Advertisement

ಮಾನವ ಸೃಜನೆ: ಹಕ್ಲಾಡಿ ಗ್ರಾ.ಪಂ. ಜಿಲ್ಲೆಗೆ ಅಗ್ರಣಿ

05:48 PM Dec 20, 2021 | Team Udayavani |

ಕುಂದಾಪುರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್‌ ನಿರೀಕ್ಷೆಗೂ ಮೀರಿದ ಸಾಧನೆಗೈದಿದೆ. ನರೇಗಾದಡಿ ಮಾನವ ಸೃಜನೆ ಮಾಡಿದ ಪಂಚಾಯತ್‌ಗಳ ಪೈಕಿ ಹಕ್ಲಾಡಿ ಗ್ರಾ.ಪಂ. ಉಡುಪಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನ ಪಡೆದಿದೆ.

Advertisement

2021-2022ನೇ ಸಾಲಿನಲ್ಲಿ ಕುಂದಾಪುರ ತಾಲೂಕಿನ ಒಟ್ಟು 46 ಗ್ರಾ.ಪಂ.ಗಳಲ್ಲಿ 2,38,797 ದಿನ ಹಾಗೂ ಬೈಂದೂರು ತಾಲೂಕಿನ ಒಟ್ಟು 13 ಗ್ರಾ.ಪಂ.ಗಳಲ್ಲಿ 77,154 ಮಾನವ ದಿನಗಳ ಸೃಜನೆಯಾಗಿದೆ. ಈ ಪೈಕಿ ಕುಂದಾಪುರದಲ್ಲಿ 8 ಹಾಗೂ ಬೈಂದೂರಲ್ಲಿ 4 ಗ್ರಾ.ಪಂ.ಗಳು 8 ಸಾವಿರಕ್ಕೂ ಅಧಿಕ ಮಾನವ ದಿನಗಳ ಸೃಜನೆ ಮಾಡುವ ಮೂಲಕ ಉತ್ತಮ ಪ್ರಗತಿ ಸಾಧಿಸಿದೆ.

ಈ ಸಾಲಿನಲ್ಲಿ ಹಕ್ಲಾಡಿ ಗ್ರಾ.ಪಂ.ಗೆ 18,700 ಮಾನವ ಸೃಜನೆ ದಿನಗಳ ಗುರಿ ನೀಡಲಾಗಿದ್ದು, ಈ ಪೈಕಿ ಈಗಾಗಲೇ 14,800 ಮಾನವ ದಿನಗಳನ್ನುಸೃಜನೆ ಮಾಡುವ ಮೂಲಕ ವಿಶೇಷ ಸಾಧನೆಗೈದಿದೆ. 2022 ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಹ ಮೀರಿಸುವ ನಿರೀಕ್ಷೆ ಹೊಂದಿದೆ.

ಕಳೆದ ಬಾರಿ ಇದರದಡಿ 65.59 ಲಕ್ಷ ರೂ. ವೆಚ್ಚದ ಕಾಮಗಾರಿಯಾಗಿದ್ದರೆ, ಈ ಬಾರಿ ಈಗಾಗಲೇ 51.40 ಲ.ರೂ. ಕಾಮಗಾರಿ ನಡೆಸಲಾಗಿದೆ. ಬದುಕು ಕಟ್ಟಿಕೊಟ್ಟ ನರೇಗಾಹಕ್ಲಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸಮುದಾಯ ಕಾಮಗಾರಿಗಳು ಪ್ರಗತಿ ಸಾಧಿಸಲಾಗಿದೆ. 5 ಕಡೆ ಕೆರೆ ಹೂಳೆತ್ತುವಿಕೆ, ಕೆರೆ ರಚನೆ, ತೋಡು ಹೂಳೆತ್ತುವಿಕೆ, ಶಾಲಾ ಆವರಣ ಗೋಡೆ, ಶಾಲೆಗಳ ಸಹಿತ ಸಮುದಾಯ ಮಳೆ ನೀರು ಕೊಯ್ಲು ಸೇರಿದಂತೆ ಅನೇಕ ಸಮುದಾಯ ಕಾಮಗಾರಿಗಳು ನಡೆಯುತ್ತಿದೆ.

ಈ ಕಾಮಗಾರಿಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಕೂಲಿಕಾರರಾಗಿ ದುಡಿಯುತ್ತಿದ್ದು, 250ಕ್ಕೂ ಅಧಿಕ ಮಹಿಳೆಯರು ದಿನಕ್ಕೆ 289 ರೂ. ಕೂಲಿ ಪಡೆದು ಜೀವನ ಕಂಡುಕೊಂಡಿದ್ದಾರೆ. ಇನ್ನು ಮಿಷನ್‌ 25 ಅಭಿಯಾನದಡಿ ಅರ್ಹರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡಲಾಗುತ್ತಿದ್ದು, ಬಚ್ಚಲು ಗುಂಡಿ, ದನದ ಹಟ್ಟಿ, ಕೋಳಿ ಶೆಡ್‌, ಗೊಬ್ಬರದ ಗುಂಡಿ ಸೇರಿಂತೆ ಅನೇಕ ವೈಯಕ್ತಿಕ ಕಾಮಗಾರಿಗಳನ್ನು ಗ್ರಾಮಸ್ಥರು ಪಡೆದುಕೊಂಡಿದ್ದಾರೆ.

Advertisement

ನಮ್ಮ ಕುಟುಂಬ ನಿರ್ವಹಣೆಗೆ ನರೇಗಾ ಯೋಜನೆ ಬಹಳಷ್ಟು ಸಹಕಾರಿಯಾಗಿದೆ. ಸಮುದಾಯ ಕಾಮಗಾರಿಯಲ್ಲಿ ದುಡಿದು ಜೀವನ ಸಾಗಿಸುತ್ತಿದ್ದೇವೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯೋಗ ಖಾತರಿ ಯೋಜನೆ
ನಮ್ಮ ಕೈ ಹಿಡಿದಿದೆ ಎಂದು ಫಲಾನುಭವಿಗಳಲ್ಲಿ ಒಬ್ಬರಾದ ಬೇಬಿ ಅವರು ತಿಳಿಸಿದ್ದಾರೆ.

ಸಮುದಾಯ ಅಭಿವೃದ್ಧಿಗೆ ಒತ್ತು
ಹಕ್ಲಾಡಿ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದೆ. ಕೇವಲ ವೈಯಕ್ತಿಕ
ಕಾಮಗಾರಿ ಮಾತ್ರವಲ್ಲದೆ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಸಮುದಾಯ ಕಾಮಗಾರಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸಮುದಾಯ ಕಾಮಗಾರಿಗಳಲ್ಲಿ 250ಕ್ಕೂ ಹೆಚ್ಚು ಮಹಿಳೆಯರು ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿದ್ದೇವೆ-ಚಂದ್ರ ಬಿಲ್ಲವ, ಹಕ್ಲಾಡಿ ಗ್ರಾ.ಪಂ. ಪಿಡಿಒ

ನರೇಗಾ ಯೋಜನೆಯಡಿ ಹಕ್ಲಾಡಿ ಗ್ರಾಮ ಪಂಚಾಯತ್‌ ಉತ್ತಮ ಸಾಧನೆ ಮಾಡಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು, ಇತರರಿಗೂ ಮಾದರಿಯಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಭಾಗದ ಜನರಿಗೆ ಈ ಯೋಜನೆ ವರದಾನವಾಗಿದೆ. ಇನ್ನಷ್ಟು ಜನರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ.
-ಶ್ವೇತಾ ಎನ್‌., ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ
ಕುಂದಾಪುರ (ಪ್ರಭಾರ)

Advertisement

Udayavani is now on Telegram. Click here to join our channel and stay updated with the latest news.

Next