ಬದಿಯಡ್ಕ: ಕೇರಳ ರಾಜ್ಯದ ಹಣ್ಣುಗಳ ರಾಜ ಹಲಸು. “ಹಲಸು’ಗೆ ರಾಜ್ಯದಲ್ಲಿ ಶ್ರೇಷ್ಠ ಸ್ಥಾನವಿದೆ. ಒಂದು ಕಾಲದಲ್ಲಿ ಬಡವರ ಹಣ್ಣು ಎಂದು ಮೂಲೆಗುಂಪಾಗಿದ್ದ ಹಲಸು ಇಂದು ರಾಜನಂತೆ ತಲೆಯೆತ್ತಿ ನಿಂತಿದ್ದು, ಎಲ್ಲೆಡೆಯಿಂದ ಹಲಸಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಈ ನಿಟ್ಟಿನಲ್ಲಿ ಹಲಸಿನ ಮೌಲ್ಯವರ್ಧನೆಗಾಗಿ ಹಾಗೂ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಜೂನ್ 8ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಒಂದು ದಿನದ “ಹಲಸು ಮೇಳ’ ನಡೆಯಲಿರುವುದು.
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯ ವೃಂದದವರ ನೇತೃತ್ವದಲ್ಲಿ, ಬದಿಯಡ್ಕ ಮಹಿಳ್ಳೋದಯದ ಸಹಕಾರದೊಂದಿಗೆ ಹಲಸು ಮೇಳವು ನಡೆಯಲಿದೆ.
ಹಲಸು ಮೇಳದ ಪ್ರಚಾರಾರ್ಥ ಮಂಗಳವಾರ ಕಾಸರಗೋಡು, ಮುಳ್ಳೇರಿಯ, ಬದಿಯಡ್ಕ, ಕುಂಬಳೆ, ಸೀತಾಂಗೋಳಿ ಹಾಗೂ ಇನ್ನಿತರ ಪೇಟೆಗಳಲ್ಲಿ ಕಾರ್ಯಕರ್ತರು ಜೊತೆಗೂಡಿ ಆಮಂತ್ರಣ ಪತ್ರಿಕೆಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರುಕಟ್ಟೆಯ ಬಗ್ಗೆ ಸಿಪಿಸಿಆರ್‌ಐಯ ವಿಜ್ಞಾನಿ ಡಾ| ಸರಿತಾ ಹೆಗ್ಡೆ ಹಾಗೂ ಹಲಸಿನ ಕೃಷಿ ಮತ್ತು ಗೋವಿನ ಆಹಾರ ಎಂಬ ವಿಚಾರದಲ್ಲಿ ವೆಂಕಟಕೃಷ್ಣ ಶರ್ಮ ಮುಳಿಯ ಮಾಹಿತಿಯನ್ನು ನೀಡಲಿದ್ದಾರೆ. ಬೆಳಗ್ಗೆ 9.30ರಿಂದ ಸಂಜೆಯ ತನಕ ನಡೆಯಲಿರುವ ಮೇಳದಲ್ಲಿ ವಿವಿಧ ಸ್ಪರ್ಧೆಗಳೂ ನಡೆಯಲಿರುವುದು.