Advertisement

ಹಾಲಕ್ಕಿ ಸಾಂಸ್ಕೃತಿಕ ಮ್ಯೂಜಿಯಂ ನಿರ್ಮಾಣ

03:47 PM Dec 12, 2019 | Suhan S |

ಕಾರವಾರ: ಹಾಲಕ್ಕಿ ಒಕ್ಕಲಿಗರ ಸಾಂಸ್ಕೃತಿಕ ವೈಭವ ಪ್ರದರ್ಶನಕ್ಕೆ ಮ್ಯೂಜಿಯಂ ಸ್ಥಾಪನೆಗೆ ಸರ್ಕಾರ 3 ಕೋಟಿ ರೂ. ಮಂಜೂರು ಮಾಡಿದೆ. ಪ್ರವಾಸಿಗರಿಗೆ ಶಾಶ್ವತವಾಗಿ ಹಾಲಕ್ಕಿ ಜನಾಂಗದ ಸಾಂಸ್ಕೃತಿಕ ಮಹತ್ವ ತಿಳಿಯುವ ಹಾಗೆ ಮ್ಯುಜಿಯಂ ನಿರ್ಮಾಣ ಮಾಡಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಕ್ಕಿಗಳ ಉಡುಗೆ ತೊಡುಗೆ, ಸುಗ್ಗಿ ಕುಣಿತ, ಗುಮಟೆ ಪಾಂಗ್‌, ಸಾಂಪ್ರದಾಯಿಕ ಹಾಡಿನ ದಾಖಲೆ ಎಲ್ಲವೂ ಮ್ಯೂಜಿಯಂನಲ್ಲಿರಲಿವೆ ಎಂದರು. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಹಾಗೇ ಉಳಿದಿದೆ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಜಾನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡರ ಮಾರ್ಗದರ್ಶನ ಪಡೆದು ಪ್ರಯತ್ನ ಮಾಡುವೆ. ಸುಕ್ರಿ ಬೊಮ್ಮ ಗೌಡರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕರೆದೊಯ್ಯುವೆ. ಅವರ ಬಯಕೆ ಈಡೇರಿಸಲು ಯತ್ನಿಸುವೆ. ಇದರಿಂದ ಹಾಲಕ್ಕಿ ಸಮುದಾಯದ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ ಎಂದರು.

ಗಡಿನಾಡಲ್ಲಿ ಕನ್ನಡ ಸಾಂಸ್ಕೃತಿ ಭವನ ನಿರ್ಮಾಣದ ಅವಶ್ಯಕತೆಯಿದ್ದು, ಇದಕ್ಕಾಗಿ 1.25 ಕೋಟಿ ರೂ. ಮಂಜೂರಾಗಿದೆ. ಕನ್ನಡ ಸಾಂಸ್ಕೃತಿ ಭವನವನ್ನು ಕರ್ನಾಟಕ ಗೋವಾ ಗಡಿ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ 100 ಕೋಟಿ ರೂ. ಸರ್ಕಾರ ನೀಡಿದೆ. ವಿವಿಧ ರಸ್ತೆ, ಚರಂಡಿ ನಿರ್ಮಾಣ, ರಸ್ತೆ ದುರಸ್ತಿ ತೆಗೆದುಕೊಳ್ಳಲಾಗುತ್ತಿದೆ. ರಾಮನಗುಳಿಕಲ್ಲೇಶ್ವರ ನಡುವೆ ಸೇತುವೆ ನಿರ್ಮಾಣಕ್ಕೆ 17 ಕೋಟಿ ರೂ. ಸರ್ಕಾರ ಮಂಜೂರಿ ಮಾಡಿದೆ. ಕಳೆದ ಮಳೆಗಾಲದ ಪ್ರವಾಹದಲ್ಲಿ ಈ ಭಾಗದ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಇದಕ್ಕೆ ಶಾಶ್ವತ ಕಾಮಗಾರಿ ಮಾಡಲು ಸರ್ಕಾರ 17 ಕೋಟಿ ನೀಡಿದೆ ಎಂದರು.

ಕಾರವಾರ ಪ್ರವಾಸಿ ಮಂದಿರ ನಿರ್ಮಾಣಕ್ಕೆ 10 ಕೋಟಿ ಮಂಜೂರಾಗಿದೆ. ಕೋಡಿಭಾಗ, ಕಾಳಿ ಮಾತಾ ದೇವಾಲಯ ಇರುವ ದ್ವೀಪಕ್ಕೆ ಜಟ್ಟಿ ನಿರ್ಮಿಸಲು ಒಟ್ಟು 5 ಕೋಟಿ ಬಂದಿದೆ. ಕೂರ್ಮಗಡ ಬಳಿ ಜಟ್ಟಿ ನಿರ್ಮಾಣದ ಕಾಮಗಾರಿಗೆ ಹಣ ಮಂಜೂರಿ ಹಂತದಲ್ಲಿದೆ ಎಂದು ವಿವರಿಸಿದರು.

Advertisement

ಚಿಕ್ಕ ನೀರಾವರಿ ವಿಭಾಗಕ್ಕೆ 4 ಕೋಟಿ ಬಂದಿದೆ. ಕುಡಿಯುವ ನೀರಿನ ಕಾಮಗಾರಿ ರಿಪೇರಿಗೆ 10 ಕೋಟಿ ರೂ. ಹಾಗೂ ಸೀಬರ್ಡ್‌ ನೌಕಾನೆಲೆ, ಕಾರವಾರ ನಗರಕ್ಕೆ ನೀರು ಸರಬರಾಜು ಯೋಜನೆಗೆ 106 ಕೋಟಿ ರೂ.ಮಂಜೂರಾಗಿದೆ ಎಂದು ಶಾಸಕಿ ವಿವರಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ 4 ಕೋಟಿ ರೂ.ಬಂದಿದೆ. ವಿವಿಧ ಕಾಮಗಾರಿಗಳನ್ನು ಈ ಅನುದಾನದಲ್ಲಿ ತೆಗೆದುಕೊಳ್ಳಲಾಗಿದೆ. ಮೆಡಿಕಲ್‌ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ 160 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು. ಪ್ರವಾಹ ಪರಿಹಾರ: ಪ್ರವಾಹದಲ್ಲಿ ತೊಂದರೆಗೀಡಾದ ಕಾರವಾರ ತಾಲೂಕಿನ ವಿವಿಧ ಗ್ರಾಮಗಳ 1647 ಕುಟುಂಬಗಳಿಗೆ ತಲಾ 10 ಸಾವಿರ ದಂತೆ ಪರಿಹಾರ ವಿತರಿಸಲಾಗಿದೆ. 57 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷದಂತೆ ಪರಿಹಾರ ನೀಡಲು ಸಿದ್ಧತೆ ನಡೆದಿವೆ. ಮೊದಲ ಕಂತಿನ ಹಣ ನೀಡಲಾಗಿದೆ. ಮನೆ ಹಾನಿ ಸಿ ಕೆಟಗಿರಿಯ 342 ಫಲಾನುಭವಿಗಳಿಗೆ ತಲಾ 50 ಸಾವಿರ ಪರಿಹಾರ ವಿತರಿಸಲಾಗಿದೆ. ಅಂಕೋಲಾದಲ್ಲಿ 1673 ಕುಟುಂಬಗಳಿಗೆ ತಲಾ 10 ಸಾವಿರದಂತೆ ಪರಿಹಾರ ನೀಡಲಾಗಿದೆ. 135 ಜನರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ನೀಡಲು ಪಟ್ಟಿ ಸಿದ್ಧವಿದ್ದು, ಮೊದಲ ಕಂತಿನ ಹಣ ನೀಡಲಾಗಿದೆ. 138 ಸಿ ಕೆಟಗರಿಯಲ್ಲಿ ಹಾನಿಯಾದವರಿಗೆ ತಲಾ 50 ಸಾವಿರದಂತೆ ಪರಿಹಾರ ವಿತರಿಸಲಾಗಿದೆ. ನಗರಸಭೆಯ ವ್ಯಾಪ್ತಿಯ 11 ಮನೆಗಳ ಕುಟುಂಬದವರಿಗೆ ತಲಾ 50 ಸಾವಿರದಂತೆ ಪರಿಹಾರ ವಿತರಿಸಲಾಗಿದೆ ಎಂದು

ಶಾಸಕಿ ರೂಪಾಲಿ ನಾಯ್ಕ ವಿವರಿಸಿದರು.

ಬಿಜೆಪಿ ವಕ್ತಾರ ರಾಜೇಶ್‌ ನಾಯಕ್‌, ಜಗದೀಶ್‌ ನಾಯಕ, ನಿತಿನ್‌ ಪಿಕಳೆ, ಗಣಪತಿ ಉಳ್ವೆಕರ್‌, ಅರುಣ್‌ ನಾಡಕರ್ಣಿ, ನಯನಾ ನೀಲಾವರ, ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರು, ಶಾಸಕರು ಬೆಂಬಲಿಗರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next