Advertisement
ಇತ್ತೀಚೆಗೆ ಹಾಡಹಾಗಲೇ ಮನೆಗೆ ನುಗ್ಗಿ ನಿವೃತ್ತ ಯೋಧರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಸಹೋದರರು ಸೇರಿ ಆರು ಮಂದಿ ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
Related Articles
Advertisement
ಆಸ್ತಿ ವಿಚಾರ ಹೇಳಿಕೊಂಡಿದ್ದಕ್ಕೆ ಕೊಲೆ: ಮನೆಗೆ ಬರುತ್ತಿದ್ದ ಬಾಬು ಬಳಿ ಸುರೇಶ್, ಆಸ್ತಿ ವಿಚಾರದಲ್ಲಿ 40 ಲಕ್ಷ ರೂ. ಬರಬೇಕಿದೆ. ಜತೆಗೆ ಈ ಮನೆ ಮಾರಾಟ ಮಾಡಿ, ಬೇರೆಡೆ 80 ಲಕ್ಷ ರೂ.ಗೆ ದೊಡ್ಡ ಮನೆ ಖರೀದಿಸಬೇಕೆಂದು ಕೊಂಡಿದ್ದೇನೆ. ಅಲ್ಲದೆ, ಇಂದಿರಾನಗರದಲ್ಲಿ ಫ್ಲ್ಯಾಟ್ ಕೂಡ ಇದೆ ಎಂದು ಹೇಳಿಕೊಂಡಿದ್ದರು. ಮತ್ತೂಂದೆಡೆ ಆಂಧ್ರಪ್ರದೇಶದಲ್ಲಿ ಕೌಟುಂಬಿಕ ವಿಚಾರವಾಗಿ ಬಾಬು ಸಹೋದರರು ಸಾಲ ಮಾಡಿಕೊಂಡಿದ್ದರು. ಸುರೇಶ್‌ನ ಹಣಕಾಸಿನ ವಿಚಾರ ತಿಳಿದ ಬಾಬು, ಮನೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಆಂಧ್ರದಲ್ಲಿದ್ದ ಸಹೋದರ ಮುರಳಿ ಹಾಗೂ ಸೋದರ ಸಂಬಂಧಿಗಳಾದ ಮೂವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಲಕ್ಷಕ್ಕೆ ಬಂದವರು ಆರು ಸಾವಿರ ಕದ್ದು ಕೊಲೆಗೈದರು: ಏ.12ರಂದು ರಾತ್ರಿ ಸುರೇಶ್ ಮನೆಗೆ ಬಂದಿದ್ದ ಬಾಬು ಹಿಂಬಾಗಿಲ ಚೀಲಕ ತೆಗೆದು ಒಳ ಹೋಗಿದ್ದ. ನಂತರ ತನ್ನ ಸಹೋದರರಿಗೆ ಕರೆ ಮಾಡಿ, ಮನೆಯಲ್ಲಿ ಯಾರು ಇಲ್ಲ ಬರುವಂತೆ ಸೂಚಿಸಿದ್ದಾನೆ. ಅದಕ್ಕೂ ಮೊದಲು ಬಾಬು, ನಾಲ್ವರು ಆರೋಪಿಗಳಿಗೆ ಸಾಕ್ಷ್ಯ ನಾಶಪಡಿಸಲು ಗ್ಲೌಸ್ ಕೊಟ್ಟಿದ್ದ. ಬಳಿಕ ಹಿಂಬಾಗಿಲ ಮೂಲಕ ಬಂದ ಆರೋಪಿಗಳು, ಮೊದಲಿಗೆ ಸುರೇಶ್ ಗೆ ಹಣ, ಚಿನ್ನಾಭರಣ ಕೊಡುವಂತೆ ಸೂಚಿಸಿದ್ದಾರೆ. ಅವರು ಒಪ್ಪದಿದ್ದಾಗ, ಮುಖಕ್ಕೆ ಖಾರದ ಪುಡಿ ಎರಚಿ, ಮೂಗು, ಬಾಯಿಯನ್ನು ಟವೆಲ್‌ನಲ್ಲಿ ಮುಚ್ಚಿ, ಕತ್ತು ಹಿಸುಕಿ, ನಂತರ ಬೀಗದಿಂದ ತಲೆಗೆ ಹೊಡೆದಿದ್ದಾರೆ. ಸುರೇಶ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಂತರ ಮೃತದೇಹದ ಸುತ್ತ ಖಾರದ ಪುಡಿ ಎರಚಿ ಸಾಕ್ಷ್ಯ ನಾಶಪಡಿಸಿ, ಆ್ಯಪಲ್ ಮೊಬೈಲ್, ಆರು ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಮೊಬೈಲ್ ಎಸೆದು ಪರಾರಿ : ಸುರೇಶ್ ಕೊಲೆಗೈದ ಬಳಿಕ ಅವರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ ಹಂತಕರು, ಪೊಲೀಸರಿಗೆ ಸುಳಿವು ಸಿಗದಂತೆ ಮಾಡಲು ದೊಮ್ಮಲೂರು ಬಳಿಯ ಚರಂಡಿಯಲ್ಲಿ ಮೊಬೈಲ್, ಗ್ಲೌಸ್ ಎಸೆದಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಸುರೇಶ್‌ನ ವೈಯಕ್ತಿಕ ವಿಚಾರಕ್ಕೆ ಬಾಬು ನೆರವು : ಪ್ರಕರಣದ ಪ್ರಮುಖ ಆರೋಪಿ ಬಾಬು ಮತ್ತು ಸುರೇಶ್ ನಡುವೆ ಆತ್ಮೀಯತೆ ಇತ್ತು. ಸುರೇಶ್‌ಗೆ ಕೆಲವೊಂದು ವೈಯಕ್ತಿಕ ವಿಚಾರದಲ್ಲಿ ಆರೋಪಿ ಸಹಾಯ ಮಾಡುತ್ತಿದ್ದ. ಹೀಗಾಗಿ ತಾಯಿ ಮೃತಪಟ್ಟ ಬಳಿಕವೂ ಸುರೇಶ್, ಬಾಬು ಜತೆಗೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ. ಮತ್ತೂಂದೆಡೆ ವಿಚಾರಣೆ ಸಂದರ್ಭದಲ್ಲಿ ಬಾಬು ವರ್ತನೆ ಗಮನಿಸಿದರೆ ಈತ ತೃತೀಯ ಲಿಂಗಿ ಎಂಬ ಅನುಮಾನವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೆರೆ ಮನೆಯವರ ಸುಳಿವು : ಏ.12ರಂದು ರಾತ್ರಿ 9.30ರ ಸುಮಾರಿಗೆ ಬಾಬು ಮನೆಯಿಂದ ಹೋದ ಬಳಿಕ ಸುರೇಶ್, ಸ್ಥಳೀಯರೊಬ್ಬರ ಜತೆ ಮಾತನಾಡುವಾಗ ಬಾಬು ಮನೆಗೆ ಬಂದಿರುವ ವಿಚಾರ ತಿಳಿಸಿದ್ದರು. ಪೊಲೀಸರ ವಿಚಾರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಸುರೇಶ್ ಸಿಡಿಆರ್ ಆಧರಿಸಿ ಆರೋಪಿ ಪತ್ತೆ ಹಚ್ಚಿ ಮಾರತ್ತಹಳ್ಳಿಗೆ ಹೋದಾಗ, ಮನೆ ಖಾಲಿ ಮಾಡಿಕೊಂಡು ಹೋಗಲು ಯತ್ನಿಸಿದ್ದ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ನಂತರ ಈತನ ಹೇಳಿಕೆ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.