Advertisement

ಗಾಂಜಾ ಮಾರಾಟ ಜಾಲದ ಮೂಲ ಭೇದಿಸಲು ಶಾಸಕ ಹಾಲಪ್ಪ ಸೂಚನೆ

05:39 PM Aug 01, 2022 | Team Udayavani |

ಸಾಗರ: ಗಾಂಜಾ ಬೆಳೆಯುವ ರೈತನನ್ನು ಹಿಡಿದು ಕೇಸು ಹಾಕುವುದು, ಸ್ಥಳೀಯವಾಗಿ ಗಾಂಜಾ ಮಾರುವವನನ್ನು ಹಿಡಿದು ಪ್ರಕರಣ ದಾಖಲಿಸುವುದು ನಡೆಯುತ್ತಿದೆ. ಇವುಗಳಿಂದ ಗಾಂಜಾ ಜಾಲಕ್ಕೆ ಏನೂ ಆಗುವುದಿಲ್ಲ. ಇದನ್ನು ಬೇರು ಸಮೇತ ತಾಲೂಕಿನಿಂದ ದೂರವಿಡಲು ಪೊಲೀಸ್ ಇಲಾಖೆ ಗಾಂಜಾ ತಯಾರಿಕೆಗೆ ಮೂಲಗಳನ್ನು ಬೇಧಿಸಬೇಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸೂಚನೆ ನೀಡಿದರು.

Advertisement

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಣದ ಆಸೆಗೆ ಬಡಪಾಯಿ ರೈತ ಕಚ್ಚಾ ಗಾಂಜಾವನ್ನು ಬೆಳೆದು ಮಾರುತ್ತಾನೆ. ಸಿದ್ಧ ಗಾಂಜಾವನ್ನು ಇಲ್ಲಿ ಯಾರೋ ವ್ಯಾಪಾರ ಮಾಡುತ್ತಾರೆ. ಇವರ ಮೇಲೆ ಕೇಸ್ ಹಾಕಿದರೂ ಆ ಗಾಂಜಾ ಜಾಲದ ಪ್ರಮುಖ ಬೇರೆಯವರನ್ನು ಹಿಡಿದು ವ್ಯಾಪಾರ ಮುಂದುವರೆಸುತ್ತಾನೆ. ಅದರ ಬದಲು ಸಮಗ್ರವಾದ ತನಿಖೆ ನಡೆಸಿ ಗಾಂಜಾ ಜಾಲದ ಬೇರುಗಳನ್ನು ಕತ್ತರಿಸಿ ಎಂದರು.

ಶರಾವತಿ ಹಿನ್ನೀರಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗ ೪ ಅಂಬುಲೆನ್ಸ್ ಇದೆ. 108 ಸೇವೆ ಇಲ್ಲವೆನ್ನುವ ಕಾರಣಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ಸ್ಥಳೀಯರಿಗೆ ಸರಿಯಾದ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ 108 ಸೇವೆ ಇಲ್ಲ ಎನ್ನುವುದರ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡಿನ ರೈತರು ಕಾಡು ಉಳಿಸಿದ್ದಾರೆಯೇ ವಿನಾ ಅರಣ್ಯ ಇಲಾಖೆ ಕಾಡು ಉಳಿಸಿಲ್ಲ. ಕಾಡು ಉಳಿಸಿದ ರೈತರ ಮಕ್ಕಳ ಕೈಗೆ ಸ್ಲೇಟ್ ನೀಡಿ ಭಯೋತ್ಪಾದಕರ ರೀತಿ ಬಿಂಬಿಸಿ ಫೋಟೋ ಹೊಡೆಸಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಖಂಡನೀಯ. ಈ ಬಗ್ಗೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಹ ವ್ಯಾಪಕ ಚರ್ಚೆಯಾಗಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮಕ್ಕಳ ಬಗ್ಗೆ ಇಲ್ಲಸಲ್ಲದ ಕೇಸ್‌ಗಳನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಆಂಧ್ರ ಮಾಜಿ ಸಿಎಂ ಎನ್ ಟಿಆರ್ ಪುತ್ರಿ ಕಾಂತಮನೇನಿ ಉಮಾ ಮಹೇಶ್ವರಿ ಆತ್ಮಹತ್ಯೆ

Advertisement

ವಿದ್ಯುತ್ ಸಂಪರ್ಕ ಸಿಗುತ್ತದೆ ಎಂದು ಅವರು ಮರ ಕಡಿದಿರಬಹುದು. ೩೦ ಮರ ಕಡಿದಿದ್ದರೆ ೩೦೦ ಮರಗಳನ್ನು ನೆಡುವ ಸೀಡ್‌ಬಾಲ್, ಬೀಜಗಳನ್ನು ಕೊಟ್ಟು ಅವರನ್ನು ಕೆಲಸಕ್ಕೆ ಹಚ್ಚಬಹುದಿತ್ತು. ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸುವ ಯೋಜನೆಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಡಿಪಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹಾಲಪ್ಪ ಸೂಚಿಸಿದರು.

ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕೆಡಿಪಿ ಸದಸ್ಯ ಮಂಜಯ್ಯ ಜೈನ್, ರೈತರನ್ನು ದೇಶದ್ರೋಹಿಗಳಂತೆ ಚಿತ್ರಿಸುವ ಪ್ರಯತ್ನ ನಡೆಸಿದ ಅಧಿಕಾರಿಗಳ ಕ್ರಮ ಖಂಡನೀಯ. ಅರಣ್ಯ ಇಲಾಖೆ ಅಧಿಕಾರಿಗಳು ಅಮಾಯಕರಿಗೆ ಹಿಂಸೆ ನೀಡುವ ಜೊತೆಗೆ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವಾಸ್ತವವಾಗಿ ಅವರು ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರ ಕಡಿದಿದ್ದು ಬಿಟ್ಟರೆ ಬೇರೆ ತಪ್ಪು ಮಾಡಿರಲಿಲ್ಲ. ಪ್ರಕರಣವನ್ನು ಅರಣ್ಯ ಇಲಾಖೆಯಿಂದ ತನಿಖೆ ಮಾಡಿಸಿದರೆ ಅಮಾಯಕರಿಗೆ ನ್ಯಾಯ ಸಿಗುವುದಿಲ್ಲ. ಬೇರೆ ತನಿಖಾ ಸಂಸ್ಥೆ ಮೂಲಕ ಪ್ರಕರಣದ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಮಲ್ಲಪ್ಪ ಕೆ. ತೊದಲಬಾವಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಕೆಡಿಪಿ ಸದಸ್ಯರಾದ ಗೌತಮ ಎಸ್., ಪಶುಪತಿ, ದೇವೇಂದ್ರಪ್ಪ, ಸುವರ್ಣಾ ಟೀಕಪ್ಪ, ಈಶ್ವರ ಡಿ.ಎಚ್., ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಶಾಸಕ ಹಾಲಪ್ಪ ಅಣಿಮುತ್ತುಗಳು….
– ಕೆಲವರಿಗೆ ಪ್ರತಿ ವರ್ಷ ಅತಿವೃಷ್ಟಿಗೆ ಪರಿಹಾರ ಕೊಡುವ ಕಾರ್ಯಕ್ರಮವಿರುತ್ತದೆ. ಇದಕ್ಕೆ ಮಾಡಬೇಕಾಗಿರುವುದು ಕಂಪ್ಯೂಟರ್‌ನ ಕಾಪಿ, ಪೇಸ್ಟ್ ಕೆಲಸವಷ್ಟೇ!
– ಜಾನುವಾರುಗಳಿಗೆ ಕಾಲೊಡೆ, ಬಾಯೊಡೆ ಜ್ವರ ಬಂದಾಗ ಔಷಧ ಕೊಡಬೇಕೇ ಅಥವಾ ಔಷಧ ಸರಬರಾಜಾದಾಗ ಜ್ವರ ಬರಬೇಕೆ?
– ನಾಯಿಯ ಮೇಲಿನ ಕೂದಲು ಉದುರಿ ಹುಣ್ಣವಾಗುವ ಸಮಸ್ಯೆಗೆ ನಿರ್ದಿಷ್ಟ ಮಾತ್ರೆಯಿದೆ. ಅದು ಕೊಟ್ಟರೆ ಅದರ ಆರೋಗ್ಯ ಸುಧಾರಿಸುತ್ತದೆ. ಹುಣ್ಣಾದ ನಾಯಿ ನಮ್ಮ ಪಿಎಗೂ ಕಚ್ಚಿತ್ತು. ಇದರ ಮಾಹಿತಿ ಇಲ್ಲ ಎಂದು ಪಶು ಇಲಾಖೆಯ ಡಾಕ್ಟ್ರಾಗಿ ಹೇಳುತ್ತಿದ್ದೀರಿ. ನೀವು ಹಳೇ ಡಾಕ್ಟ್ರು, ಕಾಯಿಲೆ ಹೊಸದು!
– ಬಡವರಿಗೆ ಸಹಾಯ ಮಾಡಿದ್ದಾರೆ ಎಂದು ಈವರೆಗೆ ಯಾವ ಅಧಿಕಾರಿಯೂ ಸಸ್ಪೆಂಡ್ ಆಗಿಲ್ಲ. ಇಡಿಗಂಟು ಹೊಡೆಯಲು ಹೋಗಿ ಕೆಲವರು ಅಮಾನತ್ ಆಗಿದ್ದಾರಷ್ಟೇ!
– ಕಾನೂನಿಗಾಗಿ ನಾವು ಬದುಕುತ್ತಿದ್ದೇವೆಯೇ ಅಥವಾ ಬದುಕುವುದಕ್ಕಾಗಿ ಕಾನೂನುಗಳಿವೆಯೇ? ಕಸ್ತೂರಿ ರಂಗನ್ ವರದಿ ಇನ್ನೂ ಜಾರಿಯಾಗಿಲ್ಲ, ನೆನಪಿರಲಿ….

Advertisement

Udayavani is now on Telegram. Click here to join our channel and stay updated with the latest news.

Next