ಸಾಗರ: ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ತಾಲೂಕಿನ ಶರಾವತಿ ಹಿನ್ನೀರಿನ ಭಾನುಕುಳಿ, ಎಸ್‌ಎಸ್ ಭೋಗ್, ಚನ್ನಗೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೋಗಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸ್ಥಗಿತಗೊಂಡಿರುವ ಸಂಚಾರಿ ಆಸ್ಪತ್ರೆಯನ್ನು ಪುನಃ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಕರೂರು ಮತ್ತು ಭಾರಂಗಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಭಾನ್ಕುಳಿ, ಎಸ್‌ಎಸ್ ಭೋಗ್ ಮತ್ತು ಚನ್ನಗೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದಾಗ್ಯೂ ಕೆಲವು ಭಾಗಗಳಿಂದ ರೋಗಿಗಳು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಿಂದೆ ಸಂಚಾರಿ ಆರೋಗ್ಯ ಘಟಕವನ್ನು ಬಿಡಲಾಗಿತ್ತು. ಇತ್ತೀಚೆಗೆ ಇದನ್ನು ನಿಲ್ಲಿಸಲಾಗಿದೆ. ತಕ್ಷಣ ಆಸ್ಪತ್ರೆಯನ್ನು ಆರಂಭಿಸಿದರೆ ಕರೂರು ಭಾರಂಗಿ ಹೋಬಳಿಯ ಕುಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನು250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಹಿಂದಿನಿಂದಲೂ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈತನಕ ಅದು ಅನುಷ್ಟಾನಕ್ಕೆ ಬಂದಿಲ್ಲ. ಸಾಗರ ತಾಲೂಕು ಮಾತ್ರವಲ್ಲದೆ ಹೊಸನಗರ, ಸಿದ್ದಾಪುರ, ಸೊರಬ, ಹೊಸನಗರ ಮೊದಲಾದ ಭಾಗಗಳಿಂದ ಸಹ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಹಾಸಿಗೆ ಕೊರತೆಯಿಂದ ರೋಗಿಗಳನ್ನು ನೆಲದ ಮೇಲೆ ಹಾಸಿಗೆ ಹಾಸಿ ಮಲಗಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ೨೫೦ ಹಾಸಿಗೆ ಸಾಮರ್ಥ್ಯಕ್ಕೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಸಾಗರದ ಡಯಾಲಿಸಿಸ್ ಘಟಕಕ್ಕೆ 5 ಹೆಚ್ಚುವರಿ ಡಯಾಲಿಸಿಸ್ ಯಂತ್ರ ಪೂರೈಸಬೇಕು ಹಾಗೂ ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆಗೆ ಹೆಚ್ಚುವರಿ ಅಂಬ್ಯುಲೆನ್ಸ್ ನೀಡುವ ಮೂಲಕ ತಾಲೂಕಿನ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಚಾರಿ ಆರೋಗ್ಯ ಘಟಕಕ್ಕೆ ಕ್ರಮ
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ೧೬ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸಂಚಾರಿ ಆರೋಗ್ಯ ಘಟಕ ಕೆಲಸ ಮಾಡುತ್ತಿತ್ತು. ಈಚೆಗೆ ಕೇಂದ್ರ ಸರ್ಕಾರ ಯೋಜನೆ ನಿಲ್ಲಿಸಿದ್ದರಿಂದ ರಾಜ್ಯದಲ್ಲಿಯೂ ಯೋಜನೆ ಸ್ಥಗಿತಗೊಂಡಿದೆ. ಇದನ್ನು ಪುನರಾರಂಭಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ಸಂಚಾರಿ ಆರೋಗ್ಯ ಘಟಕ ಪ್ರಾರಂಭಿಸುವ ಬಗ್ಗೆ ಗಮನ ಹರಿಸುತ್ತದೆ. ಸಾಗರ ಆಸ್ಪತ್ರೆಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ರಾಜ್ಯದ ಆರೋಗ್ಯ ಸಚಿವ ಡಾ. ಸುಧಾಕರ್ ಸಭೆಯಲ್ಲಿ ಉಪಸ್ಥಿತರಿದ್ದರು.