Advertisement

ಆಲಿಕಲ್ಲು ಮಳೆ: ರೈತರಿಗೆ ನಷ್ಟದ ಹೊಳೆ

12:03 PM May 21, 2018 | Team Udayavani |

ಬಳ್ಳಾರಿ: ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ಶನಿವಾರ ಸಂಜೆ ಸುರಿದ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ
80ಕ್ಕೂ ಹೆಚ್ಚು ಎಕರೆ ಪ್ರದೇಶಗಳಲ್ಲಿ ನಾಟಿ ಮಾಡಲಾಗಿದ್ದ ತೋಟಗಾರಿಕೆ ಬೆಳೆ ಹಾಳಾಗಿದೆ. ಉತ್ತಮ ಇಳುವರಿಯೊಂದಿಗೆ ಕೆಲವೇ ದಿನಗಳಲ್ಲಿ ಲಾಭ ಪಡೆಯಬೇಕಿದ್ದ ರೈತರು, ಮಳೆಯಿಂದಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

Advertisement

ತಾಲೂಕಿನ ಗಡಿಗ್ರಾಮಗಳಾದ ಬೆಂಚಿಕೊಟ್ಟಾಲ್‌, ಎತ್ತಿನಬೂದಿಹಾಳ್‌, ವಿಜಯಪುರ ಕ್ಯಾಂಪ್‌ ಬಳಿ ಅಂದಾಜು
80 ಎಕರೆ ಪ್ರದೇಶಗಳಲ್ಲಿ ವಿವಿಧ ರೈತರು ಟಮೋಟಾ, ಹಸಿಮೆಣಸಿನಕಾಯಿ ಸಸಿ, ಕಲ್ಲಂಗಡಿ, ಕಬೂಜಾ ಸೇರಿ ಇತರೆ
ತೋಟಗಾರಿಕೆ ಬೆಳೆಗಳನ್ನು ನಾಟಿಮಾಡಿದ್ದಾರೆ. ಇದಕ್ಕಾಗಿ ಸುಮಾರು ಲಕ್ಷಾಂತರ ರೂ. ವೆಚ್ಚ ಮಾಡಿದ್ದಾರೆ.

ಉತ್ತಮ ಇಳುವರಿ ಬಂದ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಿ ಲಕ್ಷಾಂತರ ರೂ. ಲಾಭ ನೋಡಬೇಕಿದ್ದ ರೈತರು, ಶನಿವಾರ ಸಂಜೆ 5:45 ರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಬಿರುಗಾಳಿ, ಗುಡುಗು ಸಹಿತ ಭಾರಿಗಾತ್ರದ ಆಲಿಕಲ್ಲು ಮಳೆಯಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ
ಸಮರ್ಪಕ ನೀರಿನ ಕೊರತೆಯಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಇದೀಗ ವರುಣನ ಅವಕೃಪೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
 
ತಾಲೂಕಿನ ಬೆಂಚಿಕೊಟ್ಟಾಲ್‌ನಲ್ಲಿ ಪ್ರಸಾದ್‌ ಎನ್ನುವ ರೈತ ನಾಲ್ಕು ಎಕರೆ ಪ್ರದೇಶದಲ್ಲಿ ಶೇಡ್‌ನೆಟ್‌ ನಿರ್ಮಿಸಿ ಹಸಿಮೆಣಸಿನ ಕಾಯಿ, ಟೊಮೆಟೊ ಸಸಿ, ನವಲುಕೋಲ್‌ ಸೇರಿ ಇತರೆ ತೋಟಗಾರಿಕೆ ಬೆಳೆಯನ್ನು ನಾಟಿ ಮಾಡಿದ್ದರು.

ತೋಟಗಾರಿಕೆ ಇಲಾಖೆಯ ನೆರವು ಪಡೆದು 19 ಲಕ್ಷ ರೂ. ವೆಚ್ಚದಲ್ಲಿ ಶೇಡ್‌ನೆಟ್‌ ನಿರ್ಮಿಸಿಕೊಳ್ಳಲಾಗಿದ್ದು, ಪ್ರತಿ ಎಕರೆಗೆ 6 ಲಕ್ಷ ರೂ. ವೆಚ್ಚವಾಗಿದೆ. ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಬೆಳೆ ಹಾಳಾಗಿದೆ. ಇತ್ತೀಚೆಗಷ್ಟೇ ನಿರ್ಮಿಸಿಕೊಳ್ಳಲಾಗಿದ್ದ ಶೇಡ್‌ನೆಟ್‌ ಸಹ ಹಾಳಾಗಿದೆ. ಇಡೀ ನೆಟ್‌ ಒಂದುಕಡೆ ಬಾಗಿದ್ದು, ಮತ್ತೂಂದು ಮಳೆ ಸುರಿದರೆ ನೆಲಕ್ಕೆ ಉರುಳುವ ಸಾಧ್ಯತೆಯಿದೆ. ಇದರಿಂದ ಸುಮಾರು 20 ರಿಂದ 25 ಲಕ್ಷ ರೂ. ನಷ್ಟವಾಗಿದ್ದು, ಅತಿವೃಷ್ಠಿಯಾದರೂ, ಅನಾವೃಷ್ಠಿಯಾದರೂ ನಷ್ಟಕ್ಕೊಳಗಾಗುವುದಂತೂ ರೈತರೇ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಪ್ರಸಾದ್‌.

ಇನ್ನು ಪಕ್ಕದಲ್ಲೇ ಕೃಷ್ಣಮೂರ್ತಿ ಎಂಬುವವರು ನಾಲ್ಕು ಎಕರೆ ಪ್ರದೇಶದಲ್ಲಿ ಶೇಡ್‌ನೆಟ್‌ ನಿರ್ಮಿಸಿಕೊಂಡು ಮೆಣಸಿನಕಾಯಿ ಸಸಿ, ಟೊಮೆಟೊ ಸಸಿ ನಾಟಿ ಮಾಡಿದ್ದಾರೆ. ಧಾರಾಕಾರ ಮಳೆಗೆ ಇಡೀ ನೆಟ್‌ ನೆಲಕ್ಕೆ ಕುಸಿದಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. 

Advertisement

ಇದೀಗ ಪುನಃ ಲಕ್ಷಾಂತರ ವೆಚ್ಚದಲ್ಲಿ ಶೇಡ್‌ ನೆಟ್‌ನ್ನು ಪುನಃ ನಿರ್ಮಿಸಿಕೊಳ್ಳಬೇಕಾಗಿದ್ದು, ಬೆಳೆದ ಇಳುವರಿ ರೈತರ ಕೈ ಸೇರುವ ಮುನ್ನವೇ ಭಾರಿ ಮಳೆಯಿಂದ ನೆಲಕ್ಕಚ್ಚಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರು ನಷ್ಟದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಿಸಲಾಗಿದೆ. 

ಹಾಳಾದ ಕಲ್ಲಂಗಡಿ ಬೆಳೆ: ಇನ್ನು ಕಲ್ಲಂಗಡಿ ಹಣ್ಣು ಬೆಳೆದ ರೈತರದ್ದು, ಇದೇ ಗೋಳು. ಕೃಷ್ಣ ಮೂರ್ತಿ ಎಂಬುವವರು 9 ಎಕರೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ರೈತರ ಕೈ ಸೇರುವ ಕಲ್ಲಂಗಡಿ ಬೆಳೆ ಈಗಾಗಲೇ ಎರಡುವರೆ ತಿಂಗಳಾಗಿದ್ದು, ಇಳುವರಿ ಉತ್ತಮವಾಗಿದೆ. ಇನ್ನು ಕೇವಲ 10 ದಿನಗಳಲ್ಲಿ ಕಟಾವು ಮಾಡಬೇಕಿದ್ದ ಸಮಯದಲ್ಲಿ ವರುಣದೇವನ ಅವಕೃಪೆಯಿಂದಾಗಿ ಭಾರಿ ನಷ್ಟಕ್ಕೆ ಸಿಲುಕುವಂತಾಗಿದೆ.

 ತೋಟದಲ್ಲಿ ಕಳೆವು ಬೆಳೆಯದಂತೆ ಮೆಲ್ಟಿಂಗ್‌ ಶೀಟ್‌ ಹಾಕಲಾಗಿದ್ದು, ಬಿತ್ತನೆ ಬೀಜ, ಕೂಲಿ ಸೇರಿ ಎಕರೆಗೆ ಸುಮಾರು 1 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದರಿಂದ ಪ್ರತಿ ಎಕರೆಗೆ 20-25 ಟನ್‌ ಕಲ್ಲಂಗಡಿ ಬೆಳೆಯಲಿದೆ. ಈ ಬಾರಿ ಇಳುವರಿಯೂ ಉತ್ತಮವಾಗಿದ್ದು, ಕನಿಷ್ಠವೆಂದರೂ 20 ರಿಂದ 25 ಲಕ್ಷ ರೂ. ಲಾಭವನ್ನು ನಿರೀಕ್ಷಿಸಲಾಗಿತ್ತು. ಆದರೆ, ಹಣೆಬರಹಕ್ಕೆ ಹೊಣೆಯಾರು ಎನ್ನುವಂತೆ ವರುಣ ಅವಕೃಪೆ ತೋರಿದ್ದಾನೆ. 

ಆಲಿಕಲ್ಲುಗಳ ಹೊಡೆತದಿಂದ ಕಲ್ಲಂಗಡಿ ಕಾಯಿಗಳಿಗೆ ರಂದ್ರಗಳು ಬಿದ್ದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಲಿದೆ. ಉತ್ತಮ ಇಳುವರಿಯನ್ನು ಕಂಡು ನಿಟ್ಟುಸಿರು ಬಿಡುವ ಮುನ್ನವೇ ಅತಿವೃಷ್ಠಿಯಿಂದ ಪುನಃ ನಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತ ರಮೇಶ್‌.

ಪರಿಹಾರಕ್ಕಾಗಿ ಪ್ರಸ್ತಾವನೆ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ತಾಲೂಕಿನ ಎತ್ತಿನಬೂದಿಹಾಳು, ಬೆಂಚ್‌ಕೊಟ್ಟಾಲ ಸೇರಿದಂತೆ ಇತರೆಡೆ ಉಂಟಾದ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಯ ಕುರಿತು ವಿ.ಎ ನೇತೃತ್ವದಲ್ಲಿ ಸಮೀಕ್ಷೆ ಮಾಡಿಸಲಾಗುವುದು. ಅಂದಾಜು ನಷ್ಟದ ಬಾಬ್ತು ತಯಾರಿಸಿ ಪ್ರಕೃತಿ ವಿಕೋಪದಡಿ ಅಗತ್ಯ ಪರಿಹಾರ ಕಲ್ಪಿಸುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 
ಚಿದಾನಂದಪ್ಪ, ಡಿ.ಡಿ, ತೋಟಗಾರಿಕೆ ಇಲಾಖೆ.

ನಷ್ಟವಾದ ಈರುಳ್ಳಿ ವರುಣನ ಅವಕೃಪೆಗೆ ಈರುಳ್ಳಿ ಬೆಳೆಗಾರರು ತುತ್ತಾಗಿದ್ದಾರೆ. ಕಟಾವು ಮಾಡಲಾಗಿದ್ದ 20 ಟನ್‌ ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲೆಂದು ಚೀಲಗಳಲ್ಲಿ ತುಂಬಿಡಲಾಗಿತ್ತು. ಇನ್ನೇನು ಸ್ಥಳಕ್ಕೆ ಆಗಮಿಸಿದ್ದ ಟ್ರ್ಯಾಕ್ಟರ್‌ನಲ್ಲಿ ಈರುಳ್ಳಿ ತುಂಬಿದ ಚೀಲಗಳನ್ನು ಲೋಡ್‌ ಮಾಡಬೇಕಿತ್ತಾದರೂ, ಅಷ್ಟರಲ್ಲಿ ಸುರಿದ ಮಳೆಯಿಂದ ಈರುಳ್ಳಿ ನೀರಲ್ಲಿ ನೆನೆದು ಮಾರುಕಟ್ಟೆಗೆ ಹೋಗುವುದನ್ನೇ ಸ್ಥಗಿತಗೊಳಿಸಲಾಯಿತು. ಮೇಲಾಗಿ ಕಳೆದ 3 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ 30 ರೂ.ಗಳಿದ್ದ ಕೆಜಿ ಈರುಳ್ಳಿ ಬೆಲೆ ಇದೀಗ ಕುಸಿದಿದ್ದು, ಕೇವಲ ಕೆಜಿ 3 ರೂ. ಗೂ ಕೇಳುವವರು ಇಲ್ಲ. ಒಂದೆಡೆ ಬೆಲೆಕುಸಿತ ಮತ್ತೂಂದೆಡೆ ಮಳೆಗೆ ನೆನೆದು ನಷ್ಟಕ್ಕೀಡಾದ ಈರುಳ್ಳಿಯಿಂದ ರೈತ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದು, ಭಾರಿ ನಷ್ಟದ ಸುಳಿಗೆ ಸಿಲುಕಿದ್ದಾರೆ.

ಇಲಾಖೆ ಗಮನಕ್ಕೆ ತಾಲೂಕಿನ ಎತ್ತಿನಬೂದಿಹಾಳು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿತ್ತು. ತೋಟಗಾರಿಕೆ ಇಲಾಖೆಯಿಂದ ಧನಸಹಾಯ ಪಡೆದು ಶೇಡ್‌ನೆಟ್‌ ನಿರ್ಮಿಸಿ
ಲಕ್ಷಾಂತರ ರೂ. ವೆಚ್ಚ ಮಾಡಲಾಗಿತ್ತು. ಆದರೆ, ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಶೇಡ್‌ನೆಟ್‌ ಸೇರಿ ಬೆಳೆಯೂ ನಷ್ಟಕ್ಕೊಳಗಾಗಿದ್ದು, ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ. ಈ ಕುರಿತು ಇಲಾಖೆಯ ಗಮನ ಸೆಳೆಯಲಾಗಿದೆ.
ಪ್ರಸಾದ್‌, ರೈತ. 

ಅಪಾರ ನಷ್ಟ ಶ್ರೀಧರ್‌ ವೇರ್‌ಹೌಸ್‌ನಲ್ಲಿ ಸಂಗ್ರಹಿಸಿಡಲಾಗಿದ್ದ 17 ಸಾವಿರ ಚೀಲ ಮೆಕ್ಕೆಜೋಳ, 900 ಚೀಲ ಭತ್ತ ಇತರೆ ಧಾನ್ಯಗಳು ನಷ್ಟದ ಸುಳಿಗೆ ಸಿಲುಕಿವೆ. ಮಳೆಗೆ ಬಿದ್ದ ಭಾರಿ ಗಾತ್ರದ ಆಲಿಕಲ್ಲುಗಳ ಹೊಡೆತಕ್ಕೆ ವೇರ್‌ಹೌಸ್‌ನ ಮೇಲ್ಛಾವಣಿಯ ಶೀಟ್‌ಗಳು ಹೊಡೆದು ಹೋಗಿದ್ದು, ಒಳಗೆ ನುಗ್ಗಿದ ನೀರಿನಿಂದ ಅಂದಾಜು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನುತ್ತಾರೆ ಮಾಲೀಕ ಶ್ರೀಧರ್‌. 

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next