ಶಿವಮೊಗ್ಗ : ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹಿನ್ನಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ದ ಬಹಿರಂಗ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಾಗರ ಕ್ಷೇತ್ರದ ಟಿಕೆಟ್ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣಗೆ ಅಂತಿಮ ವಾಗಿದೆ ಎನ್ನಲಾಗಿದ್ದು ಹಾಲಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಸಮಧಾನವನ್ನು ಹೊರಹಾಕಿದ್ದಾರೆ. ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕುವ ಕೆಲಸ ನಡೆದಿದ್ದು, ಅವರು ನಮ್ಮ ಕೈ ಕಟ್ಟಿ ಹಾಕಿದ್ದಾರೆ ಎಂದರು.
ನಾನು ಸಾಗರದಲ್ಲೇ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸವನ್ನು ಮಾಡಿರುತ್ತೇನೆ. ನನ್ನ ಜಮೀನು ಕೂಡ ಇಲ್ಲೇ ಇದೆ. ನಾನು ಬೇರೆ ಕ್ಷೇತ್ರದಿಂದ ಬಂದವನಲ್ಲ ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಬೈದವರಿಗೆ ಟಿಕೆಟ್ ಸಿಗುತ್ತದೆ, ಈಶ್ವರಪ್ಪಗೆ ಮೂರು ವೋಟು ಬೀಳುವುದಿಲ್ಲ ಎಂದವರಿಗೆ ಟಿಕೆಟ್ ಸಿಗುತ್ತದೆ. ಸಂಘಪರಿವಾರಕ್ಕೆ ಬೈದವರಿಗೆ ಟಿಕೆಟ್ ಸಿಗುತ್ತದೆ. ಆರ್‌ಎಸ್‌ಎಸ್ 200 ಕೋಟಿ ಸುರಿದಿದೆ ಎಂದವರಿಗೆ ಟಿಕೆಟ್ ಸಿಗುತ್ತದೆ. ಕುಮಾರ ಬಂಗಾರಪ್ಪ ಕಳೆದ ಬಾರಿ 3 ನೇ ಸ್ಥಾನ ಪಡೆದವರು ಅವರಿಗೆ ಟಿಕೆಟ್ ಸಿಗುತ್ತದೆ. ಬೇಳೂರು ಗೋಪಾಲಕೃಷ್ಣ ಕಳೆದ ಬಾರಿ 3 ನೇ ಸ್ಥಾನ ಪಡೆದಿದ್ದು ಬರೀ 23,000 ಮತಗಳನ್ನು ಪಡೆದಿದ್ದಾರೆ, ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಅಸಮಧಾನ ಹೊರ ಹಾಕಿದರು.
ನಾನು ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿ 39,000 ಮತಗಳನ್ನು ಪಡೆದು 2 ನೇ ಸ್ಥಾನ ಪಡೆದಿದ್ದೇನೆ. ಈಗಲೂ ನನಗೆ ವಿಶ್ವಾಸವಿದೆ. ಟಿಕೆಟ್ ನೀಡುವುದಾದರೆ ಸಾಗರ ಕ್ಷೇತ್ರದ್ದು ಇಲ್ಲವಾದಲ್ಲಿ ನಾನೇನು ಎಲೆಕ್ಷನ್ ನಿಲ್ಲುವುದಕ್ಕಾಗಿಯೇ ಹುಟ್ಟಿಲ್ಲ ಎಂದರು.
ನನ್ನ ವಿರುದ್ದ 14 ಕ್ರಿಮಿನಲ್ ಕೇಸ್ ಹಾಕಿ ಮುಗಿಸಲು ಸಂಚು ಮಾಡಿದರು. ನಾನು ಎಲ್ಲಾ ಕೇಸ್‌ಗಳಿಂದ ಆರೋಪ ಮುಕ್ತನಾಗಿದ್ದೇನೆ. ಇನ್ನು ಒಂದು ಎಲೆಕ್ಷನ್ ಕೇಸ್ ಬಾಕಿ ಇದೆ ಎಂದರು.
ನನಗೆ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ , ಕಾದು ನೋಡುತ್ತೇನೆ ಎಂದ ಅವರು ನಾನು ಕಾಂಗ್ರೆಸ್‌ನಲ್ಲಿದ್ದವ ಅಲ್ಲಿನ ಕೆಲ ಮುಖಂಡರು ನನ್ನನ್ನು ಸಂಪರ್ಕಿಸಿದ್ದಾರೆ. ಅಭಿಮಾನಿಗಳು, ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಹಾಲಪ್ಪ ಅವರು ಕಾಂಗ್ರೆಸ್‌ಗೆ ಮತ್ತೆ ವಾಪಾಸಾದಲ್ಲಿ ಅವರಿಗೆ ಸೊರಬ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.