ಹುಬ್ಬಳ್ಳಿ/ಧಾರವಾಡ: ಅವಳಿನಗರದಲ್ಲಿ ಬುಧವಾರ ಸಂಜೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿದ್ದರೆ, ಕೆಲ ರಸ್ತೆಗಳು ಜಲಾವೃತಗೊಂಡಿದ್ದವು. ಸುಮಾರು ಒಂದು ತಾಸು ಕಾಲ ಸುರಿದ ಗಾಳಿ, ಗುಡುಗು-ಸಿಡಿಲು, ಆಲಿಕಲ್ಲು ಸಹಿತ ಮಳೆಯಿಂದ ನಗರದಲ್ಲಿ ಕೆಲವೆಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ಮಳೆ ನೀರು ರಸ್ತೆ ಮೇಲೆ ಆವೃತಗೊಂಡಿತ್ತು. ಹೀಗಾಗಿ ಬೈಕ್ ಸವಾರರು ಪ್ರಮುಖ ರಸ್ತೆಯಲ್ಲೇ ಸಂಚರಿಸಲು ಪರಿತಪಿಸುವಂತಾಗಿತ್ತು. ಇನ್ನು ಒಳ ರಸ್ತೆಗಳಂತೂ ಮಳೆ ನಿಲ್ಲುವವರೆಗೂ ಸಂಚಾರಕ್ಕೆ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ಆರಂಭದಲ್ಲಿ ರಭಸವಾದ ಗಾಳಿ ಆತಂಕ ಮೂಡಿಸಿತ್ತು.
ಮನೆಗಳಿಗೆ ನುಗ್ಗಿದ ನೀರು: ಕೆಲವೆಡೆ ಚರಂಡಿಗಳು ಕಸದಿಂದ ತುಂಬಿದ ಪರಿಣಾಮ ಗಣೇಶ ನಗರದ ಸುಮಾರು 15 ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಪಾಲಿಕೆ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿದ್ದು, ಸಕಾಲದಲ್ಲಿ ಚರಂಡಿಗಳನ್ನು
ಸ್ವತ್ಛಗೊಳಿಸದಿರುವುದು ಇದಕ್ಕೆ ಕಾರಣ ಎಂದು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಇನ್ನು ಕೆಲವೆಡೆ ಸಿಸಿ ರಸ್ತೆ ನಿರ್ಮಾಣದ ಪರಿಣಾಮ ತಗ್ಗಿನಲ್ಲಿದ್ದ ಮನೆಗಳಿಗೂ ನೀರು ನುಗ್ಗಿದೆ.
ಬಿಆರ್‌ಟಿಎಸ್ ರಸ್ತೆಯಲ್ಲಿ ನೀರು: ಇಲ್ಲಿನ ಹೊಸೂರು ವೃತ್ತ, ವಿದ್ಯಾನಗರ, ಉಣಕಲ್ಲ ಕ್ರಾಸ್ ಸೇರಿದಂತೆ ಬಿಆರ್‌ಟಿಎಸ್ ಮಿಶ್ರಪಥದ ಕೆಲ ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಆವೃತವಾಗಿತ್ತು. ಮಿಶ್ರಪಥದಲ್ಲಿ ನೀರು ಸಂಗ್ರಹವಾಗಿದ್ದರಿಂದ ಬಿಆರ್‌ಟಿಎಸ್‌ನ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದರು. ಇದರಿಂದ ಬೈಕ್ ಸವಾರರು ರಸ್ತೆ ದಾಟಲು ಹರಸಾಹಸ ಪಡುವಂತಾಗಿತ್ತು.
ಮರದ ಕೊಂಬೆಗಳು ತುಂಡಾಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ನಗರದ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಳೆ ಸ್ಥಗಿತಗೊಳ್ಳುತ್ತಿದ್ದಂತೆ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಮರದ
ಕೊಂಬೆಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.