Advertisement

ಹತ್ತೂರ ಮಕ್ಕಳಿಗೆ ಕಲಿಸಿದ ಅಕ್ಷರ ದೇಗುಲಕ್ಕೆ 117 ವರ್ಷ

08:53 PM Nov 24, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕುಂದಾಪುರ: ಹಲ್ಸನಾಡು ವಿಶ್ವೇಶ್ವರಯ್ಯ ಅವರ ಮುತುವರ್ಜಿಯಲ್ಲಿ, ಅವರದೇ ಸ್ವಂತ ಜಾಗದಲ್ಲಿ 1902ರಲ್ಲಿ ಆರಂಭವಾದ ಹಕ್ಲಾಡಿ ಸರಕಾರಿ ಹಿ.ಪ್ರಾ. ಶಾಲೆಗೆ ಈಗ 117ನೇ ವರ್ಷಾಚರಣೆ ಸಂಭ್ರಮ. ಹಕ್ಲಾಡಿ, ನೂಜಾಡಿ, ಕುಂದ ಬಾರಂದಾಡಿ, ಬಾರಂದಾಡಿ, ಯಳೂರು- ತೋಪು, ಕಟ್ಟಿನಮಕ್ಕಿ ಸಹಿತ ಹತ್ತಾರು ಊರಿನಿಂದ ಬರುತ್ತಿದ್ದ ಸಾವಿರಾರು ಮಕ್ಕಳಿಗೆ ಅಕ್ಷರವನ್ನು ಕಲಿಸಿದ ಶಾಲೆಯಿದು.

1902 ರಿಂದ 1970 ರವರೆಗೆ ಹಲ್ಸನಾಡು ವಿಶ್ವೇಶ್ವರಯ್ಯ ಅವರ ಸ್ವಂತ ಜಾಗದಲ್ಲಿಯೇ ನಿರ್ಮಾಣಗೊಂಡ ಕಟ್ಟಡದಲ್ಲಿ ಶಾಲಾ ಚಟುವಟಿಕೆ ನಡೆಯುತ್ತಿತ್ತು. ಈಗಿರುವ ಶಾಲೆಯ ಕಟ್ಟಡ ಆರಂಭವಾಗಿದ್ದು, 1972ರಲ್ಲಿ. ಶತಮಾನೋತ್ಸವ ಆಚರಣೆ 2006 ರಲ್ಲಿ ನಡೆದಿತ್ತು.

ಏಕೈಕ ಹಿ.ಪ್ರಾ. ಶಾಲೆ
ನೂಜಾಡಿ, ಕುಂದ ಬಾರಂದಾಡಿ, ಬಾರಂದಾಡಿ, ಯಳೂರು- ತೋಪು, ಕಟ್ಟಿನಮಕ್ಕಿ ಮತ್ತಿತರ ಶಾಲೆಗಳಲ್ಲಿ ಕಿ.ಪ್ರಾ. ಅಂದರೆ 1ರಿಂದ 4 ಅಥವಾ5 ನೇ ತರಗತಿಯವರೆಗೆ ಮಾತ್ರ ಇದ್ದುದರಿಂದ ಈ ಹಿ.ಪ್ರಾ. ಶಾಲೆಯನ್ನು ಆರಂಭಿಸಲಾಗಿತ್ತು. ಆಗ ಈ ಭಾಗದಲ್ಲಿ ಇದ್ದುದ್ದು ಇದೊಂದೇ ಶಾಲೆ. ಆರಂಭದಲ್ಲಿ 200ಕ್ಕೂ ಮಿಕ್ಕಿ ಮಕ್ಕಳಿದ್ದರು.

2001-05ರ ಸಮಯದಲ್ಲಿ 500ಕ್ಕೂ ಮಿಕ್ಕಿ ಮಕ್ಕಳು, 18 ಮಂದಿ ಶಿಕ್ಷಕರಿದ್ದರಂತೆ. ಈಗ ಈ ಶಾಲೆಯಲ್ಲಿ 155 ಮಕ್ಕಳಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರು ಹಾಗೂ ಒಬ್ಬರು ಗೌರವ ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕ ಹಾಗೂ ಮತ್ತೂಂದು ಶಿಕ್ಷಕ ಹುದ್ದೆ ಖಾಲಿಯಿದೆ.

Advertisement

ಸಾಧಕರು
ಅಮೆರಿಕಾದಲ್ಲಿ ಪ್ರಖ್ಯಾತ ವೈದ್ಯರಾಗಿರುವ ಡಾ| ದಿನಕರ ಶೆಟ್ಟಿ, ಬಿಎಎಸ್‌ಎಫ್‌ ಸಂಸ್ಥೆಯ ನಿರ್ದೇಶಕರಾಗಿರುವ ಪ್ರದೀಪ್‌ ಚಂದನ್‌, ವೈದ್ಯರಾಗಿರುವ ಡಾ| ಚಿಕ್ಮರಿ, ಡಾ| ಪ್ರಸನ್ನ, ಡಾ| ಸುಕೀರ್ತಿ, ಹೈಕೋರ್ಟ್‌ ವಕೀಲ ಶಾಂತರಾಮ್‌ ಶೆಟ್ಟಿ, ವಕೀಲರಾದ ಶರತ್‌ ಕುಮಾರ್‌ ಶೆಟ್ಟಿ, ನವೀನ್‌ ಕುಮಾರ್‌ ಶೆಟ್ಟಿ, ಪಾಂಡುರಂಗ ಶೆಟ್ಟಿ, ಉದ್ಯಮಿಗಳಾದ ಶಂಕರ ಹೆಗ್ಡೆ, ಆನಂದ ಕುಮಾರ್‌ ಶೆಟ್ಟಿ, ಚಂದ್ರಶೇಖರ್‌ ಶೆಟ್ಟಿ ಹಕೂìರು, ಜಗದೀಶಯ್ಯ ಹಲ್ಸನಾಡು, ಗಣಪಯ್ಯ ಶೆಟ್ಟಿ, ಶ್ರೀಪತಿ ಉಪಾಧ್ಯಾಯ, ಗೋವಿಂದ ಮೊಗವೀರ, ಪ್ರಸನ್ನ ಹೆಬ್ಟಾರ್‌, ರಾಜಕೀಯದಲ್ಲಿ ಸಂತೋಷ್‌ ಕುಮಾರ್‌ ಶೆಟ್ಟಿ, ಹೊಳ್ಮಗೆ ಸುಭಾಶ್‌ ಶೆಟ್ಟಿ ಸೇರಿದಂತೆ ಅನೇಕ ಮಂದಿ ಇಂಜಿನಿಯರ್, ಲೆಕ್ಕ ಪರಿಶೋಧಕರು ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಗ್ರಾಮೀಣ ಭಾಗದ ಈ ಶಾಲೆಯ ವಿದ್ಯಾರ್ಥಿಗಳು ಚೆಸ್‌ ಹಾಗೂ ಕಬಡ್ಡಿಯಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ್ದರು. ಊರಿನ ಅನೇಕ ಮಂದಿ ದಾನಿಗಳು, ಹಳೆ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯ ಸ್ಥಿತಿ ಉತ್ತಮವಾಗಿದೆ.

ನನಗೆ ಅಕ್ಷರ ಕಲಿಸಿದ ಮೊದಲ ಶಾಲೆಯಿದು. 7ನೇ ತರಗತಿಯಲ್ಲಿದ್ದಾಗ ವಿದ್ಯಾರ್ಥಿ ನಾಯಕನಾಗಿದ್ದೆ. ಇದೇ ನನಗೆ ಭವಿಷ್ಯದಲ್ಲಿ ರಾಜಕೀಯ ನಾಯಕನಾಗಿ ಮೇಲೇರಲು ಪ್ರೇರಣೆ. 2006ರಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷನಾಗಿ, ಡಾ| ಚಂದ್ರಶೇಖರ್‌ ಶೆಟ್ಟಿ ಮತ್ತಿತರರ ಮಾರ್ಗದರ್ಶನದಲ್ಲಿ ಶತಮಾನೋತ್ಸವ ಆಚರಣೆ ಆಯೋಜಿಸಿದ್ದೇವು. ಹಳೆ ವಿದ್ಯಾರ್ಥಿಗಳು, ಊರ ದಾನಿಗಳ ಸಹಕಾರ ಸ್ಮರಣೀಯ.
-ಸಂತೋಷ್‌ ಕುಮಾರ್‌ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರು, ಹಳೆ ವಿದ್ಯಾರ್ಥಿ

ಸರಕಾರ, ದಾನಿಗಳು, ಹಳೆ ವಿದ್ಯಾರ್ಥಿಗಳ ನೆರವಿನಿಂದ ಹೆಚ್ಚಿನೆಲ್ಲ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಗ್ರಾ.ಪಂ., ತಾ.ಪಂ., ಜಿ.ಪಂ.ನಿಂದಲೂ ಸಾಕಷ್ಟು ಅನುದಾನ ಸಿಕ್ಕಿದೆ. ಶಾಲೆಗೆ ಸ್ವಂತ ಆಟದ ಮೈದಾನವೊಂದರ ಅಗತ್ಯವಿದೆ. ಹಾಗೆಯೇ ಆಂಗ್ಲ ಮಾಧ್ಯಮ ಕಲಿಕೆಯನ್ನು ಆರಂಭಿಸಿದರೆ ಇನ್ನಷ್ಟು ಮಕ್ಕಳು ಬರಬಹುದು.
-ಸಂಜೀವ ಬಿಲ್ಲವ ,
ಮುಖ್ಯ ಶಿಕ್ಷಕರು (ಪ್ರಭಾರ)

 -ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next