ಸಾಗರ : ಗಣಪತಿ ಕೆರೆ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಯಡಿ 6 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಮಾರಿಕಾಂಬಾ ಜಾತ್ರೆಯೊಳಗೆ ಗಣಪತಿ ಕೆರೆಯನ್ನು ಸರ್ವಋತು ಪ್ರವಾಸಿತಾಣವಾಗಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಭಿಯಂತರರ ಜೊತೆ ಬುಧವಾರ ಸಭೆ ನಡೆಸಿ, ಗಣಪತಿ ಕೆರೆ ಪ್ರದೇಶವನ್ನು ವೀಕ್ಷಣೆ ಮಾಡಿ ಅವರು ಮಾತನಾಡುತ್ತಿದ್ದರು.
ಈತನಕ ಸರ್ಕಾರ ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಹಣ ವಿನಿಯೋಗ ಮಾಡಿರಲಿಲ್ಲ. ಇದೀಗ ಸರ್ಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಕೆರೆ ಸುತ್ತಲೂ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್, ಶೌಚಾಲಯ, ಕಾರಂಜಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಕೆರೆ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಬೇಕಾದರೆ ಹೆಚ್ಚುವರಿಯಾಗಿ ಮತ್ತೆ 10 ಕೋಟಿ ರೂಪಾಯಿ ಮುಂದಿನ ವರ್ಷದೊಳಗೆ ತರಲಾಗುತ್ತದೆ ಎಂದರು.
ಕೆಲಸವನ್ನು ಲ್ಯಾಂಡ್ ಆರ್ಮಿ, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು, ನಗರವ್ಯಾಪ್ತಿಯಲ್ಲಿ ಕೆರೆ ಬರುವುದರಿಂದ ನಗರಸಭೆ ಇದರ ಮೇಲಸ್ತುವಾರಿಯನ್ನು ನೋಡಿಕೊಳ್ಳಲಿದೆ. ಸೊರಬ ರಸ್ತೆ ಅಗಲೀಕರಣದಲ್ಲಿ 50 ಕೋಟಿ ರೂ. ಭೂಸ್ವಾಧೀನಕ್ಕೆ, 10 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಹಣ ಇದೆ. ಸ್ಥಳೀಯರು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡಬೇಕು ಎಂದು ಮನವಿ ಮಾಡಿದ ಶಾಸಕರು, ಭೀಮನಕೋಣೆ-ಹೊಸನಗರ ಮತ್ತು ಕೆಳದಿ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಮಾರ್ಪಡಿಸಲು 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ಬೋರ್ ವೆಲ್ ಸ್ಟಾರ್ಟರ್ ರಿಪೇರಿ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವು
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗೇಶ್, ಜಿಲ್ಲಾ ಪಂಚಾಯ್ತಿ ಕಾರ್ಯಪಾಲಕ ಅಭಿಯಂತರ ಹಾಲೇಶಪ್ಪ, ನಿರ್ಮಿತಿ ಕೇಂದ್ರದ ನಾಗರಾಜ್, ಲೋಕೋಪಯೋಗಿ ಇಲಾಖೆಯ ಜಗದೀಶಯ್ಯ, ಪರಶುರಾಮ್, ಶ್ರೀಪಾದ್, ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.