Advertisement

ಶಿಕ್ಷಣ ಸಚಿವರೇ ಈ ಶಾಲೆ ದುಸ್ಥಿತಿ ನೋಡ ಬನ್ನಿ…

08:08 PM Mar 19, 2021 | Team Udayavani |

ಹಳೇಬೀಡು: ಶಾಲೆಗೆ ಬಂದು ಪಾಠ ಕೇಳಬೇಕಾದ ವಿದ್ಯಾರ್ಥಿಗಳು ನಿತ್ಯ ಮದ್ಯದ ಬಾಟಲ್‌, ಸಿಗರೇಟ್‌ ತುಂಡುಗಳನ್ನು ಸ್ವತ್ಛಗೊಳಿಸಬೇಕಿದೆ.

Advertisement

ಹೌದು ಇಂತಹ ದುಸ್ಥಿತಿ ಎದುರಾಗಿರುವುದು ಹಳೇಬೀಡಿನ ಬಸದೀಹಳ್ಳಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ. ಶಾಲೆ-ಕಾಲೇಜು ಆವರಣಗಳು ಪ್ರತಿ ನಿತ್ಯ ಸಂಜೆ ವೇಳೆ ಕುಡುಕರ ಅಡ್ಡವಾಗಿ ಮಾರ್ಪಡುತ್ತಿದ್ದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಸಂಖ್ಯೆ ಹೆಚ್ಚಾಗಿದೆ:

ಖಾಸಗಿ ಶಾಲೆಗಳ ಭರಾಟೆ ನಡುವೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಮಕ್ಕಳ ಸಂಖ್ಯೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ಆಟದ ಮೈದಾನ, ಶಾಲಾ, ಕಾಲೇಜು ಕಟ್ಟಡದ ಮೇಲೆ ಕುಳಿತು ಕುಡಿದು, ಕುಡಿದ ಸ್ಥಳದಲ್ಲಿಯೇ ಬಾಟಲ್‌ಗ‌ಳನ್ನು ಬಿಸಾಕಿ ಹೋಗುತ್ತಿದ್ದಾರೆ.

ರಾತ್ರಿ ಕಾವಲುಗಾರನ ಕೊರತೆ:

Advertisement

ಕರ್ನಾಟಕ ಪಬ್ಲಿಕ್‌ ಶಾಲೆ ಕೂಡ ಆಗಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 200-300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ರಾತ್ರಿ ಪಾಳಿಗೆ ಸರ್ಕಾರ ಕಾವಲುಗಾರನನ್ನು ನೇಮಿಸದೇ ಇರುವುದೂ ಕುಡುಕರ ಹಾವಳಿಗೆ ಕಾರಣವಾಗಿದೆ. ಸರ್ಕಾರ ಶೀಘ್ರ ರಾತ್ರಿ ಕಾವಲು ಗಾರರನ್ನು ನೇಮಿಸಿದರೆ ಇಂತಹ ತೊಂದರೆ ಆಗದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಶಾಲಾ ಕಾಲೇಜು ಆವರಣ ಸುಮಾರು 15 ಎಕ್ಟೇರ್‌ ಗಿಂತಲೂ ಹೆಚ್ಚು ವಿಸ್ತೀರ್ಣವಿದ್ದು, ಈ ಶಾಲೆ ಹೊಯ್ಸಳರ ಕಾಲದ ಹೊಯ್ಸಳೇಶ್ವರ ಹೆಬ್ಟಾಲಿನ ಪಕ್ಕದ ಲ್ಲಿಯೇ ಇರುವು ದರಿಂದ ಸ್ವತ್ಛತೆ ಮತ್ತು ಸೌಂದರ್ಯ ಕಾಪಾಡಿ ಕೊಂಡಿರಬೇಕು. ಬರುವ ಪ್ರವಾಸಿಗರೂ ಇಲ್ಲಿಯ ಶಿಕ್ಷಣದ ಮಟ್ಟ, ಶಾಲಾ ವ್ಯವಸ್ಥೆಯ ಬಗ್ಗೆ ಮೆಚ್ಚುವ ರೀತಿಯಲ್ಲಿ ಶಾಲಾ ಪರಿಸರ ಇರಬೇಕು .ಅಂತಹ ಸ್ಥಿತಿ ಈ ಶಾಲೆಯಲ್ಲಿಲ್ಲ. ಸಚಿವ ಸುರೇಶ್‌ ಕುಮಾರ್‌ ಅವರು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಿದೆ.

ಕಾಂಪೌಂಡ್‌ ನಿರ್ಮಿಸಲು 24 ಲಕ್ಷ ರೂ. ಅವಶ್ಯ

ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಅವರು ಹಳೇಬೀಡಿಗೆ ಆಗಮಿಸಿದ ವೇಳೆ ಕಾಂಪೌಂಡ್‌ ವ್ಯವಸ್ಥೆಗೆ ಮನವಿ ಕೂಡ ಸಲ್ಲಿಸಲಾಗಿತ್ತು. ತಕ್ಷಣ ಸ್ಪಂದಿಸಿದ ಅವರು ಎಂಜಿನಿಯರ್‌ರನ್ನು ಕರೆದು ಎಸ್ಟಿಮೇಟ್‌ ಸಿದ್ಧಪಡಿಸಲು ಸೂಚಿಸಿದ್ದರು. ಆದರೆ, ದುರಾದೃಷ್ಟವಶಾತ್‌ ಕುಮಾರಸ್ವಾಮಿ ಅವರ ಸರ್ಕಾರ ಬಿದ್ದು ಹೋದ ಮೇಲೆ ಕಾಂಪೌಡ್‌ ವ್ಯವಸ್ಥೆಯೂ ನನೆಗುದಿಗೆ ಬಿದ್ದಿತು. ಸದ್ಯಕ್ಕೆ 20 ರಿಂದ 25 ಲಕ್ಷರೂ.ಹಣ ಸರ್ಕಾರದಿಂದ ಮಂಜೂರಾದರೆ ಕಾಂಪೌಂಡ್‌, ಗೇಟ್‌ ವ್ಯವಸ್ಥೆ ಮಾಡಿ ಕುಡುಕರ ಹಾವಳಿ ತಪ್ಪಿಸಬಹುದು ಎಂದು ಕರ್ನಾಟಕ ಪಬ್ಲಿಕ್‌ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಪ್ಪನಹಳ್ಳಿ ಸೋಮಶೇಖರ್‌ ತಿಳಿಸುತ್ತಾರೆ.

ಮದ್ಯ ಸೇವಿಸಲು ಚಾಪೆ ಹಾಸಿಕೊಟ್ಟಂತಾಗಿದೆ

100 ಮೀಟರ್‌ ಹೆದ್ದಾರಿಯಿಂದ ಹೊರಭಾಗದಲ್ಲಿ ಮದ್ಯದಂಗಡಿ ಇರಬೇಕೆಂಬ ರಾಷ್ಟ್ರೀಯ ಹೆದ್ದಾರಿ ನಿಯಮದ ಅನ್ವಯ ಮುಖ್ಯ ಹೆದ್ದಾರಿಯಲ್ಲಿದ್ದ ಮದ್ಯದಂಗಡಿ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ಇರುವ ಬಸದೀಹಳ್ಳಿ ರಸ್ತೆಗೆ ಸ್ಥಳಾಂತರ ಮಾಡಿದ್ದರಿಂದಾಗಿ, ಕುಡುಕರಿಗೆ ಕುಡಿಯಲು ಚಾಪೆ ಹಾಸಿಕೊಟ್ಟಂತಾಗಿದೆ. ನಿತ್ಯ ಒಂದೊಂದು ಪಾರ್ಟಿ ಹೆಸರಿನಲ್ಲಿ ಆವರಣದಲ್ಲಿಯೇ ಕುಡಿದು ತಿಂದು ಕಲಿಕಾ ಸ್ಥಳವನ್ನು ಅಪವಿತ್ರ ಗೊಳಿಸುತ್ತಿದ್ದಾರೆ.

ವ್ಯತಿರಿಕ್ತ ಪರಿಣಾಮ: ಕೆಟ್ಟ ಹವ್ಯಾಸಗಳ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕುತೂಹಲ ಕೆರಳಿಸುತ್ತಾ ಯುವಕರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಶಿಕ್ಷಕರು, ಉಪನ್ಯಾಸಕರು ಆತಂಕ ವ್ಯಕ್ತಪಡಿಸುತ್ತಾರೆ.

ಬೆಳಗ್ಗೆ ಎದ್ದು ಖುಷಿಯಿಂದ ವಿದ್ಯಾರ್ಥಿಗಳು ಶಾಲೆಗೆ ಕಲಿಯಲು ಬಂದರೆ ಮೊದಲು ಶಾಲೆ ಬಾಗಿಲಿನಲ್ಲಿಯೇ ಮದ್ಯದ ಬಾಟಲ್‌ಗ‌ಳ ದರ್ಶನವಾಗುತ್ತದೆ. ಇದರಿಂದ ನಮ್ಮ ಕಲಿಕಾ ಮನಸ್ಸಿನ ಮೇಲೆ ಕಟ್ಟ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸಮಸ್ಯೆಯನ್ನು ಪರಿಹರಿಸಬೇಕಿದೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿನಿ ಉಷಾ.

ಶಾಲಾ ಆವರಣದಲ್ಲಿ ರಾತ್ರಿ ವೇಳೆ ಕುಡುಕರ ಹಾವಳಿ ಸುಮಾರು ಹತ್ತಾರು ವರ್ಷಗಳಿಂದಲೂ ಇದೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದಯಮಾಡಿ ಸರ್ಕಾರ ರಾತ್ರಿ ಪಾಳಿ ಕಾವಲುಗಾರರನ್ನು ನೇಮಕ ಮಾಡಿ ಸಮಸ್ಯೆ ಪರಿಹರಿಸಿಕೊಡಬೇಕಿದೆ ಎನ್ನುತ್ತಾರೆ ಕರ್ನಾಟಕ ಪಬ್ಲಿಕ್‌ ಶಾಲೆ ಉಪಪ್ರಾಂಶುಪಾಲರು ಮುಳ್ಳಯ್ಯ.

Advertisement

Udayavani is now on Telegram. Click here to join our channel and stay updated with the latest news.

Next