ನನಗೆ ಮೊದಲಿನಿಂದಲೂ ಕೂದಲ ಆರೈಕೆ ಬಗ್ಗೆ ವಿಪರೀತ ಆಸಕ್ತಿ. ಅದಕ್ಕೆ ತಕ್ಕಂತೆ ದಟ್ಟವಾದ, ನೀಳ, ರೇಷ್ಮೆಯಂತಹ ಕಪ್ಪು ಕೂದಲು ನನಗಿತ್ತು. ಮದುವೆ ಆಗೋದ್ರೊಳಗೆ ಕೂದಲ ಬಗ್ಗೆ ತುಂಬಾ ಕ್ರಮ ಕೈಗೊಳ್ತಾ ಇದ್ದೆ. ಕೂದಲ ಆರೈಕೆ ಬಗ್ಗೆ ಯಾರೇನು ಹೇಳಿದರೂ ಮಾಡ್ತಾ ಇದ್ದೆ. ಇದುವರೆಗೂ ಶಾಂಪೂ ಕೂದಲಿಗೆ ಹಾಕಿ ಸ್ನಾನ ಮಾಡಿದ್ದಿಲ್ಲ. ಶೀಗೆ ಪುಡಿನೇ ಹಾಕದು. ಮತ್ತಿಸೊಪ್ಪಿನ ಲೋಳೆ, ಮೆಂತೆ ನೆನೆಸಿ ಬೀಸಿ ತಲೆಗೆ ಹಚ್ಚಿ ಸ್ನಾನ ಮಾಡೋದು, ಕೊಬ್ಬರಿ ಎಣ್ಣೆಗೆ ಬಿಳಿ ದಾಸವಾಳ ಹೂವಿನ ಎಸಳು ಹಾಕಿ, ಸಣ್ಣ ಉರಿಯಲ್ಲಿ ಕಾಯಿಸಿ ಆರಿಸಿ ಇಟ್ಟುಕೊಂಡು ತಲೆಗೆ ಹಚ್ಚೋದು. ಒಂದೇ ಎರಡೇ… ಕೂದಲಿನ ವಿಚಾರದಲ್ಲಿ ಯಾರು ಏನೇ ಹೇಳಿದರೂ ಮಾಡೋದು… ಇದೆಲ್ಲ ಮದುವೆ ಆಗೋದ್ರೊಳಗೆ… ಡಿಗ್ರಿ ಆಯ್ತು. ನಂತರ, ಮದುವೆನೂ ಆಯ್ತು.
ಮದುವೆ ಆದ್ಮೇಲೆ, ಸಂಸಾರ, ಗಂಡ ಮಕ್ಕಳು ಹೇಳ್ತಾ ಕೂದಲ ಆರೈಕೆ ಬಗ್ಗೆ ಎಲ್ಲಿ ಟೈಂ ಇರತ್ತೆ ಹೇಳಿ? ನಾನೂ ಅಷ್ಟೇ, ಕೂದಲ ಬಗ್ಗೆ ಅಷ್ಟೊಂದು ಗಮನ ಕೊಟ್ಟೇ ಇರಲಿಲ್ಲ. ಮಕ್ಕಳು ಒಂದು ಹಂತಕ್ಕೆ ಬಂದು, ಅವರ ಕೆಲಸಗಳನ್ನು ಅವರೇ ಮಾಡ್ಕೊಳ್ಳೋ ಹೊತ್ತಿಗೆ, ನನಗೆ ನಲವತ್ತು ದಾಟಿ ಹೋಗಿತ್ತು. ಮಕ್ಕಳು, ಮನೆ, ನೆಂಟರು ಸಂಭಾಳಿಸುವ ಭರದಲ್ಲಿ, ನನ್ನ ಬಗ್ಗೆ ಕೇರ್ ತೆಗೆದುಕೊಳ್ಳುವ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದ್ರೂ, ನೋಡಿದವರು ಚೆನ್ನಾಗಿ ಇದೀನಿ ಅಂದಾಗ, ಯಾರಿಗೆ ತಾನೆ ಖುಷಿ ಆಗಲ್ಲ ಹೇಳಿ? ಈಗೀಗ ಸ್ವಲ್ಪ ಸಮಯ ಸಿಗ್ತಾ ಇತ್ತು. ಹೀಗೆ ಒಂದು ದಿನ, ನನ್ನಷ್ಟಕ್ಕೆ ನಾನು, ನನ್ನ ಇಷ್ಟದ “ಚಂದನ್ ಸ ಬದನ್, ಚಂಚಲ್ ಚಿತವನ್…’ ಹಾಡು ಗುನುಗುತ್ತಾ ಕೂದಲು ಬಾಚುತ್ತಾ, ಕನ್ನಡಿ ನೋಡಿದೆ. ಮುಂದಲೆಯಲ್ಲಿ ನಾಲ್ಕೈದು ಬಿಳಿ ಕೂದಲು.. ಒಂದು ಸಲ ಶಾಕ್ ಹೊಡೆದ ಹಾಗೆ ಆಯ್ತು. ನನಗೆ ಬಿಳಿ ಕೂದಲು? ಅಳುನೂ ಬಂತು. ನಾನು ಮುದುಕಿ ಆಗಿಬಿಟ್ಟೆ. ಬಿಳಿ ಕೂದಲಿನ ಯೋಚನೆಯಲ್ಲಿ, ಯಾವ ಕೆಲಸದಲ್ಲಿ ಕೂಡ ಆಸಕ್ತಿ ಬರಲೇ ಇಲ್ಲ. ಮನೆಯವರು ಬರೋದನ್ನೇ ಕಾಯ್ತಾ ಕುಳಿತೆ. ನಮ್ಮ ಟೆನÒನ್ ಹೇರಲು ಸರಿಯಾಗಿ ಸಿಗುವವರು ಅವರೊಬ್ಬರೇ ಅಲ್ವಾ?
ಆಫೀಸ್‌ನಿಂದ ಮನೆಯವರು ಬಂದಾಗ, ನನ್ನ ಮುಖ ಕಪ್ಪಾದ ಮೋಡ ಕಟ್ಟಿದ ಬಾನಿನಂತೆ ಇತ್ತು. ಇನ್ನೇನು ಮಳೆ ಪ್ರಾರಂಭ ಆಗೋದ್ರಲ್ಲಿ ಇತ್ತು. ಗಂಡ ಬಂದಕೂಡಲೇ, “ರೀ, ಇಷ್ಟು ದಿನವೂ ಬರೀ ಕೆಲಸ ಕೆಲಸ ಅಂತ ಹೇಳಿ ನನ್ನ ಈ ಮನೆಗಾಗಿ ದುಡಿಸಿ ಬಿಟ್ರಿ. ಒಂದು ಒಳ್ಳೆಯ ಟೂರ್‌ಗೆ ಕರ್ಕಹೋದ್ರಾ? ನೋಡಿ ಎಷ್ಟು ಬೇಗ ವಯಸ್ಸಾಗೋಯ್ತು? ಇನ್ನು ಜೀವನದಲ್ಲಿ ಏನಿದೆ ಹೇಳಿ?’ ಎನ್ನುತ್ತಾ ಗಂಗಾ ಭಾಗೀರಥಿ ಕಣ್ಣಿಂದ ಹರಿಯ ತೊಡಗಿತು.
“ಅಯ್ಯೋ,ಕರ್ಮವೇ? ಇವತ್ತು ಹೇಗೆ ಗೊತ್ತಾಯೆ¤à? ನಿನಗೆ ವಯಸ್ಸಾಯ್ತು ಅಂತ? ಇಷ್ಟು ದಿನ ಇರದೇ ಇದ್ದಿದ್ದು, ಇದೇನು ಹೊಸತು?’ ಎಂದು ಕೇಳಿದ್ರು. “ನೋಡಿ, ನನ್ನ ತಲೆಯಲ್ಲಿ ಬಿಳಿ ಕೂದಲು…’ “ಬಿಳಿ ಕೂದಲು ಕಂಡ್ರೆ ವಯಸ್ಸಾಯ್ತು ಅಂತನಾ? ಅಷ್ಟಕ್ಕೂ ಎಲ್ಲೋ ಒಂದು ನಾಲ್ಕು ಕೂದಲು ಬೆಳ್ಳಗೆ ಆಗಿರಬಹುದು. ಅಷ್ಟಕ್ಕೆ ವಯಸ್ಸಾಯ್ತು ಅಂತ ಅಳ್ತಾ ಕೂತಿದೀಯಲ್ಲೋ? ಈಗ ಎಷ್ಟು ಚಿಕ್ಕ ಮಕ್ಕಳಿಗೆ ಕೂದಲು ಬಿಳಿ ಆಗುತ್ತೆ. ನಿನಗೆ ಇನ್ನೂ ಕಪ್ಪು ಕೂದಲು ಸಾಕಷ್ಟಿವೆ. ಅಯ್ಯೋ ಹುಚ್ಚಿ. ನೀನಿನ್ನೂ ಯಂಗ್ ಆಗೇ ಕಾಣ್ತೀಯಾ… ನನಗಂತೂ ನೀನು ಯಾವಾಗಲೂ ಹೀರೋಯಿನ್ ಹಾಗೇ ಕಾಣೋದು. ನಡಿ ನಿನ್ನ ಕೆಲಸ ನೋಡು ಹೋಗು’ ಎಂದು ಹೇಳಿ ತಮ್ಮ ಕೆಲಸಕ್ಕೆ ಹೋಗಿ ಬಿಟ್ಟರು. ಮನೆಯವರು, ಅಷ್ಟು ಹೇಳಿದ್ರೂ, ತಲೆಯಲ್ಲಿ ಬಿಳಿ ಕೂದಲಿನ ಚಿಂತೆ ತುಂಬಿ ಹೋಗಿತ್ತು. ಮತ್ತೆ ಮತ್ತೆ ಕನ್ನಡಿ ಮುಂದೆ ನಿಂತು ಬಿಳಿ ಕೂದಲು ನೋಡೋದು. ಏನೋ ಒಂದು ರೀತಿಯ ಸಂಕಟ ಆಗ್ತಾ ಇತ್ತು. ಆ ದಿನ ತುಂಬಾ ಡಲ್ ಇದ್ದೆ..
ಮಕ್ಕಳು ಕಾಲೇಜಿಂದ ಬಂದಾಗ ಅಮ್ಮನ ಮುಖ ನೋಡಿ, “ಅಮ್ಮ, ಏನಾಯ್ತು? ಸಪ್ಪಗೆ ಇದೀಯಾ’ ಅಂತ ಕೇಳ್ದಾಗ, “ನೋಡಿ, ನಿಮ್ಮ ಅಮ್ಮ ಮುದುಕಿ ಆಗಿ ಬಿಟ್ಟಳು. ನಿಮ್ಮ ಅಪ್ಪ ಬರೀ ಆಫೀಸ್.. ಆಫೀಸ್… ಅಂತ ಒಂದು ಕಡೆ ಕರೆದು ಕೊಂಡು ಹೋಗಿಲ್ಲ. ಒಂದು ಒಳ್ಳೆ ಡ್ರೆಸ್ ಹಾಕಿಲ್ಲ. ಇಬ್ರೂ ಸೇರಿ ಒಂದು ಒಳ್ಳೆಯ ಫೋಟೋ ತೆಗೆದು ಕೊಂಡಿಲ್ಲ’ ಅಂದಾಗ, ಮಗ, “ಅಮ್ಮ ಏನಾಗಿದೆ ನಿನಗೆ? ಬಾ ಇಲ್ಲಿ, ನೋಡು ಕನ್ನಡಿ. ನಿನಗೆ ಬಿಳಿ ಕೂದಲು ತುಂಬಾ ಚೆನ್ನಾಗಿ ಕಾಣುತ್ತದೆ. ಕರಿ ಮೋಡದ ನಡುವಿಂದ ಹುಣ್ಣಿಮೆಯ ಚಂದ್ರ ಇಣುಕಿದ ಹಾಗೆ. ಇದು ನಿನ್ನ ಮುಖಕ್ಕೆ ಒಂದು ವಿಶೇಷ ಗಾಂಭೀರ್ಯ ತಂದುಕೊಟ್ಟಿದೆ. ನೀ ಹೇಗೆ ಇದ್ರೂ ನಮಗೆ ಚಂದ. ಅಪ್ಪನಿಗೆ, ನಮಗೆ ಬುದ್ಧಿ ಹೇಳಿ ತಿದ್ದುವ ನೀನೇ ಹೀಗೆ ಯೋಚನೆ ಮಾಡಿದ್ರೆ ಹೇಗೆ? ಅಮ್ಮ, ಬಾ ಹೊಟ್ಟೆ ಹಸೀತಾ ಇದೆ. ತಿನ್ನಲು ಕೊಡು’ ಅಂದಾಗ ಬಿಳಿ ಕೂದಲಿನ ಚಿಂತೆಯಲ್ಲಿ ಮಕ್ಕಳಿಗೆ ತಿಂಡಿ ಮಾಡದೇ ಇದ್ದಿದ್ದು ನೆನಪು ಆಯ್ತು.
“ಬಂದೇ, ಎರಡೇ ನಿಮಿಷದಲ್ಲಿ ರೆಡಿ ಮಾಡ್ತೀನಿ’ ಎನ್ನುತ್ತಾ, ಸ್ಟೌವ್ ಆನ್ ಮಾಡೆª. ನಿಜ, ಮಕ್ಕಳು ಹೇಳಿದ್ದು. ಸೌಂದರ್ಯ ನೋಡುವ ಕಣ್ಣಲ್ಲಿ ಇದೆ. ಹುಟ್ಟಿದ ಮನುಷ್ಯನಿಗೆ ವಯಸ್ಸಾಗೋದು ಸಹಜ. ಬಾಲ್ಯ ಯೌವನ, ನಿಧಾನವಾಗಿ ಆವರಿಸುವ ಮುಪ್ಪು, ಪ್ರಕೃತಿಯ ಸಹಜ ಕ್ರಿಯೆ. ಇದನ್ನು ನಾವೂ ಅಷ್ಟೇ ಸಹಜವಾಗಿ ತೆಗೆದುಕೊಂಡು ನಮ್ಮನ್ನು ನಾವು ಪ್ರೀತಿಸಲು ಕಲಿತಾಗ ಮಾತ್ರ ಬಿಳಿ ಕೂದಲು ಕೂಡ ನಮಗೆ ಚೆನ್ನಾಗಿ ಕಾಣುತ್ತದೆ. ಮತ್ತೆ ಹೋಗಿ ಕನ್ನಡಿ ಮುಂದೆ ನಿಂತೆ. ಬಿಳಿ ಕೂದಲು ನನಗೆ ಚೆನ್ನಾಗಿ ಒಪ್ತಾ ಇತ್ತು.. ಈಗ ಅದೇ ಬಿಳಿ ಕೂದಲು, ಈಗ ಮದರಂಗಿ ಲೇಪನದಿಂದ ಕೆಂಬಣ್ಣದಲ್ಲಿ ಶೋಭಿಸುತ್ತಿದೆ. ಮದರಂಗಿಯಲ್ಲಿ ನನ್ನ ಚೆಲುವು ಅರಳಿದೆ ಅನ್ನದೇ ಹೋದ್ರೆ ತಪ್ಪಾದೀತು ಅಲ್ವಾ?!!
-ಶುಭಾ ನಾಗರಾಜ್