ವಾಡಿ: ಸುಕ್ಷೇತ್ರ ಹಳಕರ್ಟಿ ಶ್ರೀವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ ಭಕ್ತಸಾಗರದ ಮಧ್ಯೆ ಸಂಭ್ರಮದಿಂದ ನಡೆಯಿತು.
ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರ, ತೇರಿನ ಸುತ್ತಲೂ ಭಕ್ತರ ಜಯಕಾರ ಮೊಳಗಿತು. ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿಯವರ ರಥ ಪ್ರವೇಶದ ಬಳಿಕ ವೀರಭದ್ರನಿಗೆ ಶಿರಬಾಗಿ ಜನಸಾಗರ ಸೇರಿತ್ತು. ಕಳೆದ ವರ್ಷ ಕೋವಿಡ್ ಮಾರ್ಗಸೂಚಿಗಳನ್ವಯ ರದ್ದಾಗಿದ್ದ ಹಳಕರ್ಟಿ ರಥೋತ್ಸವ, ಈ ವರ್ಷ ಮತ್ತಷ್ಟು ಸಡಗರದಿಂದ ನೆರವೇರಿತು.
ಪಾಲ್ಗೊಂಡಿದ್ದ ಭಕ್ತಸಮೂಹ ತೇರಿಗೆ ಉತ್ತತ್ತಿ, ಬಾಳೆಹಣ್ಣು, ಬಾರೆಕಾಯಿ ಎಸೆದು ಹರಕೆ ತೀರಿಸಿದರು. ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಇದಕ್ಕೂ ಮೊದಲು ರಥಬೀದಿಯಲ್ಲಿ ಕುಂಭ ಮೆರವಣಿಗೆ ಮತ್ತು ಚೌಡಮ್ಮನ ಆಡುವಿಕೆ ನಡೆಯಿತು. ಕಟ್ಟಿಮನಿ ಹಿರೇಮಠದಲ್ಲಿ ಪೂಜ್ಯ ಶ್ರೀಮುನೀಂದ್ರ ಶ್ರೀಗಳ ಸಮ್ಮುಖದಲ್ಲಿ ವಗ್ಗಯ್ಯಗಳಿಗೆ ಸನ್ಮಾನ ನಡೆಯಿತು.
ಮದ್ದು ಸುಡುವ ಕಾರ್ಯಕ್ರಮ ಗಮನ ಸೆಳೆಯಿತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೀರಭದ್ರೇಶ್ವರ ದೇವಸ್ಥಾನ ಜಾತ್ರೆಯ ಮೆರಗು ಹೆಚ್ಚಿಸಿತು. ಜೋಕಾಲಿ, ಮಕ್ಕಳ ಆಟಿಕೆ ಅಂಗಡಿ ಚಿಣ್ಣರನ್ನು ಸೆಳೆದರೆ, ಫಳಾರ, ಜಿಲೇಬಿ, ಭಜ್ಜಿ ಹಾಗೂ ಮಿಠಾಯಿಗಳ ಬಿಡಾರುಗಳಲ್ಲಿ ರುಚಿ ತಿನಿಸುಗಳು ಭಕ್ತರನ್ನು ಆಕರ್ಷಿಸಿದವು.
ಪುರವಂತರಿಂದ ಅಗ್ನಿ ಪ್ರವೇಶ: ಹಳಕರ್ಟಿ ಶ್ರೀವೀರಭದ್ರೇಶ್ವರ ಜಾತ್ರೆಯಲ್ಲಿ ವೀರಾವೇಷದ ಪುರವಂತರ ಕುಣಿತವೇ ವಿಶೇಷ. ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಜಾತ್ರೆ ನಿಮಿತ್ತದ ಅಗ್ನಿ ಪ್ರವೇಶ ಸಂಪ್ರದಾಯ ಈ ಬಾರಿಯೂ ಬುಧವಾರ ಬೆಳಗಿನಜಾವ 4:00 ಗಂಟೆಗೆ ನಡೆಯಿತು. ಪುರವಂತರ ಶಾಸ್ತ್ರ ಧಾರಣೆ ಮತ್ತು ಕೆಂಡ ತುಳಿಯುವ ದೃಶ್ಯ ಭಕ್ತಿಯ ಪರಕಾಷ್ಟೆಯನ್ನು ಅನಾವರಣಗೊಳಿಸಿತು.
ಸೇರಿದ್ದ ಅಪಾರ ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಪಟ್ಟರು. ಹಗಲು ರಾತ್ರಿಯನ್ನದೆ ಜಾತ್ರೆಗೆ ಬಂದೋಬಸ್ತ್ ಒದಗಿಸಿ ಗ್ರಾಮದಲ್ಲಿ ಟಿಕಾಣಿ ಹೂಡಿದ್ದ ವಾಡಿ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ, ಕ್ರೈಮ್ ಪಿಎಸ್‌ಐ ತಿರುಮಲೇಶ ಭಕ್ತರಿಗೆ ಭದ್ರತೆ ಒದಗಿಸಿದರು.
-ಮಡಿವಾಳಪ್ಪ ಹೇರೂರ