Advertisement
ಹಾಲಾಡಿಯವರು ತಮ್ಮ ನಿರ್ಧಾರದ ಬಗ್ಗೆ ಯಾವುದೇ ಸುಳಿವನ್ನೂ ಕೊಟ್ಟಿರಲಿಲ್ಲ. ಕೆಲ ಸಮಯದ ಹಿಂದೆ ಆಪ್ತರ ಬಳಿ ಇನ್ನು ಚುನಾವಣೆ ಸಾಕು ಎಂಬಂತೆ ಹೇಳುತ್ತಿದ್ದರಾದರೂ ಹಿತೈಷಿಗಳ ಮಾತಿಗೆ ಮಣಿದು ಕ್ಷೇತ್ರದಲ್ಲಿ ಕಾರ್ಯ ನಿರತರಾಗಿದ್ದರು. ಪಕ್ಷದ ಸಭೆಗಳಲ್ಲೂ ಭಾಗವಹಿಸುತ್ತಿದ್ದರು. ಉಡುಪಿಯಲ್ಲಿ ನಡೆದ ಪಕ್ಷದ ಅಭ್ಯರ್ಥಿಯ ಆಯ್ಕೆಯ ಆಂತರಿಕ ಚುನಾವಣೆಯಲ್ಲಿ, ಬೆಂಗಳೂರಿನಲ್ಲಿ ನಡೆದ ಅಭ್ಯರ್ಥಿ ಆಯ್ಕೆ ಸಮಾಲೋಚನೆ ಸಭೆಯಲ್ಲೂ ಭಾಗವಹಿಸಿ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬೆಂಗಳೂರಿನಿಂದ ತವರಿಗೆ ಆಗಮಿಸಿದ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಹಾಲಾಡಿಯವರು ಸ್ಪರ್ಧಾಕಣದಿಂದ ಹಿಂದೆ ಸರಿದರೆ ಜಿಲ್ಲೆಯ ಇತರ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಆಗಬೇಕಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಹಾಗೂ ಸ್ಪರ್ಧಾ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ಪ್ರಸ್ತುತ ಹಾಲಾಡಿಯವರೂ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಅವಕಾಶ ನೀಡಿದರೆ ಸಂತೋಷ ಎಂದಿದ್ದಾರೆ. ಹಾಲಾಡಿಯವರ ಎಲ್ಲ ಚುನಾವಣೆಗಳಲ್ಲಿ ಜತೆಗಿದ್ದವರು ಕಿರಣ್ ಕೊಡ್ಗಿ. ಅವರ ತಂದೆ ಎ.ಜಿ. ಕೊಡ್ಗಿ ಅವರೇ ಹಾಲಾಡಿ ಅವರನ್ನು ಕುಂದಾಪುರ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲುವಂತೆ ಮಾಡಿದವರು ಎಂಬ ಅಭಿಪ್ರಾಯ ಇದೆ. ಕಿರಣ್ ಕೊಡ್ಗಿ ಅವರಿಗೆ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಸ್ಥಾನ ದೊರೆತರೂ ಎಂಎಲ್‌ಸಿ ಸೇರಿದಂತೆ ಯಾವುದೇ ಸ್ಥಾನಮಾನ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗಿನಿಂದ ಹಾಲಾಡಿಯವರು ಇಂಥ ನಿರ್ಧಾರಕ್ಕೆ ಬಂದರು ಎನ್ನಲಾಗುತ್ತಿದೆ. ಆ ಮೂಲಕ ತಮ್ಮ ಗೆಳೆಯನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
Related Articles
ರಾಜ್ಯದಿಂದ ಹೋದ ಪಟ್ಟಿಯಲ್ಲಿ ಹಾಲಾಡಿ, ಕಿರಣ್ ಕೊಡ್ಗಿ, ಹಿಂದುಳಿದ ವರ್ಗ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೆಸರಿತ್ತು. 70 ವಯೋಮಾನ ದಾಟಿದವರಿಗೆ ಟಿಕೆಟ್ ಇಲ್ಲವೆಂಬ ನೀತಿಗೆ ಪಕ್ಷ ಕಟ್ಟು ಬಿದ್ದರೆ, 72 ಆದ ಹಾಲಾಡಿಯವರಿಗೆ ಟಿಕೆಟ್ ಸಿಗದು. ಉಡುಪಿಯಲ್ಲಿ ರಘುಪತಿ ಭಟ್ ಅವರಿಗೆ ಅವಕಾಶ ನೀಡಿದರೆ, ಬ್ರಾಹ್ಮಣ ಕೋಟಾದಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಕಿರಣ್ ಕೊಡ್ಗಿಗೆ ಅವಕಾಶ ಸಿಗದು. ಹಾಗಾಗಿ ಸ್ಪರ್ಧಾ ಕಣದಿಂದ ಹಿಂದೆ ಸರಿದರು ಎನ್ನುವ ಮಾತಿದೆ. ಇದೇ ಸಂದರ್ಭದಲ್ಲಿ ಆಗ ಕೊಡ್ಗಿಗೆ ಅವಕಾಶ ತಪ್ಪಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಸಿಕ್ಕರೆ ಕಷ್ಟ ಎಂಬುದೂ ಇಂಥ ನಿರ್ಧಾರದ ಹಿಂದಿದೆ ಎನ್ನುವುದು ವಿಶ್ಲೇಷಣೆಯ ಇನ್ನೊಂದು ಮಗ್ಗಲು.
Advertisement
ಇದೇ ಸಂದರ್ಭದಲ್ಲಿ ಸಚಿವ ಸ್ಥಾನ ನೀಡದಿದ್ದಾ ಗಲೂ ಪಕ್ಷದಿಂದ ಹೊರ ನಡೆದು ಪಕ್ಷೇತರನಾಗಿ ಗೆದ್ದರೂ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲಿಲ್ಲ. ಹಾಗಾಗಿ ಈ ಬಾರಿ ಕಿರಣ್ ಕೊಡ್ಗಿ ಅವರಿಗೆ ಅವಕಾಶ ಸಿಗದೇ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ದೊರೆತರೆ ಹಾಲಾಡಿ ಅವರ ನಿಲುವೇನು ಎನ್ನುವುದು ಸದ್ಯ ನಿಗೂಢ. ಆದರೆ ಹಾಲಾಡಿ ಯವರೂ ಪತ್ರಿಕಾ ಪ್ರಕಟನೆಯಲ್ಲಿ ಪಕ್ಷ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಿದರೂ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ಟಿಕೆಟ್ ಮೇಲೆ ಕಣ್ಣುಬಂಟ ಸಮುದಾಯದ ಪ್ರಾಬಲ್ಯ ಇರುವ ಕುಂದಾಪುರದಲ್ಲಿ ಅದೇ ಸಮುದಾಯುದವರಿಗೆ ಟಿಕೆಟ್ ಸಿಗುತ್ತದೆಯೇ ಎಂಬುದು ಹೈಕಮಾಂಡ್ ಚಿಂತನೆಗೆ ಬಿಟ್ಟಿದೆ. ಇಲ್ಲಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಹೊರತುಪಡಿಸಿ ಈವರೆಗೆ ಬೇರೆ ಸಮುದಾಯದವರು ಗೆದ್ದಿಲ್ಲ. ವರ್ಷಾನು ಗಟ್ಟಲೆಯಿಂದ ಎರಡೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಇದೇ ಸಮುದಾಯದವರೇ. ಹಾಗಾಗಿ ಹಾಲಾಡಿಯವರು ಹಿಂದೆ ಸರಿದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಈಗಾಗಲೇ ಇದೇ ಸಮುದಾಯದವರಿಗೆ ಟಿಕೆಟ್ ಘೋಷಿಸಿದ್ದು, ಬಿಜೆಪಿ ನಿರ್ಧಾರ ಕುತೂಹಲ ಮೂಡಿಸಿದೆ. – ಲಕ್ಷ್ಮೀ ಮಚ್ಚಿನ