Advertisement

ಎಚ್‌ಎಎಲ್‌ ಕೋವಿಡ್‌ ಆರೈಕೆ ಕೇಂದ್ರ ಸೇವೆಗೆ ಮುಕ್ತ

09:12 AM Jul 20, 2020 | Suhan S |

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಬಿಬಿಎಂಪಿ ಸಿದ್ಧಪಡಿಸಿಕೊಳ್ಳುತ್ತಿದೆ. ಈ ಮಧ್ಯೆ ಎಚ್‌ಎಎಲ್‌ (ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿ.)ಸಂಸ್ಥೆಯ 160 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್‌ ಆರೈಕೆ ಕೇಂದ್ರ ಸೇವೆಗೆ ಮುಕ್ತವಾಗಿದ್ದು ಎಚ್‌ಎಎಲ್‌ ಸಂಸ್ಥೆ ಬಿಬಿಎಂಪಿಗೆ ಹಸ್ತಾಂತರ ಮಾಡಿದೆ.

Advertisement

ಇತ್ತೀಚೆಗೆ ಬಿಬಿಎಂಪಿ ಜೊತೆ ಎಚ್‌ಎಎಲ್‌ ಸಂಸ್ಥೆ ಕೋವಿಡ್‌ ಆರೈಕೆ ಕೇಂದ್ರ ನಿರ್ಮಾಣ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಎಚ್‌ ಎಎಲ್‌ ಸಂಸ್ಥೆಯ ಹಳೆಯ ವಿಮಾನ ನಿಲ್ದಾಣದ ಮಾರ್ಗದ ಸಂಸ್ಥೆಯ ಘಾಟೇಜ್‌ ಸಮಾವೇಶ ಕೇಂದ್ರವನ್ನು ಸುಸಜ್ಜಿತ ಕೋವಿಡ್‌ ಆರೈಕೆ ಕೇಂದ್ರವನ್ನಾಗಿ ಬದಲಾಯಿಸಿದ್ದು, ಇದರಲ್ಲಿ ಕೋವಿಡ್ ಸೋಂಕಿನ ಲಕ್ಷಣ ಇಲ್ಲದ (ಮಧ್ಯಮ ಕೋವಿಡ್ ಸೋಂಕು)ವರಿಗೆ ಚಿಕಿತ್ಸೆ ನೀಡಬಹುದಾಗಿದೆ. ಸದ್ಯಕ್ಕೆ 160 ಹಾಸಿಗೆ ವ್ಯವಸ್ಥೆಯಿದೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇದೂ ಒಂದಾಗಿದೆ. ಈ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಕೇವಲ 16 ದಿನಗಳಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ರೋಗಿಗಳ ಅನುಕೂಲಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  ಸದ್ಯ ಈ ಕೋವಿಡ್‌ ಆರೈಕೆ ಕೇಂದ್ರ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಂಪೂರ್ಣ ಮುಕ್ತವಾಗಿದೆ ಎಂದು ಎಚ್‌ ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ತಿಳಿಸಿದ್ದಾರೆ.

ವೈದ್ಯರು, ಸಹಾಯಕ ಸಿಬ್ಬಂದಿ ನೇಮಿಸಿಕೊಳ್ಳುವ ಮೂಲಕ ಪಾಲಿಕೆ ಈ ಚಿಕಿತ್ಸಾ ಕೇಂದ್ರ ಬಳಸಿಕೊಳ್ಳಲಿದೆ. ಕೊರೊನಾ ನಿರ್ವಹಣಾ ಕೇಂದ್ರ ಪ್ರಾರಂಭಿಸುವ ಉದ್ದೇಶದಿಂದ ಎಚ್‌ ಎಎಎಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಕೋವಿಡ್‌ ಆರೈಕೆ ಕೇಂದ್ರವನ್ನು ಎಚ್‌ಎಎಲ್‌ ಹಸ್ತಾಂತರಿಸಿದ್ದು, ಈ ಕೇಂದ್ರವನ್ನು ಇಷ್ಟರಲ್ಲೇ ಬಳಸಿಕೊಳ್ಳಲಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next