Advertisement

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲಹಂಡೆ ಜಲಪಾತ

06:33 PM Jun 08, 2024 | Team Udayavani |

ಗುಳೇದಗುಡ್ಡ : ಕಾನನ ಮಧ್ಯದೊಳಗೊಂದು ನೀರಿನ ಆರ್ಭಟ. ಎತ್ತ ನೋಡಿದರು ಹಚ್ಚಹಸಿರಿನ ಸಿರಿ, ನಿಶಬ್ದ ವಾತಾವಾರಣ. ಇದು ಕಂಡು ಬರುವುದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದಲ್ಲಿ.

Advertisement

ಹಾನಾಪುರ ಎಸ್.ಪಿ. ಗ್ರಾಮದಿಂದ 1ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ನಿಜಕ್ಕೂ ಅಧ್ಭುತವಾಗಿದ್ದು, ಈ ಜಾಗಕ್ಕೆ ಭೇಟಿಕೊಟ್ಟರೇ ಸಾಕು ರಮಣೀಯ ದೃಶ್ಯವನ್ನು ಕಾಣಸಿಗಬಹುದು. ಇಲ್ಲಿ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರ ಗಮನ ಸೆಳೆದಿದೆ.

ಮಳೆಗಾಲದಲ್ಲಿ ತನ್ನ ಸೌಂದರ್ಯ ತೋರಿಸುವ ಈ ಜಲಪಾತ ಪ್ರಕೃತಿಯ ಮಡಿಲಲ್ಲಿದೆ. ಉತ್ತಮವಾಗಿ ಮಳೆಯಾದರೆ ಸಾಕು ಇದರ ವೈಯಾರ ಹೆಚ್ಚುತ್ತದೆ. ಪ್ರವಾಸಿಗರ ಕಣ್ಣಿಗೂ ಕಾಣದೇ ಇದ್ದ ಜಲಪಾತಕ್ಕೆ ಈಗ ಹೋಗಲು ಮಾರ್ಗವಿದೆ. ಕೆಳಗಡೆ ಈಜಲು ಹೊಂಡದಂತೆ ಸ್ಥಳವಿದೆ. ಜಲಪಾತ ಕಡೆ ಅಲ್ಲಲ್ಲಿ ಕೆಲವು ಬೃಹತ್ ಗಾತ್ರದ ಕಲ್ಲುಗಳಿದ್ದು, ನೀರಿನ ಕೆಳಗೆ ಕುಳಿತು ಜಪ ಮಾಡಲೆಂದು ಯಾರೊ ಹಾಕಿದ್ದಾರೇನು ಎನ್ನುವ ರೀತಿಯಲ್ಲಿಯೇ ಅವುಗಳು ಕಾಣಸಿಗುತ್ತವೆ.

ಈಶ್ವರ ಪಡಿ: ಈ ಹಾಲಹಂಡೆ ಜಲಪಾತದಿಂದ ಮುಂದೆ ಸಾಗಿದರೆ ಈಶ್ವರ ಪಡಿ ಸಿಗುತ್ತದೆ. ಇಲ್ಲಿ ಶಿವಲಿಂಗವಿದ್ದು, ಅಲ್ಲದೇ 10-20 ಜನರು ಊಟ ಮಾಡುವ ವಿಶಾಲವಾದ ಸ್ಥಳವಿದೆ. 1937ರಿಂದ ಇಲ್ಲಿಯವರೆಗೆ ಇಲ್ಲಿ ಬಂದು ಹೋದವರು ಅಲ್ಲಿ ತಮ್ಮ ಹೆಸರುಗಳನ್ನು ಬರೆದಿರುವುದು ಕಂಡು ಬರುತ್ತವೆ. ಈ ಹಾಲಹಂಡೆ ಜಲಪಾತದಿಂದ ಹರಿಯುವ ನೀರು ಸುಮಾರು 5-6 ಕಿಮೀ ದೂರದ ಗಂಜಿಗೆರೆ, ಖಾನಾಪುರ ಬಳಿಯ ದೊಡ್ಡ ಕೆರೆ, ಪರ್ವತಿ ಬಳಿಯ ಈರಣ್ಣ ಕೆರೆಗಳಿಗೆ ಹರಿದು ಹೋಗುತ್ತದೆ.

ಹೋಗುವುದು ಹೇಗೆ: ಈ ಸುಂದರ ನಿಸರ್ಗ ರಮಣೀಯ ಸ್ಥಳಕ್ಕೆ ಗುಳೇದಗುಡ್ಡದಿಂದ ಹಾನಾಪುರ ಎಸ್‌ಪಿ ಗ್ರಾಮದ ಶಾಲೆಯ ಬಲ ಭಾಗದ ರಸ್ತೆಯಿಂದ15-20 ನಿಮಿಷ ನಡೆದು ಮೂರಾಲ್ಕು ಹೊಲಗಳನ್ನು ದಾಟಿ ಸ್ವಲ್ಪ ದೂರ ಗುಡ್ಡದಲ್ಲಿ ಹಾಲ ಹಂಡೆ ಜಲಪಾತ, ಕಣ್ಣಿಗೆ ಗೋಚರಿಸುತ್ತದೆ.

Advertisement

ಗಂಜಿಗೇರಿ ಕೆರೆಯಿಂದಲೂ ಈ ಜಲಪಾತಕ್ಕೆ ಹೋಗಬಹುದು ಆದರೆ, ಈ ಗಂಜಿಗೇರಿ ಕೆರೆಯಿಂದ ಬರುವುದು ಕಷ್ಟದ ಕೆಲಸ. ಅಲ್ಲದೇ ಗಂಜಿಗೇರಿ ಕೆರೆಯವರೆಗೆ ಮಾತ್ರ ವಾಹನಗಳು ಹೋಗುತ್ತವೆ. ಅಲ್ಲಿಂದ ಗುಡ್ಡದಲ್ಲಿ ನಡೆದು 1-2 ಕಿಮೀ ಸಂಚರಿಸಬೇಕಾಗುತ್ತದೆ.

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next