Advertisement
ಹಾಲಾಡಿಯವರಿಗೆ ಟಿಕೇಟು ನೀಡುವುದಕ್ಕೆ ತನ್ನ ವಿರೋಧವಿದೆ ಎನ್ನುವುದಾಗಿ ಕೆಲ ದಿನಗಳ ಹಿಂದೆ ಕೊಡ್ಗಿಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಅದಲ್ಲದೆ ತನಗೆ ಸಚಿವ ಸ್ಥಾನ ತಪ್ಪಲು ಕೊಡ್ಗಿಯವರು ಕಾರಣ ಎಂಬ ಹಾಲಾಡಿಯವರ ಮುನಿಸು ಈಗಲೂ ಮುಂದುವರಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಈಗ ಸ್ವತಃ ಹಾಲಾಡಿಯವರೇ ಕೊಡ್ಗಿಯವರನ್ನು ಭೇಟಿ ಮಾಡಿದ್ದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಾಲಾಡಿ ಅವರು, ನಾನು ಈಗಲೂ ಕೊಡ್ಗಿಯವರನ್ನು ಗುರು ಎಂದೇ ಗೌರವಿಸುತ್ತೇನೆ. ನನಗೆ ಅವರ ಆಶೀರ್ವಾದ ಇದ್ದೇ ಇದೆ. ಚುನಾವಣೆಗೆ ಸ್ಪರ್ಧಿಸುವುದು ಸಂತೋಷ ಎನ್ನುವುದಾಗಿ ತಿಳಿಸಿದ್ದಾರೆ ಎಂದು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಉಡುಪಿ: ‘ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧೆ ಆಕಸ್ಮಿಕ ಘಟನೆ. ಆದರೆ ಈ ಬಾರಿ ಬಿಜೆಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪಕ್ಷ ಆಯ್ಕೆ ಮಾಡಿದ ಅನಂತರ ಸಾಮಾನ್ಯ ಕಾರ್ಯಕರ್ತ ಕೂಡ ಅಭ್ಯರ್ಥಿ ಪರ ಕೆಲಸ ಮಾಡುವುದು ಧರ್ಮ’ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಗುರುವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕುಂದಾಪುರದಲ್ಲಿ ಬಿಜೆಪಿಯ ಕೆಲವು ಪದಾಧಿಕಾರಿಗಳ ಅಸಮಾಧಾನವನ್ನು ರಾಜ್ಯದ ಮುಖಂಡರು ಶಮನಿಸುವ ವಿಶ್ವಾಸವಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಎಲ್ಲರ ಸಹಕಾರವೂ ಬೇಕು’ ಎಂದು ಹೇಳಿದರು.