Advertisement

ಹಕ್ಲಾಡಿ ಚಿಲ್ಲರೆ ಗುಡ್ಡೆ : ನಿಷೇಧವಿದ್ದರೂ ಗುಡ್ಡ ಅಗೆತ

09:11 PM Sep 23, 2019 | Sriram |

ಕುಂದಾಪುರ: ಹಕ್ಲಾಡಿಯ ಚಿಲ್ಲರೆಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂದು ಎಸಿಯವರೇ ಘೋಷಿಸಿದ್ದರೂ, ಈಗ ಮತ್ತೆ ಇಲ್ಲಿ ಮಣ್ಣು ತೆಗೆಯುತ್ತಿರುವುದು ಕಂಡು ಬಂದಿದೆ. ಮಣ್ಣು ತೆಗೆಯಬಾರದು ಎನ್ನುವುದಾಗಿ ಇಲ್ಲಿ ಎಚ್ಚರಿಕೆಯ ಫಲಕ ಹಾಕಿದ್ದರೂ, ಅದಕ್ಕೆ ಬೆಲೆ ನೀಡದೇ ಲ್ಯಾಂಡ್‌ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.

Advertisement

ಕಳೆದ ಜುಲೈನಲ್ಲಿ ಮಳೆಗೆ ಇಲ್ಲಿನ ಗುಡ್ಡ ಕುಸಿದಿತ್ತು. ಇದಕ್ಕೂ ಹಿಂದೆ ಇಲ್ಲಿನ ಮಣ್ಣು ತೆಗೆದು ಬೇರೆಡೆ ಸಾಗಾಟ ಮಾಡುತ್ತಿದ್ದ ಜಾಲವೊಂದು ಸಕ್ರೀಯವಾಗಿತ್ತು. ಇದರಿಂದಲೇ ಈ ಗುಡ್ಡದ ಮಣ್ಣು ಕುಸಿದಿರುವುದಾಗಿ ಇಲ್ಲಿನ ಆಸುಪಾಸಿನ ಮನೆಯವರು ಆರೋಪಿಸಿದ್ದರು. ಅದಲ್ಲದೆ ಗುಡ್ಡ ಕುಸಿತ ತೀವ್ರಗೊಂಡಿದ್ದರಿಂದ ಅಕ್ಕ – ಪಕ್ಕದ ಮನೆಗೂ ಆತಂಕ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ಆಗಿನ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರು, ಬೆಟ್ಟ, ಗುಡ್ಡ, ಕೆರೆ ಕೊತ್ತಲು ಸಂರಕ್ಷಣೆ ನಿಯಮದ ಪ್ರಕಾರ ಚಿಲ್ಲರೆಗುಡ್ಡೆವನ್ನು ಕೂಡ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದು, ಇಲ್ಲಿ ಮಣ್ಣು ತೆಗೆಯುವುದಾಗಲೀ ಇನ್ನಿತರ ಚಟುವಟಿಕೆ ಮಾಡಕೂಡದು.

“ಅಪಾಯಕಾರಿ ಸ್ಥಳ’ ಎಂದು ಪಂಚಾಯತ್‌ಗೆ ನಾಮಫಲಕ ಹಾಕಲು ಕೂಡ ಸೂಚಿಸಿದ್ದರು. ಆ ಬಳಿಕ ಪಂಚಾಯತ್‌ನವರು ಇಲ್ಲಿ ಮಣ್ಣು ತೆಗೆಯುವಂತಿಲ್ಲ ಎನ್ನುವ ಎಚ್ಚರಿಕೆ ಫಲಕವನ್ನು ಕೂಡ ಹಾಕಿದ್ದರು. ಆದರೆ ಆ ಸೂಚನೆಯ ಫಲಕ ಹಾಗೆಯೇ ಇದ್ದರೂ, ಮಣ್ಣು ತೆಗೆಯುವ ಜಾಲಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next