ಭದ್ರಾವತಿ: ಕ್ಷೇತ್ರದ ಗ್ರಾಮದೇವತೆ ಶ್ರೀ ಹಳದಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಿಡಿ ಮಹೋತ್ಸವ ಗುರುವಾರ ಬೆಳಗ್ಗೆ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 6-30ಕ್ಕೆ ಅಮ್ಮನವರ ಉತ್ಸವ ಮೂರ್ತಿಯನ್ನು ಸಿಡಿಕಂಬದ ಮುಂಭಾಗದಲ್ಲಿರಿಸಿದ ನಂತರ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ರಂಗನಾಥ ಶರ್ಮ ಅವರು ದೇವಿಗೆ ಷೋಡಶೋ ಪಚಾರದ ಮೂಲಕ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ದಟ್ಟಿಸಿಡಿ: ಸಂಪ್ರದಾಯದಂತೆ ಪ್ರಥಮ ದಟ್ಟಿಸಿಡಿಯನ್ನು ಅಂಬೇಡ್ಕರ್ ವೃತ್ತದ ನಿವಾಸಿ ಶ್ರೀನಿವಾಸ್ ಅವರ ಕುಟುಂಬದವರಾದ ಚಂದ್ರಪ್ಪ ಅವರಿಂದ ಆರಂಭಿಸಲಾಯಿತು. ಅವರ ಸೊಂಟಕ್ಕೆ ಬಿಗಿಯಾಗಿ ಹಗ್ಗಕಟ್ಟಿ ಸಿಡಿಕಂಬದ ಅಡ್ಡ ಸ್ಥಂಬದ ಒಂದು ತುದಿಗೆ ಅವರನ್ನು ಬಿಗಿಯಾಗಿ ಕಟ್ಟಿ ಮೇಲಕ್ಕೇರಿಸಿ ಸಿಡಿಕಂಬದ ಸುತ್ತ 3 ಸುತ್ತು ತಿರುಗಿಸಿದರು. ಮೇಲಕ್ಕೇರುತ್ತಿದ್ದಂತೆ ಸಿಡಿಯಾಡಿದ ವ್ಯಕ್ತಿ ಉದೋ, ಉದೋ ಎಂದು ಹೇಳುತ್ತ ಆಕಾಶದಲ್ಲಿ ಬೀಸುತ್ತಾ ಹಕ್ಕಿಯಂತೆ ಕೈಕಾಲುಗಳನ್ನು ಬೀಸುತ್ತಾ ಸಿಡಿ ಆಡಿದರು. ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಸಿಡಿ ವೀಕ್ಷಿಸುತ್ತಾ ದೇವಿಗೆ ಜಯಘೋಷ ಕೂಗುತ್ತಾ ಸಿಡಿ ಆಡುವ ತೊಟ್ಟಿಲ ಮೇಲೆ ಬಾಳೆಹಣ್ಣು ಬೀರುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.
ತೊಟ್ಟಿಲ ಸಿಡಿ: ನಂತರ ಹರಕೆ ಹೊತ್ತ ನೂರಾರು ಭಕ್ತಾದಿಗಳು ತಮ್ಮ ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ಮಕ್ಕಳ ಕೊರಳಿಗೆ ಹೂವಿನ ಹಾರ ಹಾಕಿ ಸಿಡಿಕಂಬದ ಮಧ್ಯದ ಅಡ್ಡವಾದ ಉದ್ದನೆಯ ಕಂಬದ ತುದಿಯಲ್ಲಿನ ತೊಟ್ಟಿಲಿನೊಳಗೆ ಮಕ್ಕಳನ್ನು ಕೂರಿಸಿ ಮೇಲೇರಿಸಿ ಆಗಸದಲ್ಲಿ ಒಂದು ಸುತ್ತು ಸುತ್ತಿಸುವ ಮೂಲಕ ಸಿಡಿ ಹರಕೆ ತೀರಿಸಿದರು. ತೊಟ್ಟಿಲೊಳಗೆ ಕುಳಿತು ಸಿಡಿ ಆಡಿದ ಮಕ್ಕಳ ಪೈಕಿ ಕೆಲವು ಮಕ್ಕಳು ನಗುತ್ತಾ ಕೆಲವು ಅಳುತ್ತಾ ಕೆಲವು ಮಕ್ಕಳು ಗಾಬರಿಯಿಂದ ನೋಡುತ್ತಾ ಇದ್ದದ್ದು ಕಂಡುಬಂದಿತು.
ಹಿಂದೆ ಪ್ರತಿ ವರ್ಷ ಜಾತ್ರೆ ವೇಳೆ ನಡೆಯುತ್ತಿದ್ದ ಸಿಡಿ ಉತ್ಸವ ನಂತರದ ದಿನಗಳಲ್ಲಿ ಜಾತ್ರೆ 2 ವರ್ಷಕ್ಕೊಮ್ಮೆ ಮಾಡುವ ಪದ್ಧತಿಯನ್ನು ದೇವಾಲಯದವರು ಆರಂಭಿಸಿದ ನಂತರ ಸಿಡಿ ಉತ್ಸವ ಸಹ 2 ವರ್ಷಕ್ಕೊಮ್ಮೆ ನಡೆಸುವ ಪರಿಪಾಠ ನಡೆಯುತ್ತಾ ಬಂದಿದೆ. ಶ್ರೀ ಹಳದಮ್ಮ ದೇವಾಲಯದ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.