Advertisement

ಬೇಡಿಕೆ ಇಡಲ್ಲ, ಕೊಟ್ಟರೆ ಸಮರ್ಥವಾಗಿ ನಿರ್ವಹಿಸುವೆ ; ಸಚಿವ ಸ್ಥಾನಕ್ಕೆ ಹಾಲಪ್ಪ ಆಕಾಂಕ್ಷೆ

04:33 PM Apr 19, 2022 | Team Udayavani |

ಸಾಗರ: ನಾನು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇರಿಸಿಲ್ಲ. ಆದರೆ ಸಚಿವ ಸ್ಥಾನವನ್ನು ಪಕ್ಷ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ತಹಶೀಲ್ದಾರ್ ಕಚೇರಿ ಸಮುಚ್ಛಯವನ್ನು ಮಂಗಳವಾರ ಪರಿಶೀಲನೆ ನಡೆಸಿ ಪತ್ರಕರ್ತರ ಜೊತೆ ನಡೆಸಿ ಮಾತನಾಡಿದ ಅವರು, ಅಂತಿಮವಾಗಿ ನಾನು ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದರು.

ಜಿಲ್ಲೆಯಲ್ಲಿ ಆರಗ ಜ್ಞಾನೇಂದ್ರ ಮತ್ತು ಕೆ.ಎಸ್.ಈಶ್ವರಪ್ಪರಂತಹ ಇಬ್ಬರು ದಕ್ಷ ಸಚಿವರು ಇದ್ದರು. ಆದರೆ ರಾಜಕೀಯ ಮೇಲಾಟ ಮತ್ತು ವಿರೋಧಿಗಳ ಷಡ್ಯಂತ್ರದಿಂದ ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈಗಾಗಲೇ ಈಡಿಗ ಕೋಟಾದಡಿ ಇಬ್ಬರು ಸಚಿವರು ಇದ್ದಾರೆ. ಅವರು ಘಟ್ಟದ ಕೆಳಗಿನವರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಇನ್ನೊಂದು ಸಚಿವ ಸ್ಥಾನ ಕೊಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಇದು ಚುನಾವಣೆ ವರ್ಷವಾಗಿದ್ದು, ವರಿಷ್ಠರು ಅವಕಾಶ ನೀಡಿದರೆ ಸಮರ್ಥವಾಗಿ ಸಚಿವ ಸ್ಥಾನ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಶಿವಮೊಗ್ಗ ಪ್ರವಾಸದಲ್ಲಿದ್ದು ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಗರ್‌ಹುಕುಂ, ಅರಣ್ಯ ಹಕ್ಕು, ಕರೂರು ಭಾರಂಗಿ ಹೋಬಳಿಯ ನೆಟ್‌ವರ್ಕ್, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗುತ್ತದೆ. ಸಾಗರ ನಗರಸಭೆಗೆ ವಿಶೇಷ ಅನುದಾನ ತರುವ ನಿಟ್ಟಿನಲ್ಲಿ ಸಹ ಮನವಿ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಸಂತೋಷ ಪಾಟೀಲ ಮನೆಗೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್

Advertisement

ಹಿಂದೆ ಮಿನಿ ವಿಧಾನಸೌಧ ಅಥವಾ ತಹಶೀಲ್ದಾರ್ ಕಚೇರಿ ಸಂಕೀರ್ಣ ಕಟ್ಟಿ 25 ವರ್ಷದೊಳಗೆ ಬೀಳುವ ಸ್ಥಿತಿಗೆ ತಲುಪಿತ್ತು. ನನ್ನ ಅವಧಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಹಿಂದೆ 8.65 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಚುನಾವಣಾ ಶಾಖೆ, ಸಬ್ ರಿಜಿಸ್ಟ್ರಾರ್, ಸರ್ವೇ ಇಲಾಖೆ, ಅಬ್ಕಾರಿ ಸೇರಿದಂತೆ ಬಹುತೇಕ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಹೆಚ್ಚುವರಿಯಾಗಿ ನಾಲ್ಕು ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ವರ್ಷದೊಳಗೆ ಕಚೇರಿ ಸಂಕೀರ್ಣ ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಗಣೇಶಪ್ರಸಾದ್, ಬಿ.ಎಚ್.ಲಿಂಗರಾಜ್, ಡಿ.ತುಕಾರಾಮ್, ಸಂತೋಷ್ ಶೇಟ್, ಸತೀಶ್ ಕೆ., ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶಯ್ಯ, ಎಚ್.ಕೆ.ನಾಗಪ್ಪ, ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ, ಬಿ.ಟಿ.ರವೀಂದ್ರ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next