Advertisement
ಬೇಸಿಗೆಯಲ್ಲಿ ಕೂದಲು ಬೇಗನೆ ಶುಷ್ಕವಾಗುವುದರಿಂದ ಯಾವುದೇ ಅಧಿಕ ಹೇರ್ ಟ್ರೀಟ್‌ಮೆಂಟ್ ಅಥವಾ ರಾಸಾಯನಿಕಗಳನ್ನು ಉಪಯೋಗಿಸಿ ಕೂದಲಿನ ಸೌಂದರ್ಯ ವರ್ಧನೆ ಮಾಡುವುದು ಹಿತಕರವಲ್ಲ. ಉತ್ತಮ ಮೂಲಿಕೆಯ ಶ್ಯಾಂಪೂ, ಹೇರ್ ಕಂಡೀಶನರ್‌ಗಳ ಬಳಕೆ ಅವಶ್ಯ. ಈಜುಕೊಳ ಬಳಸುವವರು ಕೂದಲಿಗೆ ಶ್ಯಾಂಪೂ ಬಳಸಿ ಈಜಾಡಲು ಹೋಗಕೂಡದು. ಕೂದಲಿಗೆ ಎಣ್ಣೆ ಹಚ್ಚಿದರೆ ಹಿತಕರ. ಈಜಾಡಿದ ಬಳಿಕ ಈಥೈಲಿನ್ ಟೆಟ್ರಾ ಅಸಿಟಿಕ್ ಆಮ್ಲದ ಅಂಶವುಳ್ಳ ಶ್ಯಾಂಪೂ ಬಳಸಿದರೆ, ಈಜುಕೊಳದ ನೀರಿನಲ್ಲಿರುವ ಕ್ಲೋರಿನ್‌ನಿಂದ ಕೂದಲಿಗೆ ಉಂಟಾಗುವ ಹಾನಿ ನಿವಾರಣೆಯಾಗುವುದು.
ಕೂದಲಿಗೆ ಪ್ರಖರ ಬಿಸಿಲಿನ ಹಾನಿ ತಪ್ಪಿಸಲು ಹ್ಯಾಟ್, ಕ್ಯಾಪ್, ಸ್ಕಾಫ್ì ಇತ್ಯಾದಿ ಬಳಸಿದರೆ ಉತ್ತಮ. ಬಿಸಿಲಿನಲ್ಲಿ ಓಡಾಡುವವರು ಸನ್‌ಸ್ಕೀನ್‌ನ ಅಂಶವುಳ್ಳ ಹೇರ್ ಕಂಡೀಷನರ್ ಬಳಸಿದರೆ ಬಿಸಿಲಿನ ಝಳದಿಂದ ಕೂದಲಿಗೆ ಹನಿಯಾಗುವುದಿಲ್ಲ.
Related Articles
Advertisement
ಕೂದಲಿಗೆ ಡೀಪ್ ಕಂಡೀಷನರ್‌ಗಳನ್ನು ಬಳಸುವುದು ಹಿತಕರ. ವಾರಕ್ಕೆ 1-2 ಬಾರಿ ಕೂದಲು ತೊಳೆಯಬೇಕು. ಅಧಿಕ ಕೂದಲು ತೊಳೆಯುವುದೂ ಉತ್ತಮವಲ್ಲ. “ಫಾರ್ಮಾಲ್ಡಿಹೈಡ್’ನ ಅಂಶವುಳ್ಳ ಕೂದಲಿನ ಉತ್ಪನ್ನಗಳ ಬಳಕೆ ಸಲ್ಲದು.
ಬೇಸಿಗೆಗಾಗಿ ಹೇರ್ಮಾಸ್ಕ್ಶುಷ್ಕ ಕೂದಲಿಗೆ: 1/4 ಕಪ್ ಮೊಸರು, 1/4 ಕಪ್ ಮಯಾನ್ನೀಸ್, 1 ಮೊಟ್ಟೆಯ ಬಿಳಿಭಾಗ. ವಿಧಾನ: ಎಲ್ಲವನ್ನೂ ಮಿಕ್ಸರ್‌ನಲ್ಲಿ ಚೆನ್ನಾಗಿ ತಿರುವಿ ಪೇಸ್ಟ್ ತಯಾರಿಸಬೇಕು. ಇದನ್ನು ಲೇಪಿಸಿ ಹೇರ್‌ಮಾಸ್ಕ್ ಮಾಡಬೇಕು. 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆದರೆ ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ. ತೈಲಾಂಶವುಳ್ಳ ಜಿಡ್ಡಿನ ಕೂದಲಿನವರಿಗೆ: ಎಲೋವೆರಾ ತಿರುಳು 4 ಚಮಚಕ್ಕೆ 8-10 ಹನಿ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ 15 ನಿಮಿಷಗಳ ಬಳಿಕ ಕೂದಲು ತೊಳೆದರೆ ಕಾಂತಿಯುತ ರೇಶಿಮೆ ನುಣಪನ್ನು ಕೂದಲು ಪಡೆಯುತ್ತದೆ. 1/4 ಕಪ್ ಸ್ಟ್ರಾಬೆರಿ ಹಣ್ಣಿನ ತಿರುಳು, ಮೊಸರು 1/4 ಕಪ್, ಮೆಂತೆಹುಡಿ 2 ಚಮಚ ಎಲ್ಲವನ್ನೂ ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್ ತಯಾರಿಸಬೇಕು. ಕೂದಲಿಗೆ ಲೇಪಿಸಿ 20 ನಿಮಿಷಗಳ ಬಳಿಕ ಕೂದಲು ತೊಳೆದರೆ ತುರಿಕೆ, ಹೊಟ್ಟು ಉದುರುವುದು ನಿವಾರಣೆಯಾಗುತ್ತದೆ. ಸ್ಟ್ರಾಬೆರಿ ಹಣ್ಣಿನಲ್ಲಿ ಎಕ್ಸ್‌ಫೋಲಿಯೇಟಿಂಗ್ ಗುಣವಿದೆ ಹಾಗೂ ಅದರಲ್ಲಿರುವ ವಿವಿಧ ಆಮ್ಲಗಳು ಹಾಗೂ ವಿಟಮಿನ್‌ಗಳು ಕೂದಲಿಗೆ ಪೋಷಣೆ ನೀಡುತ್ತವೆ. ಕೂದಲು ಉದುರುವುದು ನಿವಾರಣೆಯಾಗುತ್ತದೆ. ಬಾಳೆಹಣ್ಣು ಹಾಗೂ ಆಲಿವ್ ತೈಲದ ಹೇರ್‌ಮಾಸ್ಕ್
2 ಬಾಳೆಹಣ್ಣು ತೆಗೆದುಕೊಂಡು ಚೆನ್ನಾಗಿ ಮಸೆದು ಪೇಸ್ಟ್ ತಯಾರಿಸಬೇಕು. ಇದಕ್ಕೆ 10 ಚಮಚ ಆಲಿವ್ ತೈಲ ಬೆರೆಸಬೇಕು. ಈ ಮಿಶ್ರಣವನ್ನು ಕೂದಲಿಗೆ ಲೇಪಿಸಿ 20 ನಿಮಿಷಗಳ ಬಳಿಕ ಕೂದಲು ತೊಳೆಯಬೇಕು. ಇದು ಕೂದಲ ತುದಿ ಟಿಸಿಲೊಡೆಯುವುದು, ಕೂದಲು ಉದುರುವುದು ಇತ್ಯಾದಿಗಳನ್ನು ನಿವಾರಣೆ ಮಾಡುತ್ತದೆ. ಬೇಸಿಗೆಯ ಬಿರುಬಿಸಿಲಿನಲ್ಲಿ ಕೂದಲು ಕಳಾಹೀನವಾಗದಂತೆ ಮಾಡುತ್ತದೆ. ಎಲೋವೆರಾ ಹಾಗೂ ಸ್ಟ್ರಾಬೆರಿ ಹಣ್ಣಿನ ಮಾಸ್ಕ್
1/4 ಕಪ್ ಸ್ಟ್ರಾಬೆರಿ ಹಣ್ಣಿನ ತಿರುಳಿಗೆ, 3 ಚಮಚ ಎಲೋವೆರಾ ತಿರುಳು ಬೆರೆಸಿ ಕೂದಲಿಗೆ ಲೇಪಿಸಬೇಕು. 20 ನಿಮಿಷಗಳ ಬಳಿಕ ಕೂದಲು ತೊಳೆದರೆ ಕೂದಲು ರೇಶಿಮೆಯ ನುಣುಪು ಪಡೆದುಕೊಳ್ಳುತ್ತದೆ. ಸೊಂಪಾಗಿ ಬೆಳೆಯುತ್ತದೆ. ಡಾ. ಅನುರಾಧಾ ಕಾಮತ್