ಸಾಗರ: ಹಾಲಿ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಮತ್ತು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರಮಾಣ ಮಾಡಿದರು. ಶಾಸಕ ಹಾಲಪ್ಪ ಬೆಳಿಗ್ಗೆ 8ರ ಸುಮಾರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು, ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪೂರ್ವಘೋಷಣೆಯಂತೆ ಬೆಳಿಗ್ಗೆ 10ರ ಸಮಯದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಬೇಳೂರು ಕೂಡ ದೇವರ ದರ್ಶನ ಮಾಡಿ ಪ್ರಮಾಣ ಮಾಡಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಹಾಲಪ್ಪ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ತಾವು ಆತ್ಮಸಾಕ್ಷಿಯಾಗಿ ಲಾರಿ ಮಾಲೀಕರು ಮತ್ತು ಸಾಗಾಣಿಕೆದಾರರಿಂದ ಯಾವುದೇ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ ಬಂದಿದ್ದೇನೆ. ಹಿಂದೆ ಬೇಳೂರು ನಾನು ಹೊಸನಗರ-ಸಾಗರ ಮರಳು ಸಾಗಾಣಿಕೆ ಲಾರಿ ಮಾಲೀಕರಿಂದ ಕಮೀಷನ್ ಪಡೆಯುತ್ತಿದ್ದೇನೆ ಎಂದು ಆರೋಪ ಮಾಡಿದ್ದರು. ನಾನು ಹಣ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದೆ. ಆದರೆ ಅವರಿಗೆ ಸಮಾಧಾನವಾಗದೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದರು. ನಾನು ಆಹ್ವಾನ ಸ್ವೀಕರಿಸಿ ಫೆ. 12ಕ್ಕೆ ಧರ್ಮಸ್ಥಳಕ್ಕೆ ಬರುತ್ತೇನೆ ಎಂದು ಹೇಳಿದ್ದೇನೆ. ಅದರ ಪ್ರಕಾರ ಇಂದು ಧರ್ಮಸ್ಥಳಕ್ಕೆ ಬಂದು ದೇವರ ಎದುರು ನಾನು ಸಾಗರ, ಹೊಸನಗರ ಮರಳು ಸಾಗಾಣಿಕೆದಾರರಿಂದ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದರು.
ಮೊದಲು ನನ್ನ ಬಗ್ಗೆ ಆರೋಪ ಮಾಡಿದ್ದ ಅವರು ನಂತರ ನನ್ನ ಅಣ್ಣನ ಮಗ ಬಿ.ಟಿ.ರವೀಂದ್ರ ಮತ್ತು ನನ್ನ ಬಾಲ್ಯ ಸ್ನೇಹಿತ ವಿನಾಯಕರಾವ್ ಹಣ ಪಡೆದಿದ್ದಾರೆ ಎಂದು ಪಲಾಯನ ಮಾಡುವ ಪ್ರಯತ್ನ ನಡೆಸಿದ್ದರು. ಇವತ್ತು ಅವರು ಸಹ ನನ್ನ ಜೊತೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿದ್ದಾರೆ. ನಾನಾಗಲಿ, ನನ್ನ ಅಣ್ಣನ ಮಗನಾಗಲಿ, ವಿನಾಯಕರಾವ್ ಆಗಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದೇವೆ. ಮಾಜಿ ಶಾಸಕರು ನಾನು ಗೋವಾ ಚುನಾವಣೆಗೆ ಹೋಗುತ್ತಿದ್ದೇನೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ನಾನು ಗೋವಾ ಚುನಾವಣಾ ಪ್ರಚಾರ ಮುಗಿದಿದೆ. ಗೋವಾಕ್ಕೆ ಏಕೆ ಹೋಗುತ್ತೀರಿ ಎಂದು ಪ್ರಶ್ನೆ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 12ಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ನಾನು ಹಣ ಪಡೆದಿದ್ದಕ್ಕೆ ದಾಖಲೆ ಇದ್ದರೆ ನನ್ನ ವಿರುದ್ದ ಪ್ರಕರಣ ದಾಖಲು ಮಾಡಲಿ. ಸತ್ಯನಿಷ್ಟೆ, ಪ್ರಾಮಾಣಿಕತೆಗೆ ಧರ್ಮಸ್ಥಳ ಹೆಸರು ವಾಸಿಯಾಗಿದೆ. ನನ್ನ ಆತ್ಮಶುದ್ಧಿಗಾಗಿ, ಪ್ರಾಮಾಣಿಕತೆಗಾಗಿ ನಾನು ಪ್ರಮಾಣ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಯುದ್ಧ ಸನ್ನಿವೇಶ : ಪುತಿನ್-ಬಿಡೆನ್ ಉನ್ನತ ಮಟ್ಟದ ದೂರವಾಣಿ ಮಾತುಕತೆ
ಮಧ್ಯಾಹ್ನ 12ರ ಸುಮಾರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಪತ್ರಕರ್ತರ ಜೊತೆ ಮಾತನಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಹಲವು ದಿನಗಳ ವಾದವಿವಾದವನ್ನು ಇಂದು ಅಂತ್ಯಗೊಳಿಸಿದ್ದೇವೆ. ಆದರೆ ಹಾಲಿ ಶಾಸಕರು ನಾವು ಬಂದಾಗ ಇರಬೇಕಾಗಿತ್ತು. ಆದರೆ ಅವರು ಬಂದುಹೋಗಿದ್ದಾಗಿ ಗೊತ್ತಾಗಿದೆ. ಧರ್ಮಸ್ಥಳ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ. ನೋಟಿಸ್ ಕೊಟ್ಟವರು ನಾವು ಬರುವ ತನಕ ಕಾಯಬೇಕಾಗಿತ್ತು ಎಂದರು.
ನಾನು ವಿರೋಧ ಪಕ್ಷದವನಾಗಿ ಮರಳು ಸಾಗಾಣಿಕೆದಾರರಿಂದ ಶಾಸಕರು ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದೇನೆ. ಹಣ ಕೊಟ್ಟವರು ಸಹ ಇವತ್ತು ನನ್ನ ಜೊತೆ ಬಂದಿದ್ದಾರೆ. ಅವರು ಪ್ರಮಾಣ ಮಾಡಿದ್ದಾರೆ ಎಂದರೆ ದೇವರು ನೋಡಿಕೊಳ್ಳುತ್ತಾನೆ. ನಾನು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಮರಳು ಲಾರಿಗಳಿವೆ. ಈ ಪೈಕಿ 30 ಜನರು ಅವರ ಪರ ಸಾಕ್ಷಿ ಹೇಳಬಹುದು. ಉಳಿದವರು ನಮ್ಮ ಪರ ಸಾಕ್ಷಿ ಹೇಳಲು ಸಿದ್ದರಿದ್ದಾರೆ ಎಂದರು.
ಶಾಸಕರು ನಮ್ಮ ಸಮಯಕ್ಕೆ ಬರದೆ ಬೇಗನೆ ವಾಪಾಸು ತೆರಳಿದ್ದಾರೆ. ಪಲಾಯನವಾದ ಅವರೇ ಮಾಡಿದ್ದಾರೆ. ದೇವರ ಎದುರು ಪ್ರಮಾಣ ಮಾಡಿದ್ದೇವೆ. ಆ ಈಶ್ವರನೇ ಸಾಕ್ಷಿಯಾಗಿ ಆಗಬೇಕಾದ ಶಿಕ್ಷೆ ಆಗುತ್ತದೆ ಎಂದರು.