‌ ಕೊಳುವೈಲು ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮ ಪಂಚಾಯತ್‌ನ ಕೆಲವು ಸದಸ್ಯರು ಸಹ ಧ್ವನಿ ಗೂಡಿಸಿದರು.
ನಿಯಮಗಳೇ ಪ್ರಾಮುಖ್ಯವಾಯಿತು.

ಸಭೆಯಲ್ಲಿ ಚರ್ಚೆಯ ಕಾವು ಹೆಚ್ಚಾದಾಗ ನೋಡೆಲ್‌ ಅ ಧಿಕಾರಿಯಾಗಿದ್ದ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಅವರ ಸೂಚನೆಯಂತೆ ಪಿಡಿಒ ಪೂರ್ಣಿಮಾ ಅವರು ನಿಯಮವನ್ನು ಸಭೆಯಲ್ಲಿ ಓದಿ ಹೇಳಿ, ಸಭೆಯಲ್ಲಿ ಕನಿಷ್ಠ 100 ಮಂದಿ ಗ್ರಾಮಸ್ಥರು ಇರಬೇಕು, ಆದರೆ ಇಲ್ಲಿರುವುದು 31 ಮಂದಿ ಮಾತ್ರ ಇಲ್ಲದೇ ಇದ್ದಲ್ಲಿ ಮತದಾರರ ಒಂದು ಭಾಗವಾದರೂ (600 ಮಂದಿ)ಇರಬೇಕು ಎಂಬ ನಿಯಮವಿದೆ. ಕೋರಂ ಇಲ್ಲದ ಸಭೆಯನ್ನು ಮುಂದೂಡಿ ಮುಂದಿನ ದಿನಾಂಕವನ್ನು ನಮೂದಿಸಿ ಸಭೆಯನ್ನು ನಡೆಸಲು ಸಾಧ್ಯವಿದೆ ನಂತರ ನಡೆಸಿದ ಸಭೆಯಲ್ಲಿ ಕೋರಂನ ಅಗತ್ಯವಿಲ್ಲ ಎಂದು ಸಭೆಯನ್ನು ಮೊಟಕುಗೊಳಿಸಿದ ನಂತರ ಗ್ರಾಮಸ್ಥರು. ಅಧ್ಯಕ್ಷರು, ಸದಸ್ಯರು, ನೋಡೆಲ್‌ ಹಾಗೂ ಪಿಡಿಒ ನಡುವೆ ಮಾತಿನ ಚರ್ಚೆ ಬಿರುಸುಗೊಂಡು ವೇದಿಕೆ ಏರಿ ಪ್ರಶ್ನಿಸಲಾಯಿತು.

Advertisement

ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಪಂ.ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್‌.ವಸಂತ ಬೆರ್ನಾಡ್‌, ವಿನೋದ್‌ಕುಮಾರ್‌ ಕೊಳುವೈಲು, ಸುಕೇಶ್‌ ಪಾವಂಜೆ, ಅನಿಲ್‌ಕುಮಾರ್‌, ಚಂದ್ರಕುಮಾರ್‌, ಅಬ್ದುಲ್‌ ಅಜೀಜ್‌, ಅಬ್ದುಲ್‌ ಖಾದರ್‌, ಮಾಲತಿ ಕೋಟ್ಯಾನ್‌, ಶರ್ಮಿಳಾ ಕೋಟ್ಯಾನ್‌, ಚಿತ್ರಾ ಸುಕೇಶ್‌, ಗುಣವತಿ, ಚಿತ್ರಾ ಸುರೇಶ್‌, ಹಮೀದ್‌ ಮತ್ತಿತರರು, ಕಾರ್ಯದರ್ಶಿ ]ಶೈಲ, ಹಾಗೂ ಕೃಷಿ ಇಲಾಖೆಯ ಅಬ್ದುಲ್‌ ಬಶೀರ್‌, ಶಿಕ್ಷಣ ಇಲಾಖೆಯ ಕುಸುಮಾ, ಪಶು ಸಂಗೋಪನೆಯ ಪ್ರಭಾಕರ ಶೆಟ್ಟಿ, ಮೂಲ್ಕಿ ಪೊಲೀಸ್‌ ಠಾಣೆಯ ಚಂದ್ರಶೇಖರ್‌, ಅರಣ್ಯ ಇಲಾಖೆಯ ರೋಹಿಣಿ, ಸಂತೋಷ್‌ ದೇವಾಡಿಗ, ಆರೋಗ್ಯ ಇಲಾಖೆಯ ಗೀತಾ, ಮೆಸ್ಕಾಂನ ಸುಭೀಶ್‌, ಸಂತೋಷ್‌, ಗ್ರಾಮ ಕರಣಿಕ ಮೋಹನ್‌, ಅಂಗನವಾಡಿ ಮೇಲ್ವಿಚಾರಕಿ ಶೀಲಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಭೆಯ ನಿರ್ಣಯ
ಎರಡನೇ ಸುತ್ತಿನ ಗ್ರಾಮ ಸಭೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲಾಗಿದೆ, ಮುಂದಿನ ಗ್ರಾಮ ಸಭೆಯನ್ನು ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಮೂಲಕ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ನಿರ್ಣಯವನ್ನು ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next