ಬೆಂಗಳೂರು: ‘ಹಲಾಲ್ ಅನ್ನುವದು ಒಂದು ಆರ್ಥಿಕ ಜಿಹಾದ್, ಮುಸ್ಲಿಮರು ಇನ್ನೊಬ್ಬರ ಜತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ.
‘ಹಲಾಲ್ ಮಾಂಸಕ್ಕೆ ಹಿಂದೂ ಸಂಘಟನೆಗಳಿಂದ ಬಹಿಷ್ಕಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಳಲು ಹೇಗೆ ಹಕ್ಕು ಇದೆಯೋ, ಹಾಗೆಯೇ ಅದನ್ನು ಬಹಿಷ್ಕರಿಸಿ ಅಂತ ಹೇಳುವ ಹಕ್ಕು ನಮಗಿದೆ’ ಎಂದರು.
‘ಹಲಾಲ್ ಅಂದ್ರೆ ಮುಸ್ಲಿಂ ಧಾರ್ಮಿಕ ಕ್ರಿಯೆ, ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತೇನಾದರೂ ಇದೆಯಾ’ ಎಂದು ಪ್ರಶ್ನಿಸಿದರು.
‘ಸಮಾರಸ್ಯವನ್ನ ಹೇರುವುದಕ್ಕೆ ಬರುವುದಿಲ್ಲ, ಹಾಗಂತ ಸಮಾರಸ್ಯ ಒನ್ ವೇ ಅಲ್ಲ ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ಸಿದ್ಧವಾದರೆ ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗಲೂ ಒಪ್ಪಿಕೊಳ್ಳಲು ಆಗುತ್ತದೆಯೋ? ಹಲಾಲ್ ಮಾಂಸವನ್ನ ಉಪಯೋಗಿಸಬಾರದು ಅಂದರೆ ತಪ್ಪೇನು’ ಎಂದರು.
‘ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ. ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ಖರೀದಿಸುತ್ತಾರೆಯೇ? ಮುಸ್ಲಿಮರ ಅಂಗಡಿಯಲ್ಲಿ ತಗೆದುಕೊಳ್ಳಬೇಕು ಎಂದು ನೀವು ಯಾಕೆ ಹೇಳುತ್ತಿರಿ? ಹೇಳುವುದಕ್ಕೆ ಯಾವ ಹಕ್ಕು ಇದೆ’ ಎಂದು ಕಿಡಿ ಕಾರಿದರು.