Advertisement

ಹಜ್‌ ಯಾತ್ರಿಗಳಿಗೆ ಅತ್ಯುತ್ತಮ ಸೌಲಭ್ಯ

01:22 PM Jul 19, 2017 | Girisha |

ವಿಜಯಪುರ: ಹಜ್‌ ಯಾತ್ರೆಗೆ ತೆರಳುವ ಕರ್ನಾಟಕದ ಯಾತ್ರಾರ್ಥಿಗಳಿಗೆ ವಿಶ್ವದಲ್ಲೇ ಯಾರೂ ಕಲ್ಪಿಸದ ಅತ್ಯುತ್ತಮ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಲ್ಪಿಸಿದೆ ಎಂದು ನಗರಾಭಿವೃದ್ಧಿ ಹಾಗೂ ಹಜ್‌ ಖಾತೆ ಸಚಿವ ಆರ್‌.ರೋಷನ್‌ ಬೇಗ್‌ ಹೇಳಿದರು. 

Advertisement

ಮಂಗಳವಾರ ನಗರದಲ್ಲಿ ಕರ್ನಾಟಕ ರಾಜ್ಯ ಹಜ್‌ ಸಮಿತಿ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲೆಯ ಹಜ್‌ ಯಾತ್ರಾರ್ಥಿಗಳ ತರಬೇತಿ ಶಿಬಿರ ಮತ್ತು ಚುಚ್ಚುಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಹಜ್‌ ಯಾತ್ರೆ ಪುಣ್ಯವಂತರಿಗೆ ಮಾತ್ರ ಲಭಿಸುವ ವಿಶೇಷ ಭಾಗ್ಯ. ಹೀಗಾಗಿ ಎಲ್ಲರಿಗೂ ಈ ಸಂದರ್ಭದಲ್ಲಿ ಹಜ್‌ ಯಾತ್ರೆಯ ಶುಭ ಹಾರೈಸುವುದಾಗಿ ಹೇಳಿದರು.

ರಾಜ್ಯ ಹಜ್‌ ಸಮಿತಿಯಿಂದ ಹಜ್‌ ಯಾತ್ರಿಗಳ ಅನುಕೂಲಕ್ಕಾಗಿ ಸುರಕ್ಷಿತ, ಸುಗಮವಾಗಲು ಅನುಕೂಲ ಆಗುವಂತೆ ತರಬೇತಿ ಆಯೋಜಿಸುತ್ತಿದೆ. ಅದರಂತೆ ಈ ಯಾತ್ರಾರ್ಥಿಗಳು ಪವಿತ್ರ ಹಜ್‌ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಅವಶ್ಯಕತೆ ಇರುವ ವಸತಿ, ವಿಮಾನಯಾನ ಸೇರಿದಂತೆ ಇನ್ನುಳಿದ ಸಕಲ ಸೌಲಭ್ಯ ವಿಶ್ವದಲ್ಲಿ ಎಲ್ಲೂ ನೀಡದಂತಹ ವ್ಯವಸ್ಥೆಯನ್ನು ಬೆಂಗಳೂರು ಹಜ್‌
ಸಮಿತಿ ಮೂಲಕ ರಾಜ್ಯ ಸರ್ಕಾರ ಕಲ್ಪಿಸಿದೆ ಎಂದು ಹೇಳಿದರು.

ಹಲವಾರು ವರ್ಷಗಳ ಹಿಂದೆ ಹಜ್‌ ಯಾತ್ರಾರ್ಥಿಗಳು ಕೇವಲ ದೆಹಲಿ, ಕೊಲ್ಕತ್ತಾ, ಮದ್ರಾಸ್‌ ಹಾಗೂ ಮುಂಬೈ ಕೇಂದ್ರಗಳ ಮೂಲಕ
ಮಾತ್ರ ಹಜ್‌ ಯಾತ್ರೆಗೆ ತೆರಳುವ ಪರಿಸ್ಥಿತಿ ಇತ್ತು. ಸತತ ಪರಿಶ್ರಮದ ಫಲವಾಗಿ ಇದೀಗ ಬೆಂಗಳೂರಿನಲ್ಲೂ ಹಜ್‌ ಸಮಿತಿ ಮೂಲಕ ಸೇವಾ ಕೇಂದ್ರ ಸ್ಥಾಪಿಸಿ ಹಜ್‌ ಯಾತ್ರಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. 

ರಾಜ್ಯದ ವಿವಿಧ ಭಾಗಗಳಿಂದ ಹಜ್‌ ಯಾತ್ರಾರ್ಥಿಗಳು ಪವಿತ್ರ ಮೆಕ್ಕಾಗೆ ತೆರಳಿದ ಸಂದರ್ಭದಲ್ಲಿ ಇರಬೇಕಾದ ಮಾಹಿತಿ ಕುರಿತು 
ವಿವರವನ್ನು ತರಬೇತಿಯಲ್ಲಿ ನೀಡಲಾಗುತ್ತಿದೆ. ಭವಿಷ್ಯದಲ್ಲೂ ಯಾವ ಸಮಸ್ಯೆ ಆಗದಂತೆ ಎಲ್ಲ ರೀತಿಯ ತೊಡಕುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದ ಮತ್ತು ರಾಜ್ಯದ ಶಾಂತಿ, ಏಕತೆಗೆ ಪ್ರಾರ್ಥಿಸುವಂತೆ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

Advertisement

ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಜನಿಸಿದ ವಿಜಯಪುರ ಜಿಲ್ಲೆಯೂ ಜಾತ್ಯತೀತ ಮತ್ತು ಸಮಾನತೆಗೆ ಹೆಸರಾಗಿದೆ. ದೇಶಕ್ಕೆ ಪ್ರಗತಿಪರ ಆಡಳಿತ ನೀಡಿದ ಆದಿಲ್‌ ಶಾಹಿಗಳ ನೆಲೆ ಕೂಡ ವಿಜಯಪುರ ಎಂಬುವುದು ಗಮನೀಯ. ಸುಮಾರು 400 ವರ್ಷಗಳ ಹಿಂದೆಯೇ ರಾಜಧಾನಿಯ 9 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಿದ ಮಹತ್ವದ ಯೋಜನೆ ರೂಪಿಸಿದ್ದ ಶಾಹಿ ಅರಸರು, ಜಲ ಸಂರಕ್ಷಣೆಗಾಗಿ ಕೆರೆ-ಬಾವಿಗಳನ್ನು ನಿರ್ಮಿಸಿರುವುದು 
ಅವರಲ್ಲಿದ್ದ ತಂತ್ರಜ್ಞಾನಕ್ಕೆ ಸಾಕ್ಷಿ. ಇಂತಗ ಐತಿಹಾಸಿಕ ಬಾವಿಗಳು ಅವಸಾನ ಸ್ಥಿತಿ ತಲುಪಿದ ಈ ಹಂತದಲ್ಲಿ ಇದೀಗ ಮತ್ತೆ ಪುನರುಜ್ಜೀವನ ಕಂಡಿವೆ ಎಂದರು. ಆದಿಲ್‌ ಶಾಹಿ ಕಾಲದ ಬೇಗಂ ತಲಾಬ, ಮಮದಾಪುರ ಕೆರೆ ಸೇರಿದಂತೆ 200ಕ್ಕೂ ಹೆಚ್ಚು ಕೆರೆ
ಮತ್ತು ಐತಿಹಾಸಿಕ ಬಾವಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಐತಿಹಾಸಿಕ ಸುರಂಗ ಮಾರ್ಗ ವ್ಯವಸ್ಥೆಯ ದುರಸ್ತಿಗೂ ಚಾಲನೆ ನೀಡಲಾಗಿದೆ. ಭವ್ಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು
ಸ್ಮರಣಾರ್ಹ ಎಂದರು.

ಮತ್ತೂಂದೆಡೆ ಪರ್ಷಿಯನ್‌ ಭಾಷೆಯಲ್ಲಿದ್ದ ವಿಜಯಪುರ ಜಿಲ್ಲೆಯ ಶಾಹಿ ಅರಸರ ಐತಿಹಾಸಿಕ ಪುಸ್ತಕಗಳನ್ನು 21 ಸಂಪುಟಗಳಲ್ಲಿ ಉರ್ದು ಮತ್ತು ಇಂಗ್ಲಿಷ್‌ ಭಾಷೆಗೆ ತರ್ಜುಮೆ ಮಾಡಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ದೇಶದಲ್ಲಿ ಹೆಚ್ಚಿನ ಐತಿಹಾಸಿಕ ಸ್ಮಾರಕಗಳು ಹೊಂದಿರುವ ಈ ಜಿಲ್ಲೆ, ಅವೆಲ್ಲವುಗಳ ಅತಿಕ್ರಮಣ, ನಾಶವಾಗದಂತೆ ನಾಗರಿಕರು ಸಹಕರಿಸಬೇಕು. ಕೆರೆ
ಮತ್ತು ಬಾವಿಗಳ ಸ್ವತ್ಛತೆಗೂ ಗಮನ ನೀಡುವಂತೆ ಕಿವಿಮಾತು ಹೇಳಿದರು. ಎಸ್‌.ಆರ್‌. ಪಾಟೀಲ, ಶಾಸಕ ಡಾ| ಎಂ.ಎಸ್‌. 
ಬಾಗವಾನ ಮಾತನಾಡಿದರು. ಮೇಯರ್‌ ಅನೀಸ್‌ ಫಾತಿಮಾ ಭಕ್ಷಿ, ವೂಡಾ ಅಧ್ಯಕ್ಷ ಆಝಾದ್‌ ಪಟೇಲ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಡಿಎಚ್‌ಒ ಡಾ| ರಾಜಕುಮಾರ ಯರಗಲ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಕಾ, ಸಿಪಿಐ ಬಸವರಾಜ ಯಲಿಗಾರ, ಸೈಯ್ಯದ್‌ ಮಸೂದ್‌ ಖಾಜಾ, ಮೌಲಾನಾ ಮೆಹಬೂಬ್‌ ಉತ್‌ ರೆಹಮಾನ್‌, ಅಲ್‌ಹಾಜ್‌ ಮಹ್ಮದ್‌ ಯುಸೂಫ್‌, ಸೈಯ್ಯದ ಯುಸೂಫ್‌ ಖಾಜಿ, ಮಕ್ಕಬೂಲ್‌ ಪಾಶಾ ಜಾಗೀರದಾರ ಇದ್ದರು. ಜಾವೀದ ಬಾಗವಾನ ವಂದಿಸಿದರು.

ಹಜ್‌ ಯಾತ್ರೆಗೆ ರಾಷ್ಟ್ರಧ್ವಜ ಒಯ್ಯಿರಿ ಹಜ್‌ ಯಾತ್ರೆಗೆ ತೆರಳು ವಿಜಯಪುರ ಹಾಗೂ ಕರ್ನಾಟಕದ ಹಜ್‌ ಯಾತ್ರಿಗಳು ಭಾರತದ ರಾಷ್ಟ್ರಧ್ವಜವನ್ನು ಕೊಂಡೊಯ್ಯಿರಿ. ಆ ಮೂಲಕ ವಿಶ್ವದ ಹಜ್‌ ಯಾತ್ರೆಯಲ್ಲಿ ಭಾರತದ ಕೀರ್ತಿ ಧ್ವಜವನ್ನು ಹಾರಿಸಿ ಎಂದು ಇಸ್ಲಾಂ ಧರ್ಮಗುರು ಮೌಲಾನಾ ಸೈಯ್ಯದ್‌ ಮೊಹ್ಮದ್‌ ತನ್ವೀರ್‌ ಪೀರಾ ಹಾಸ್ಮಿ ಕರೆ ನೀಡಿದರು. ಹಜ್‌ ಯಾತ್ರೆಯ ವಿಶೇಷ ಪ್ರಾರ್ಥನೆ ಸಂದರ್ಭದಲ್ಲಿ ಭಾರತದಲ್ಲಿ ಶಾಂತಿ, ನೆಮ್ಮದಿ, ಉತ್ತಮ ಮಳೆ, ಬೆಳೆ, ರೈತರು ಸೇರಿದಂತೆ ಎಲ್ಲ ಭಾರತೀಯ ಅಲ್ಹಾಹುವಿನಲ್ಲಿ
ಪ್ರಾರ್ಥನೆ ಸಲ್ಲಿಸಿ ಎಂದು ಮನವಿ ಮಾಡಿದರು. 

ವಿವಾದಾತ್ಮಕ ಹೇಳಿಕೆ
“ಕಾಂಗ್ರೆಸ್‌ ಪಕ್ಷದ ರಕ್ತದ ಕಣ ಕಣದಲ್ಲೂ ದೇಶಭಕ್ತಿ ಇದ್ದು, ಬಿಜೆಪಿ ಬಡ್ಡಿ ನನ್ನ ಮಕ್ಕಳಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಿಲ್ಲ’ ಎಂದು ಟೀಕಿಸುವ ಮೂಲಕ ನಗರಾಭಿವೃದ್ಧಿ ಸಚಿವ ರೋ‚ಷನ್‌ ಬೇಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳವಾರ ನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತ ದೇಶಭಕ್ತಿಯ ಬಗ್ಗೆ ಪ್ರಸ್ತಾಪಿಸಿದ ಅವರು, “ಬಿಜೆಪಿಯವರು ದೇಶಭಕ್ತಿಯ ಬಗ್ಗೆ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ, ಬಿಜೆಪಿ ಬಡ್ಡಿ ನನ್ಮಕ್ಕಳಿರಾ, ನಿಮ್ಮಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಿಲ್ಲ’ ಎಂದು ಉದ್ವೇಗದಿಂದ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next