Advertisement

ಕ್ಯಾನ್ಸರ್‌ ರೋಗಿಗಳಿಗೆ ಕೂದಲು ನೀಡಿದ ವೇಣಿದಾನಿಗಳು

12:03 PM Mar 05, 2018 | Team Udayavani |

ಬೆಂಗಳೂರು: ಜೀವನೋತ್ಸಾಹ ಕಳೆದುಕೊಂಡ ಕ್ಯಾನ್ಸರ್‌ ರೋಗಿಗಳ ಬಾಳಲ್ಲಿ ಚೈತನ್ಯದ ದೀಪ ಮೂಡಿಸಲು ನಗರದ ಸಮನ್ವಿತ ಸಂಸ್ಥೆ ವೇಣಿದಾನ (ಕೂದಲು ನೀಡುವಿಕೆ) ಕಾರ್ಯಕ್ರಮ ರೂಪಿಸಿ ಉತ್ಸಾಹವನ್ನೇ ಕಳೆದುಕೊಂಡ ರೋಗಿಗಳ ಬಾಳಲ್ಲಿ ಮತ್ತೆ ಹೊಂಗನಸು ಬಿತ್ತಿದೆ.

Advertisement

ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡುವಾಗ ರೋಗಿಗಳ ಮೇಲೆ ಚಿಕಿತ್ಸಾ ಕ್ರಮವು ಅಡ್ಡಪರಿಣಾಮಗಳನ್ನು ಬೀರಿ ಕೂದಲು ಕಳೆದುಕೊಳ್ಳಬೇಕಾಗುತ್ತದೆ. ಕೀಮೊಥೆರಪಿ ಚಿಕಿತ್ಸೆಗೆ ಒಳಪಟ್ಟರಂತೂ ಅಮೂಲ್ಯವಾದ ತಲೆಕೂದಲು ಕಳೆದುಕೊಂಡು ಖನ್ನತೆಗೆ ಒಳಗಾಗುತ್ತಾರೆ. ಕೂದಲು ಉದುರುವ ಸಮಸ್ಯೆಯಿಂದಾಗಿ ಮಹಿಳಾ ರೋಗಿಗಳು ಯಾವುದೇ ಸಭೆ, ಸಮಾರಂಭಗಳಿಗೆ ಹೋಗುವುದಿಲ್ಲ.

ಇವರ‌ ಬಾಳಲ್ಲಿ ಆಶಾಕಿರಣ ಮೂಡಿಸಿ, ಧೈರ್ಯ, ಜೀವನೋತ್ಸಾಹ ತುಂಬುವ ಉದ್ದೇಶ ಸಂಸ್ಥೆಯದ್ದಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಬಸವನಗುಡಿಯಲ್ಲಿ ಮೇಟ್ರೋ ನಿಲ್ದಾಣ ಸಮೀಪದ ಅರಳಿಕಟ್ಟೆ ಉದ್ಯಾನದಲ್ಲಿ ಕೂದಲು ಕಳೆದುಕೊಂಡ ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಲು ಹಮ್ಮಿಕೊಂಡ “ವೇಣಿದಾನ ‘ ಕಾರ್ಯಕ್ರಮ ಹಲವರ ಪ್ರಶಂಸೆಗೆ ಪಾತ್ರವಾಯಿತು.

ಹೇರ್‌ ಫಾರ್‌ ಹೋಪ್‌ ಸಂಸ್ಥೆಯ ಜೊತೆಗೆ ಆಯೋಜಿಸಿದ್ದ ಈ ವೇಣಿದಾನ ಕಾರ್ಯಕ್ರಮದಲ್ಲಿ ಹನ್ನೊಂದು ಮಂದಿ ಕೂದಲು ದಾನ ಮಾಡಿದರು.ಇದರಲ್ಲಿ ಮೂವರು ಪುರುಷರು ಮತ್ತು ಎಂಟು ಯುವತಿಯರು ತಮ್ಮ ಕೂದಲು ದಾನ ಮಾಡಿದರು.

ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿದು ಕೇರಳದಿಂದ ಬಂದಿದ್ದ ಮರಿಯಾ ಎಂಬವವರು ತಮ್ಮ ಕೂದಲು ದಾನ ಮಾಡಿದ್ದು ವಿಶೇಷವಾಗಿತ್ತು. ಸುಮಾರು 13ರಿಂದ 15 ಇಂಚು ಉದ್ದದ ಕೂದಲನ್ನು ಅವರು ದಾನ ಮಾಡಿದರು.

Advertisement

ವೇಣಿದಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಮನ್ವಿತ ಸಂಸ್ಥೆಯ ಆರ್‌.ಕೆ.ರಾಧಾಕೃಷ್ಣ, “ಈ ಕಾರ್ಯದಲ್ಲಿ ಹೇರ್‌ ಫಾರ್‌ ಹೋಪ್‌ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಇಲ್ಲಿ ಸಂಗ್ರಹವಾದ ಕೂದಲನ್ನು ಸಂಸ್ಥೆಗೆ ನೀಡಲಾಗುವುದು. ಈ ಸಂಸ್ಥೆ ಕೂದಲು ಕಳೆದು ಕೊಂಡಿರುವವರಿಗೆ ವಿಗ್‌ ವಿನ್ಯಾಸ ಪಡಿಸಿ ನೀಡಲಿದೆ ಎಂದು ಹೇಳಿದರು. 2013ರಿಂದ ಆರಂಭವಾದ ವೇಣಿದಾನ ಕಾರ್ಯಕ್ರಮದಲ್ಲಿ ಈವರೆಗೆ ಸುಮಾರು 9000 ದಾನಿಗಳು ತಮ್ಮ ಕೂದಲನ್ನು ಸಮರ್ಪಿಸಿದ್ದಾರೆಂದು ತಿಳಿಸಿದರು.

ಮೆಚ್ಚುಗೆ ಮಾತು: ಹೇರ್‌ ಫಾರ್‌ ಹೋಪ್‌ ಸಂಸ್ಥೆ ಅಮೆರಿಕ ಸೇರಿದಂತೆ ಹಲವೆಡೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ. ಅಲ್ಲಿಯೂ ಕೂಡ ಕೂದಲುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೇ ಮಾದರಿಯಾಗಿ ಪಡೆದ ಸಮನ್ವಿತ ಸಂಸ್ಥೆ ಇದೀಗ ವೇಣಿದಾನ ಕಾರ್ಯಕ್ರಮವನ್ನು ರೂಪಿಸಿದೆ.

ಕೀಮೊ ಥೆರಪಿ ದೇಹದ ಜೀವಕಣಗಳ ಮೇಲೆ ಪರಿಣಾಮ ಬೀರುವ ಮೂಲಕ ಕೂದಲು ಉದರುತ್ತವೆ. ಇದರಿಂದ ಖನ್ನತೆಗೆ ಒಳಗಾಗುವ ಕ್ಯಾನ್ಸರ್‌ ರೋಗಿಗಳಿಗೆ ಜೀವನೋತ್ಸಾಹ ಮೂಡಿಸಲು ವೇಣಿದಾನ ಕಾರ್ಯಕ್ರಮ ರೂಪಿಸಲಾಗಿದೆ. ಕ್ಯಾನ್ಸರ್‌ ರೋಗಿಗಳ ಬಾಳಿಗೆ ದೀಪವಾಗುವ ಇಂತಹ ಕಾರ್ಯಕ್ಕೆ ಹೆಚ್ಚು ಜನರು ಕೈಜೋಡಿಸಬೇಕು.
-ಆರ್‌.ಕೆ.ರಾಧಾಕೃಷ್ಣ, ಸಮನ್ವಿತ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next