Advertisement
ಸರ್ಕಲ್ ನಿರ್ಮಿಸದಿದ್ದರೆ ತಡೆಹಾಲಾಡಿಯಲ್ಲಿ ಮೊದಲೊಮ್ಮೆ ಸರ್ಕಲ್ ನಿರ್ಮಿಸಲಾಗುವುದು ಎಂದು ತಿಳಿಸಿದ್ದೀರಿ. ಆದರೆ ಈಗ ಸರ್ಕಲ್ ಇಲ್ಲ ಅನ್ನುತ್ತೀರಿ. ಇಲ್ಲಿಗೆ ಅಗತ್ಯವಾಗಿ ಸರ್ಕಲ್ ಬೇಕು. ಇದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಒಂದು ವೇಳೆ ಸರ್ಕಲ್ ನಿರ್ಮಾಣಕ್ಕೆ ಮುಂದಾಗದಿದ್ದರೆ, ಈಗ ನಡೆಯುತ್ತಿರುವ ರಸ್ತೆ ಕಾಮಗಾರಿಗೂ ಗ್ರಾಮಸ್ಥರೆಲ್ಲ ಒಟ್ಟಾಗಿ ತಡೆಯೊಡ್ಡಲಾಗುವುದು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಗ್ರಾಮಸ್ಥರ ಬೇಡಿಕೆಗೆ ಪಂಚಾಯತ್ ಕೂಡ ಬೆಂಬಲವಾಗಿ ನಿಲ್ಲುತ್ತಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸದುದ್ದೇಶದಿಂದ ಅನುದಾನ ತಂದಿದ್ದಾರೆ. ಈ ಸಂಬಂಧ ಗ್ರಾ.ಪಂ. ನಿರ್ಣಯ ಮಾಡಿ, ಸಭೆಯಲ್ಲಿ ಚರ್ಚೆಯಾದ ವಿಚಾರಗಳೆಲ್ಲದರ ವರದಿಯನ್ನು ಲೋಕೋಪಯೋಗಿ ಇಲಾಖೆಗೆ ಕಳುಹಿಸಲಾಗುವುದು. ಇಲ್ಲಿ ರಸ್ತೆ ಜಾಗದಲ್ಲಿ 2-3 ಅಂಗಡಿ ನಿರ್ಮಿಸಿದವರು ಒಂದು ಕೋಣೆ ಮಾತ್ರವಿಟ್ಟುಕೊಂಡು ಬಾಕಿದ್ದನ್ನು ತೆರವು ಮಾಡಿ, ಈಗ ನಿರಾಶ್ರಿತರಾದವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ತಿಳಿಸಿದ್ದಾರೆ. ಪರಿಷ್ಕರಣೆಗೆ ವರದಿ ಸಲ್ಲಿಕೆ : ಭರವಸೆ
ಬ್ಲಾಕ್ ಸ್ಪಾಟ್‌ನಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಬೆಂಗಳೂರಿನಲ್ಲಿ ‘ಪ್ರಾಕ್ಸಂ’ ಕಚೇರಿಯಿದ್ದು, ಅವರೇ ಇಲ್ಲಿನ ಯೋಜನೆಯ ಕರಡು ಸಿದ್ಧಪಡಿಸಿಕೊಟ್ಟಿದ್ದಾರೆ. ಈಗ ಸರ್ಕಲ್ ಬೇಡಿಕೆ ಕುರಿತ ಬೇಡಿಕೆಯ ನಿರ್ಣಯದ ವರದಿಯನ್ನು ಮತ್ತೆ ಪ್ರಾಕ್ಸಂಗೆ ಸಲ್ಲಿಸಲಾಗುವುದು. ಆ ಬಳಿಕ ಅವರೇ ಸರ್ವೇಗೆ ಬರುವಾಗ ಊರವರು ತಮ್ಮ ಅಭಿಪ್ರಾಯವನ್ನು ತಿಳಿಸಿ, ಹೆಚ್ಚುವರಿ ಅನುದಾನವೂ ಅಗತ್ಯವಿದೆ. ಸರ್ಕಲ್ ಬೇಡಿಕೆಗೆ ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡಲಾಗುವುದು ಎಂದು ಉಡುಪಿಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರು ಭರವಸೆ ನೀಡಿದರು.
Related Articles
Advertisement
ಪತ್ರಿಕೆ ವರದಿ ಪ್ರತಿಧ್ವನಿಮಾ. 8 ರಂದು ಮೊದಲ ಬಾರಿಗೆ ಹಾಲಾಡಿಯಲ್ಲಿ ಸರ್ಕಲ್ ಆಗುತ್ತದೆ ಎನ್ನುವ ಕುರಿತು ವರದಿ ಪ್ರಕಟಿಸಿದ್ದು, ಆ ಬಳಿಕವೂ ನಿರಂತರವಾಗಿ ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಉದಯವಾಣಿ’ ಮಾಡಿದ್ದಲ್ಲದೆ, ಸರ್ಕಲ್ ಪ್ರಸ್ತಾವ ಕೈಬಿಟ್ಟ ಬಗ್ಗೆಯೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದಲೇ ಗ್ರಾಮಸ್ಥರೆಲ್ಲ ಒಟ್ಟಾಗಿ ಎಚ್ಚೆತ್ತುಕೊಂಡಿರುವುದು ಎಂದು ಗ್ರಾಮಸ್ಥರಾದ ಸೀತರಾಮ ಗಾಣಿಗ, ರಾಜೀವ ಶೆಟ್ಟಿ, ಸುರೇಶ್ ಶೆಟ್ಟಿ ಮತ್ತಿತರರು ಸಭೆಗೆ ತಿಳಿಸಿದರು. ಬದಲಿ ವ್ಯವಸ್ಥೆ ಮಾಡಿಕೊಡಲಿ
ನಾವು ಕಳೆದ 45 ವರ್ಷಗಳಿಂದ ಹಾಲಾಡಿ ಪೇಟೆಯಲ್ಲಿ ಚಿಕ್ಕ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಇದೇ ನನಗೆ ಜೀವನಾಧಾರವಾಗಿದೆ. ಈಗ ಅಂಗಡಿ ತೆರವು ಮಾಡಿದರೆ ಪರ್ಯಾಯ ವ್ಯವಸ್ಥೆಯಿಲ್ಲ. ನಮ್ಮ ಹೊಟ್ಟೆಪಾಡಿಗೂ ಕಷ್ಟವಾಗುತ್ತದೆ. ರಸ್ತೆಗಾಗಿ ತೆರವು ಮಾಡಿದರೆ ನನಗೆ ಬದಲಿ ವ್ಯವಸ್ಥೆ ಮಾಡಿಕೊಡಲಿ ಎಂದು ವ್ಯಾಪಾರಸ್ಥರಾದ ಅಬೂಬಕ್ಕರ್ ಹಾಲಾಡಿ ಅವರು ಮನವಿ ಮಾಡಿದ್ದಾರೆ. ಚರ್ಚೆಯಾದ ವಿಷಯಗಳು
– ಸರ್ಕಲ್ ಕುರಿತು ಅನೇಕ ಮಂದಿ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
– ವಿದ್ಯುತ್ ಲೈನ್ ಭಾಗದಲ್ಲಿ ಅನಧಿಕೃತ ಕಟ್ಟಡದ ಪ್ರಸ್ತಾವವಾಯಿತು. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
– ಸೋಮೇಶ್ವರ ರಾಜ್ಯ ಹೆದ್ದಾರಿಯ ರಸ್ತೆ ಮಾರ್ಜಿನ್ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿರುವುದರ ಕುರಿತು, ಅದನ್ನು ತೆರವು ಮಾಡಿ, ರಸ್ತೆ ಅಗಲೀಕರಣಕ್ಕೆ ಅನುಕೂಲ ಮಾಡಿ ಕೊಡುವಂತೆ ಕಟ್ಟಡದ ಮಾಲಕರಲ್ಲಿ ಮನವಿ ಮಾಡುವ ಕುರಿತಂತೆ ಅಭಿಪ್ರಾಯ ವ್ಯಕ್ತವಾಯಿತು.