Advertisement

ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಲಪ್ಪ ಸೂಚನೆ

04:47 PM May 17, 2022 | Team Udayavani |

ಸಾಗರ: ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಕೇಶಿಯಾ ಸೇರಿದಂತೆ ಇತರ ಮರ ಕಡಿತಲೆಗೆ ಅರಣ್ಯ ಇಲಾಖೆ ಲಾರಿಗಳು ಕಾಡಿನೊಳಗೆ ಪ್ರವೇಶ ಮಾಡುವುದನ್ನು ನಿಷೇಧಿಸಬೇಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಂದೊಮ್ಮೆ ಲಾರಿಗಳನ್ನು ಅರಣ್ಯದೊಳಗೆ ಬಿಟ್ಟರೆ ಸಂಬಂಧಪಟ್ಟ ಇಲಾಖೆ ಅರಣ್ಯ ಇಲಾಖೆಗೆ ನೋಟಿಸ್ ನೀಡುವಂತೆ ಆದೇಶ ನೀಡಿದರು.

ನಾಟಾ ತುಂಬಿಕೊಂಡು ಬಂದ ಲಾರಿ ರಸ್ತೆಯ ಮೇಲೆ ಸಂಚಾರ ಮಾಡುವುದರಿಂದ ರಸ್ತೆ ಗುಂಡಿ ಬೀಳುವ ಜೊತೆಗೆ ಕಸಕಡ್ಡಿಗಳು ಚರಂಡಿಯಲ್ಲಿ ತುಂಬಿ ನೀರು ರಸ್ತೆಯ ಮೇಲೆ ಹರಿದು ಡಾಂಬಾರು ಕಿತ್ತುಕೊಂಡು ಹೋಗಿ ರಸ್ತೆ ಹಾಳಾಗುತ್ತಿದೆ. ಆದ್ದರಿಂದ ಜೂನ್‌ನಿಂದ ಮಳೆಗಾಲ ಮುಗಿಯುವ ತನಕ ಕಾಡಿಗೆ ವಾಹನಗಳನ್ನು ಬಿಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೂನ್ 5 ರಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮರಗಳನ್ನು ಕಡಿತಲೆ ಮಾಡಲಾಗಿದೆ. ಮರ ಕಡಿತಲೆ ಮಾಡಿದ್ದಕ್ಕೆ 10 ಪಟ್ಟು ಜಾಸ್ತಿ ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡುವತ್ತ ಚಿಂತನೆ ನಡೆಸಲಾಗಿದ್ದು, ಜೂನ್ ತಿಂಗಳು ಪೂರ್ಣ ಸಸಿ ನೆಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲ ಇಲಾಖೆಯ ಅಭಿಯಂತರರು ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

Advertisement

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೫೦ ಕೋಟಿ ರೂ. ಮಂಜೂರಾಗಿದೆ. ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಟೆಂಡರ್ ತಕ್ಷಣ ಕರೆದು ಕಾಮಗಾರಿ ಪ್ರಾರಂಭಿಸಿ ಎಂದು ಸೂಚನೆ ನೀಡಿದ ಶಾಸಕರು, ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಕೃಷಿ ಕುರಿತು ಅಗತ್ಯ ಮಾಹಿತಿ ನೀಡಬೇಕು. ಗೊಬ್ಬರ, ಬಿತ್ತನೆಬೀಜ ಸಂಗ್ರಹ ಮಾಡಿಕೊಳ್ಳುವ ಜೊತೆಗೆ ರೈತರಿಗೆ ಕಾಲಕಾಲಕ್ಕೆ ಪೂರೈಕೆ ಮಾಡುವತ್ತ ಗಮನ ಹರಿಸಬೇಕು. ಜೂನ್‌ನಿಂದ ಮೂರು ತಿಂಗಳುಗಳ ಕಾಲ ನದಿ ಕೆರೆಕಟ್ಟೆಗಳಲ್ಲಿ ಮೀನು ಹಿಡಿಯದಂತೆ ಕ್ರಮ ತೆಗೆದುಕೊಳ್ಳಿ. ಸ್ಲಂ ಬೋರ್ಡ್‌ನಿಂದ ನನಗೆ ಮತ್ತು ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತಿದೆ. ಮನೆ ನಿರ್ಮಾಣ ಕಾಮಗಾರಿ ಈತನಕ ಮುಗಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಶಾಲೆ ಅಂಗನವಾಡಿಗಳು ಪ್ರಾರಂಭಗೊಂಡಿದೆ. ಶಾಲಾ ಅಂಗನವಾಡಿ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿರಿಸಿಕೊಳ್ಳುವತ್ತ ಗಮನಹರಿಸಬೇಕು. ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶಾಲೆಯ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ. ವಿದ್ಯಾರ್ಥಿ ನಿಲಯ ನಿರ್ವಹಣೆ ಬಗ್ಗೆ ಸಹ ಹೆಚ್ಚಿನ ಗಮನ ಹರಿಸಿ. ಶಾಲಾಕಾಲೇಜು ಅಕ್ಕಪಕ್ಕ ದ್ವಿಚಕ್ರ ವಾಹನದಲ್ಲಿ ಮೂರರಿಂದ ನಾಲ್ಕು ಜನರು ಅತಿವೇಗವಾಗಿ ಸಂಚರಿಸುತ್ತಿದ್ದಾರೆ. ಕಾಲೇಜು ಆಸುಪಾಸಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಸವಾರರು ಪರವಾನಿಗೆ ಹೊಂದಿದ್ದಾರೋ ಎಂದು ಪರಿಶೀಲನೆ ನಡೆಸಿ. ಇಲ್ಲವಾದಲ್ಲಿ ದ್ವಿಚಕ್ರ ವಾಹನ ಸವಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರಿಗೆ ನೋಟಿಸ್ ಕೊಡಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next