ಬೆಂಗಳೂರು: “ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಗಿದ್ದರೆ ಅದನ್ನು ಮುಚ್ಚಿಬಿಡಿ,’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಫೇಲ್ ಡೀಲ್ ಸಂಬಂಧ ಉತ್ತರ ನೀಡುವ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಚ್‌ಎಎಲ್ ಕುರಿತು ಲಘುವಾಗಿ ಮಾತನಾಡಿದ್ದಾರೆ. ಇದು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾಡಿದ ಅವಮಾನ. ರಫೇಲ್ ಡೀಲ್‌ಗೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರ ನೀಡದೆ, ವಿಷಯಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಸ್ಥೆ ಹಾಗೂ ಅದರಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಯುದ್ಧ ವಿಮಾನ, ಲಘು ಯುದ್ಧ ವಿಮಾನ ತಯಾರಿಕೆ ಇತಿಹಾಸ ಹೊಂದಿರುವ ಸರ್ಕಾರಿ ಸೌಮ್ಯದ ಸಂಸ್ಥೆ ಬಗ್ಗೆ ಕೇಂದ್ರ ಸಚಿವರು ಈ ರೀತಿ ಹೇಳಿರುವುದು ನೋವಿನ ಸಂಗತಿ ಎಂದರು.
ಎಚ್‌ಎಎಲ್‌ಗೆ ಎಲ್ಲ ಸಾಮರ್ಥ್ಯ ಇದ್ದರೂ, ಅನನುಭವಿ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಎಚ್‌ಎಎಲ್ ಅನ್ನು ಮೂಲೆಗುಂಪು ಮಾಡಲಾಗಿದೆ. ಇದರಿಂದ ದೇಶದ ಕೈಗಾರಿಕೆ, ಉದ್ಯೋಗಾವಕಾಶಕ್ಕೆ ದೊಡ್ಡ ಹೊಡೆತ ಬೀಳಲಿದೆ. ದೇಶದ ರಕ್ಷಣಾ ಸಚಿವರು ಯಾರ ಪರವಾಗಿದ್ದಾರೆ? ದೇಶಿ ಸಂಸ್ಥೆ ರಕ್ಷಣೆ ಮಾಡುತ್ತಿದ್ದಾರೋ ಅಥವಾ ಪ್ರಧಾನಿ ಮೋದಿ ಹಾಗೂ ಅಂಬಾನಿಯ ಪರವಾಗಿದ್ದಾರೆ ಎಂದು ಪ್ರಶ್ನಿಸಿದರು.
ದೊಡ್ಡ ಅವ್ಯವಹಾರ: ರಫೇಲ್ ಡೀಲ್‌ನಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ. ಇದು ರಕ್ಷಣಾ ಸಚಿವರಿಗೂ ತಿಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ಏಕಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಅರ್ಹತೆ ಮತ್ತು ಅನುಭವ ಇಲ್ಲ ಸಂಸ್ಥೆಗೆ ಡೀಲ್ ನೀಡಿದ್ದಾರೆ. ಬ್ಯಾಂಕ್ ಗ್ಯಾರೆಂಟಿಯೂ ಕೇಳಿಲ್ಲ ಎಂದು ಹೇಳಿದರು.