ಸಾಗರ: ಕೆಪಿಸಿ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರುವುದು ಮತ್ತು ಸ್ಥಳೀಯರಿಗೆ ಕುಡಿಯುವ ನೀರು ಒದಗಿಸಲು ಮೀನಾಮೇಷ ಎಣಿಸುತ್ತಿರುವ ಕೆಪಿಸಿ ಅಧಿಕಾರಿಗಳ ಧೋರಣೆ ಖಂಡಿಸಿ ಮಂಗಳವಾರ ಆಡಳಿತ ಪಕ್ಷದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ನೇತೃತ್ವದಲ್ಲಿ ಕಾರ್ಗಲ್‌ನ ಕೆಪಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಂತರ ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಜಿ.ಸಿ.ಮಹೇಂದ್ರ ಮತ್ತು ವಿದ್ಯುತ್ ವಿಭಾಗದ ಮುಖ್ಯ ಅಭಿಯಂತರ ನಾರಾಯಣ ಪಿ. ಗಜಕೋಶ ಅವರು ಶಾಸಕರ ಜೊತೆ ಮಾತುಕತೆ ನಡೆಸಿ, ಮುಂದೆ ಇಂತಹ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ ಮೇಲೆ ಶಾಸಕರು ಧರಣಿಯನ್ನು ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಲಪ, ಕೆಪಿಸಿ ಅಧಿಕಾರಿಗಳು ಸ್ಥಳೀಯರಿಗೆ ಒಂದಿಲ್ಲೊಂದು ಕಾನೂನು ನೆಪ ಹೇಳಿ ತೊಂದರೆ ಕೊಡುತ್ತಿದ್ದಾರೆ. ಕೆಪಿಸಿಯವರು ನೆಲದ ಕಾನೂನಿಗೆ ಸಹ ಬೆಲೆ ಕೊಡದೆ ರೈತರು ಮತ್ತು ಸ್ಥಳೀಯರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಮರಳು ತೆಗೆಯುತ್ತಾರೆ ಎಂದು ಜನರಿಗೆ ತೊಂದರೆ ಕೊಡುವುದು, ರೈತರು ಕಲ್ಲಂಗಡಿ ಬೆಳೆಯುತ್ತಾರೆ ಎಂದು ಕಿರುಕುಳ ನೀಡುವುದು, ಶರಾವತಿ ನದಿಯಿಂದ ನೀರು ತೆಗೆದುಕೊಳ್ಳಬೇಡಿ, ಕೆಪಿಸಿ ಆಸ್ಪತ್ರೆಗೆ ಸಾರ್ವಜನಿಕರು ಬರಬಾರದು ಎಂದು ನೂರಾರು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಹಿಂದಿನ ಎಲ್ಲ ಮುಖ್ಯ ಅಭಿಯಂತರರು ಸ್ಥಳೀಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಈಗ ಬಂದಿರುವ ಅಧಿಕಾರಿ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ದೂರಿದರು.
ತಕ್ಷಣ ಕೆಪಿಸಿ ಅಧಿಕಾರಿಗಳು ಸ್ಥಳೀಯರ ಬದುಕಿಗೆ ಅಭದ್ರತೆ ತರುವ ರೀತಿಯಲ್ಲಿ ಯಾವತ್ತೂ ವರ್ತನೆ ತೋರಬಾರದು. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಕೆಪಿಸಿ ವಾಹನದಲ್ಲಿ ಶಾಲಾಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸಲು ಅವಕಾಶ ಮಾಡಿಕೊಡಬೇಕು. ರೈತರು ಸಣ್ಣಪುಟ್ಟ ಬೆಳೆ ತೆಗೆಯುವ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು. ಇದಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ. ಇನ್ನೊಮ್ಮೆ ಅಧಿಕಾರಿಗಳಿಂದ ಇಂತಹ ವರ್ತನೆ ಮುಂದುವರೆದರೆ ಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಪಣಜಿ : ಕೋವಿಡ್ ಪ್ರಕರಣ ಗಣನೀಯ ಏರಿಕೆ, 10,000 ಗಡಿ ದಾಟಿದ ಸಕ್ರೀಯ ಪ್ರಕರಣ
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರೈತರು ತ್ಯಾಗ ಮಾಡಿದ ಭೂಮಿಯಲ್ಲಿ ಕೆಪಿಸಿ ಕಾರ್ಯನಿರ್ವಹಿಸುತ್ತಿದೆ. ಅವರ ಭೂಮಿಯಲ್ಲಿದ್ದು ಅವರಿಗೆ ತೊಂದರೆ ಕೊಡುವುದು ಅಕ್ಷಮ್ಯ ಅಪರಾಧ. ರೈತರ ನೆಮ್ಮದಿಗೆ ಭಂಗ ತರುವ ಪ್ರಯತ್ನ ಮಾಡಬಾರದು. ರೈತರು ಮತ್ತು ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಶಾಸಕರು ಧರಣಿ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಧರಣಿಗೆ ಮಣಿದ ಅಧಿಕಾರಿಗಳು ರೈತರಿಗೆ ಕಿರಕುಳ ನೀಡುವುದಿಲ್ಲ. ಚಾನಲ್ ರಿಪೇರಿ ಆಗುವವರೆಗೂ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಕೆಪಿಸಿಯವರೇ ಕುಡಿಯುವ ನೀರು ಪೂರೈಕೆ ಮಾಡಬೇಕು. ಕಸಬಾ ಮತ್ತು ಆವಿನಹಳ್ಳಿ ಹೋಬಳಿಗೆ ಶರಾವತಿ ನದಿಯಿಂದ ಕುಡಿಯುವ ನೀರು ಪೂರೈಕೆಗೆ ತಕ್ಷಣ ಸಹಕಾರ ನೀಡಬೇಕು ಎನ್ನುವ ಶಾಸಕರ ಮಾತಿಗೆ ಕೆಪಿಸಿ ಅಧಿಕಾರಿಗಳು ಒಪ್ಪಿದ್ದರಿಂದ ಧರಣಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಮಂಜುನಾಥ್ ಪಿ., ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ತುಕಾರಾಮ್, ದೇವೇಂದ್ರಪ್ಪ, ಬಿ.ಎಚ್.ಲಿಂಗರಾಜ್, ಅರವಿಂದ ರಾಯ್ಕರ್, ಸುರೇಶ್ ಟಿ., ವಾಟೆಮಕ್ಕಿ ನಾಗರಾಜ್, ಸಂತೋಷ್ ಶೇಟ್, ನಾಗೇಂದ್ರ ಮಹಾಲೆ, ಲಕ್ಷ್ಮೀರಾಜು, ಲಕ್ಷ್ಮೀಪತಿ ಇನ್ನಿತರರು ಹಾಜರಿದ್ದರು.