Advertisement

Onion Benefits: ಕೂದಲ ಆರೋಗ್ಯಕ್ಕೆ ಈರುಳ್ಳಿ ಅತ್ಯುತ್ತಮ ಮದ್ದು!

05:26 PM Nov 11, 2023 | Team Udayavani |

ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಪ್ರತಿಯೊಬ್ಬರು ತಲೆ ಕೂದಲಿನ ಬಗ್ಗೆ ತಲೆ ಕೆಡಿಸುವುದು ಸಾಮಾನ್ಯ. ಈಗಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ  ಎಲ್ಲರಲ್ಲೂ ಕಾಣುವಂತ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಹೀಗೆ ಕೂದಲಿನ ಸಮಸ್ಯೆಗಳು ಅನೇಕ. ಇತ್ತೀಚಿಗಿನ ದಿನಗಳಲ್ಲಿ ನಾವು ಬಳಸುವ ಕೆಲ ರಾಸಾಯನಿಕ ಉತ್ಪನ್ನಗಳಿಂದ ಕೂದಲಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಬಹುದು. ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಈರುಳ್ಳಿ ಮನೆಮದ್ದು.

Advertisement

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ತರಕಾರಿ ಈರುಳ್ಳಿ. ಏಕೆಂದರೆ ಈರುಳ್ಳಿ ಬೆಲೆ ಈಗ ಗಗನಕ್ಕೇರಿದೆ. ಆದರೆ ಈರುಳ್ಳಿಯಿಂದ ತಲೆ ಕೂದಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದು ಸುಳ್ಳಲ್ಲ. ಈರುಳ್ಳಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಬಳಸುವುದು ಉತ್ತಮ. ಹೀಗೆ ಈರುಳ್ಳಿಯ ಕುರಿತು ವಿವಿಧ ವಿಷಯಗಳನ್ನು ತಿಳಿದುಕೊಳ್ಳೋಣ..

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ:

ತಲೆ ಕೂದಲಿಗೆ ನಾವು ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಬಳಸುತ್ತೇವೆ. ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸ ಉಪಯೋಗಿಸುವುದು ತಲೆ ಕೂದಲಿಗೆ ಇನ್ನೂ ಉತ್ತಮ. 2 ಚಮಚ ತೆಂಗಿನ ಎಣ್ಣೆಯೊಂದಿಗೆ 1 ಚಮಚ ಈರುಳ್ಳಿ ರಸ ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಕೂದಲು ಸ್ವಚ್ಛಗೊಳಿಸಿ.

ಇದರ ಬದಲಾಗಿ ಈರುಳ್ಳಿ ಎಣ್ಣೆ ತಯಾರಿಸಿಯೂ ಬಳಸಬಹುದು. ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಈರುಳ್ಳಿ ರಸ ತೆಗೆದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಆ ಎಣ್ಣೆಗೆ ಈರುಳ್ಳಿ ರಸ ಸೇರಿಸಿ ಬಿಸಿ ಮಾಡಿಕೊಳ್ಳಬೇಕು. ಬಿಸಿ ಮಾಡಿದ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು, ತಣ್ಣಗಾದ ಮೇಲೆ ಆ ಎಣ್ಣೆಯನ್ನು ತಲೆಯ ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಹಚ್ಚಿಕೊಳ್ಳಿ.

Advertisement

ಈ ಎಣ್ಣೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಹಾಗೂ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ನಿತ್ಯ ಈ ಎಣ್ಣೆ ಬಳಸುವುದರಿಂದ ವ್ಯತ್ಯಾಸ ಗುರುತಿಸಬಹುದು.

ಈರುಳ್ಳಿ ಮತ್ತು ಮೊಸರು:

2 ಚಮಚ ಮೊಸರು, 2 ಚಮಚ ಈರುಳ್ಳಿ ರಸ ಸೇರಿಸಿ, ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿಕೊಳ್ಳಬೇಕು. ಒಂದು ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆ ಕೂದಲಿಗೆ ಹೊಳಪನ್ನು ನೀಡುವುದು ಮಾತ್ರವಲ್ಲದೆ, ತಲೆ ಕೂದಲು ಉದುರುವುದನ್ನು ಮತ್ತು ಅರ್ಧಕ್ಕೆ ಮುರಿದು ಹೋಗುವುದನ್ನು ತಡೆಯುತ್ತದೆ. (ಶೀತ ಸ್ವಭಾವದವರು ಇದನ್ನು ಬಳಸದಿರುವುದು ಉತ್ತಮ)

ಈರುಳ್ಳಿ ಮತ್ತು ಅಲೋವೆರಾ:

2 ಚಮಚ ಈರುಳ್ಳಿ ರಸ,1 ಚಮಚ ಅಲೋವೆರಾ ರಸ, ಅರ್ಧ ಚಮಚ ಆಲಿವ್ ಆಯಿಲ್. ಇವೆಲ್ಲವನ್ನು ಮಿಶ್ರಣ ಮಾಡಿ ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಕೆಲ ನಿಮಿಷಗಳವರೆಗೆ ಚೆನ್ನಾಗಿ ಮಸಾಜ್ ಮಾಡಿ. 15-20 ನಿಮಿಷಗಳು ಹಾಗೆ ಬಿಟ್ಟು ನಂತರ ನಿಮ್ಮ ಆಯ್ಕೆಯ ಶಾಂಪು ಬಳಸಿ ಸ್ನಾನ ಮಾಡಿ.

ಈರುಳ್ಳಿ ಮತ್ತು ಆಲೀವ್ ಎಣ್ಣೆ:

ಈರುಳ್ಳಿಯನ್ನು ಚೆನ್ನಾಗಿ ರುಬ್ಬಿ, ಆಲೀವ್ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ನಂತರ 2 ಗಂಟೆಗಳ ಬಳಿಕ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ:

1 ಚಮಚ ಈರುಳ್ಳಿ ಎಣ್ಣೆ ಮತ್ತು 1 ಚಮಚ ಬೆಳ್ಳುಳ್ಳಿ ಎಣ್ಣೆ, 1 ಚಮಚ ಆಲಿವ್ ಎಣ್ಣೆ. ಇವೆಲ್ಲವನ್ನೂ ಮಿಶ್ರಣ ಮಾಡಿ ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಒಂದು ಗಂಟೆ ಹಾಗೆ ಬಿಟ್ಟು ಆನಂತರ ಶಾಂಪು ಹಾಕಿ ಸ್ನಾನ ಮಾಡಿ. ಇದು ತಲೆಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಹಾಗೂ ತಲೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.

1 ಈರುಳ್ಳಿ ಕತ್ತರಿಸಿ, ರುಬ್ಬಿಕೊಂಡು ಆ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ಬಳಿಕ ಎರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಿ ಅಥವಾ ರಾತ್ರಿ ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ ಮರುದಿನ ಮುಂಜಾನೆ ಸ್ನಾನ ಮಾಡಬಹುದು. ಈರುಳ್ಳಿ  ಬಳಕೆಯಿಂದ ಕೂದಲು ಹೊಳಪಾಗುತ್ತದೆ.

ಹೀಗೆ ಕೂದಲಿಗೆ ಈರುಳ್ಳಿಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ಇದನ್ನು ಬಳಸುವ ಮುನ್ನ ಈರುಳ್ಳಿ ಅಲರ್ಜಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನಂತರವಷ್ಟೇ ಈರುಳ್ಳಿಯನ್ನು ಕೂದಲಿಗೆ ಉಪಯೋಗಿಸಿ, ವ್ಯತ್ಯಾಸ ಕಂಡುಕೊಳ್ಳಿ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next