ಸಾಗರ : ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಸುಸಜ್ಜಿತವಾದ 6 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಲಕರಣೆ ಕಿಟ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಭವನ ನಿರ್ಮಾಣಕ್ಕೆ ರಾಮನಗರದಲ್ಲಿ ಜಾಗ ಗುರುತಿಸುವ ಪ್ರಯತ್ನ ನಡೆಸಲಾಗುತ್ತಿದೆ. ಭವನದ ಮೂಲಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಕ್ಕು ಮತ್ತು ಹೋರಾಟ ಕುರಿತು ಚಿಂಥನಮಂಥನ ನಡೆಸಲು ಸಾಧ್ಯವಿದೆ. ಕಾರ್ಮಿಕರ ಮಕ್ಕಳ ಮದುವೆ ಸೇರಿದಂತೆ ಶುಭ ಸಮಾರಂಭ, ಸಭೆ ಇನ್ನಿತರೆ ಚಟುವಟಿಕೆಯ ಕೇಂದ್ರವಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಆರು ಕೋಟಿ ರೂಪಾಯಿ ಜೊತೆಗೆ ಹೆಚ್ಚಿನ ಹಣವನ್ನು ಸಹ ಸರ್ಕಾರದಿಂದ ತರುವ ಪ್ರಯತ್ನ ನಡೆಸಲಾಗುತ್ತಿದ್ದು, ಮುಂದಿನ ಒಂದು ತಿಂಗಳಿನೊಳಗೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಅನಧಿಕೃತ ಸಮಿತಿಯಿಂದ ಮಾರಿಕಾಂಬಾ ದೇವಸ್ಥಾನ ನಿರ್ವಹಣೆ ; ಎಂ.ನಾಗರಾಜ್ ಆರೋಪ
ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರು ಮತ್ತು ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ದೇಶದ ನಾಡಿಮಿಡಿತ ಇದ್ದಂತೆ. ಈ ಮೂರು ವರ್ಗಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದು ಆಳುವವರ ಆದ್ಯ ಕರ್ತವ್ಯ. ದೇಶದ ೧೩೩ ಕೋಟಿ ಜನರಿಗೆ ವಸತಿ ನಿರ್ಮಾಣ ಮಾಡಿಕೊಡುವ ಹೊಣೆ ಹೊತ್ತಿರುವ ಕಟ್ಟಡ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಇದು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಖಾತೆ ನಿಭಾಯಿಸುತ್ತಿದ್ದಾರೆ. ಕಾರ್ಮಿಕರಿಗೆ ಕೊಡುವ ಸೌಲಭ್ಯಗಳು ಭಿಕ್ಷೆಯಲ್ಲ. ಅದು ನಿಮ್ಮ ಹಕ್ಕು ಆಗಿದ್ದು, ಸಂಘಟನಾತ್ಮಕವಾಗಿದ್ದಾಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಸ್ವಾಮಿರಾವ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಕೆ.ಆರ್.ಗಣೇಶಪ್ರಸಾದ್, ಕಾರ್ಮಿಕ ಮುಖಂಡ ಶಿವಾನಂದ ಕುಗ್ವೆ, ಸಂಜಯ್ ಕುಮಾರ್, ಶಿಲ್ಪ, ಅಣ್ಣಪ್ಪ ಹಾಜರಿದ್ದರು.