ವಿಜಯಪುರ: ಜಿಲ್ಲೆಯ ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ತೋಟಗಾರಿಕೆ ಬೆಳೆಗಾರರು ಕಂಗೆಟ್ಟು ಹೋಗಿದ್ದಾರೆ. ಇದರ ಮಧ್ಯೆ ಇದೀಗ ಆಲಿಕಲ್ಲು ಮಳೆ ಅನ್ನದಾತನನ್ನು ಕಂಗಾಲು ಮಾಡುತ್ತಿದೆ.
ಕಳೆದ 3-4 ದಿನಗಳಿಂದ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯೂ ಸುರಿಯಲು ಆರಂಭಿಸಿದೆ. ಇದರಿಂದ ಕೊಯ್ಲಿಗೆ ಬಂದಿರುವ ವಿವಿಧ ಹಣ್ಣುಗಳ ತೋಟಗಾರಿಕೆ ಬೆಳೆಗಳಿ ಭಾರಿ ಹಾನಿ ಸಂಭವಿಸಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಪಿ.ಯು.ನಂದ್ಯಾಳ ಗ್ರಾಮದ ರೈತ ಶ್ರೀಶೈಲ ಮಲ್ಲಪ್ಪ ಹಂಡಿ ಇವರ 12 ಎಕರೆ ಬಾಳೆ, ಮುದ್ದೇಬಿಹಾಳ ತಾಲ್ಲೂಕಿನ ಮುರಾಳ ಗ್ರಾಮದ ವಿರುಪಾಕ್ಷ ಮುದ್ನಾಳ ಇವರ ತೋಟದಲ್ಲಿನ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ತಾಳಿಕೋಟಿ ತಾಲೂಕಿನ ತಮದಡ್ಡಿ ಗ್ರಾಮದ ಬಸವರಾಜ ಮಲಕೇಂದ್ರಗೌಡ ಸಾಸನೂರ ಇವರ ಬಾಳೆಬೆಳೆ ಸೇರಿದಂತೆ ಜಿಲ್ಲೆಯ ಬಹುತೇಕ ರೈತರ ಬಾಳೆ ಬೆಳೆ ನೆಲಕಚ್ಚಿದೆ.
ಇದರಿಂದ ಒಂದೆಡೆ ಕೋವಿಡ್-19 ಲಾಕ್ ಡೌನ್ ಪರಿಣಾಮ ಕೊಯ್ಲಿಗೆ ಬಂದಿದ್ದರೂ ಮಾರುಕಟ್ಟೆ ಇಲ್ಲದೇ ಕಟಾವು ಮಾಡದೇ ಬಿಟ್ಡಿದ್ದ ರೈತರಿಗೆ ಬಿರುಗಾಳಿ, ಆಲಿಕಲ್ಲು ಮಳೆ ಬಾಳೆಯನ್ನು ಹಾಳುಮಾಡಿ ಕಣ್ಣೀರು ತರಿಸಿದೆ.
ಸರ್ಕಾರ ತಕ್ಷಣ ಬೆಳೆಹಾನಿ ಸಮೀಕ್ಷೆ ನಡೆಸಿ ತುರ್ತಾಗಿ ಕನಿಷ್ಟ ಪರಿಹಾರವನ್ನಾದರೂ ಘೋಷಿಸಲಿ ಎಂದು ಬಾಳೆ ಬೆಳೆದು ನಷ್ಟ ಅನುಭವಿಸಿರುವ ಮುರಾಳದ ರೈತ ವಿರೂಪಾಕ್ಷ ಮುದ್ನಾಳ ಆಗ್ರಹಿಸಿದ್ದಾರೆ.