ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ 24 ವರ್ಷದ ಯುವತಿಗೆ “ಐಟಿ ಅಧಿಕಾರಿ’ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ 5.80 ಲಕ್ಷ ರೂ. ಪಡೆದು ವಂಚಿಸಿದ್ದ ಆಂಧ್ರದ ಚಿತ್ತೂರಿನ ಯುವಕನನ್ನು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನವೀನ್ ಕುಮಾರ್ ಬಂಧಿತ ಆರೋಪಿ. ನಗರದ ಹೆಲ್ತ್ ಕ್ಲಬ್‌ವೊಂದರಲ್ಲಿ ಇನ್‌ಸ್ಟ್ರಕ್ಟರ್ ಆಗಿ ಕೆಲಸ ಮಾಡುವ ತನುಶ್ರೀ (ಹೆಸರು ಬದಲಾಯಿಸಲಾಗಿದೆ) ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು, ವಂಚನೆಗೆ ಬಳಸುತ್ತಿದ್ದ ಫೇಸ್‌ಬುಕ್ ಅಡ್ರೆಸ್ ಜಾಡು ಹಿಡಿದು ಆರೋಪಿ ನವೀನ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಬುಧವಾರ ಹಾಜರು ಪಡಿಸಿದ್ದು, ಆರೋಪಿ ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಆರೋಪಿ ನವೀನ್, ಫೇಸ್ ಬುಕ್ ಮೂಲಕವೇ ಸರ್ಕಾರಿ ಕೆಲಸದ ಆಮಿಷವೊಡ್ಡಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
5.80 ಲಕ್ಷ ರೂ. ವಂಚನೆ: ಆರೋಪಿ ನವೀನ್ ಹೆಸರಿನ ಫೇಸ್ ಬುಕ್ ಪ್ರೊಫೈಲ್‌ನಿಂದ , ಕಳೆದ ವರ್ಷ ನವೆಂಬರ್‌ನಲ್ಲಿ ತನುಶ್ರೀಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಇದನ್ನು ತನುಶ್ರೀ ಅಕ್ಸೆಪ್ಟ್ ಮಾಡಿದ್ದರು. ಇದಾದ ಬಳಿಕ ಮೆಸೆಂಜರ್‌ನಲ್ಲಿ ಪದೇ ಪದೆ ಹಾಯ್, ಗುಡ್ ಮಾರ್ನಿಂಗ್ ಎಂಬಿತ್ಯಾದಿ ಮೆಸೇಜ್‌ಗಳನ್ನು ಕಳುಹಿಸಿ ಆಕೆಯ ಸ್ನೇಹ ಗಳಿಸಿಕೊಂಡಿದ್ದ.
ಬಳಿಕ ತನುಶ್ರೀ ಹಾಗೂ ನವೀನ್ ಪರಸ್ಪರ ಸಂದೇಶ, ಮೊಬೈಲ್ ಸಂಖ್ಯೆ ಕೂಡ ವಿನಿಮಯ ಮಾಡಿಕೊಂಡಿದ್ದರು. ಈ ನಡುವೆ “ಆದಾಯ ತೆರಿಗೆ ಇಲಾಖೆ ಉನ್ನತ ಹುದ್ದೆಯಲ್ಲಿ ನಮ್ಮ ಹತ್ತಿರದ ಸಂಬಂಧಿ ಒಬ್ಬರಿದ್ದಾರೆ. ನಮಗೆ ಬೇಕಾದ ಕೆಲಸ ಮಾಡಿಕೊಡ್ತಾರೆ. ನೀವು ಬಯಸಿದರೆ ಐ.ಟಿ ಅಧಿಕಾರಿ ಹುದ್ದೆ ಕೊಡಿಸುತ್ತೇನೆ. ಆದರೆ, 5 ಲಕ್ಷ ರೂ. ಖರ್ಚಾಗುತ್ತದೆ’ ಎಂದು ಆರೋಪಿ ನವೀನ್ ಸುಳ್ಳು ಹೇಳಿ ನಂಬಿಸಿದ್ದಾನೆ. ಕೇಂದ್ರ ಸರ್ಕಾರದ ಹುದ್ದೆ ಸಿಗಲಿದೆ ಎಂದು ಆಸೆಗೆ ಬಿದ್ದ ಯುವತಿ, ಹಣ ನೀಡಲು ಒಪ್ಪಿ ಹಂತ ಹಂತವಾಗಿ ಆತ ನೀಡಿದ 11 ಬ್ಯಾಂಕ್ ಅಕೌಂಟ್ ನಂಬರ್‌ಗಳಿಗೆ ಸೆಪ್ಟೆಂಬರ್
ಅಂತ್ಯದವರೆಗೆ ಒಟ್ಟು 5.80 ಲಕ್ಷ ರೂ. ಕಳುಹಿಸಿದ್ದಾರೆ.
ಆದರೆ, ಐಟಿ ಇಲಾಖೆ ಕೆಲಸ ಯಾವಾಗ ಸಿಗುತ್ತೆ ಎಂದು ಕೇಳಿದಾಗಲೆಲ್ಲಾ ಆತ, ನಿಮ್ಮ ವಿಧ್ಯಾಭ್ಯಾಸದ ದಾಖಲೆಗಳನ್ನು ಸಲ್ಲಿಸಿದ್ದೇವೆ. ಕೆಲಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಬೂಬು ಹೇಳುತ್ತಿದ್ದ. ಜತೆಗೆ, ಯುವತಿಗೆ ಸಂಶಯ ಬಂದು ಒತ್ತಡ ಹಾಕಿದಾಗ. ಆತ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ಖಚಿತ ಮಾಡಿಕೊಂಡ ಯುವತಿ ದೂರು ನೀಡಿದ್ದರು.
ವಂಚಕನ ವಿದ್ಯಾಭ್ಯಾಸ ಪಿಯುಸಿ ಮಾತ್ರ!
ಯುವತಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಚಿತ್ತೂರು ಜಿಲ್ಲೆಯ ಮ್ಯಾಲಪಟ್ಟು ಗ್ರಾಮದಲ್ಲಿ ಬಂಧಿಸಲಾಯಿತು. ಆತನನ್ನು ವಿಚಾರಣೆ ಮಾಡಿದಾಗ ಪಿಯುಸಿ ವ್ಯಾಸಂಗದ ಬಳಿಕ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಎಂಬುದು ಗೊತ್ತಾಯಿತು. ಆರೋಪಿ ಫೇಸ್ ಬುಕ್ ವಂಚನೆ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.