Advertisement

ಬೀದಿ ನಾಯಿ ಕಾಟ: ಜನತೆ ಪೀಕಲಾಟ

12:43 PM Aug 02, 2019 | Naveen |

ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ:
ತಾಲೂಕಿನ ತಂಬ್ರಹಳ್ಳಿ ಗ್ರಾಮಸ್ಥರು ಬೀದಿನಾಯಿಗಳ ಹಾವಳಿಯಿಂದ ರೋಸಿ ಹೋಗಿದ್ದು, ಕೇವಲ ಎರಡು ತಿಂಗಳೊಳಗೆ 25ಕ್ಕೂ ಹೆಚ್ಚು ಜನರನ್ನು ನಾಯಿಗಳು ಕಚ್ಚಿದ್ದು ಮಕ್ಕಳು, ವೃದ್ಧರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

Advertisement

ಗ್ರಾಮದ ಸಂತೆ ಮಾರುಕಟ್ಟೆ ಬಳಿ ಹೆಚ್ಚು ನಾಯಿಗಳು ಕಂಡು ಬರುತ್ತಿದ್ದರೂ ಗ್ರಾಪಂನವರು ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಾಯಿ ಹಿಡಿಯೋಕೆ ಮತ್ತು ಸಾಗಿಸೋಕೆ ಎಂದು ತುರ್ತು ಸಭೆಗಳನ್ನು ಕರೆದರು ಸಾರ್ಥಕವಾಗಿಲ್ಲ. ಇದೇ ಮಾರ್ಗದ ಸುತ್ತಮುತ್ತಲೂ ಎರಡು ಖಾಸಗಿ ಶಾಲೆ, ಅಂಗನವಾಡಿ ಕೇಂದ್ರ, ದೇವಸ್ಥಾನಗಳಿದ್ದೂ ಜನರು ಹೋಗಲು ಹರಸಾಹಸ ಪಡುವಂತಾಗಿದೆ. ಮಾಂಸದಂಗಡಿಗಳ ರಕ್ತದ ರುಚಿಯ ಬೆನ್ನತ್ತಿರುವ ನಾಯಿಗಳು ಎಳೆಯ ಮಕ್ಕಳು, ವಯೋವೃದ್ಧರು ಸೇರಿ ಮಹಿಳೆಯರ ಮೇಲೆರಗುತ್ತಿವೆ.

ಗ್ರಾಮದ ಮುಖ್ಯರಸ್ತೆ ಸೇರಿ ವಿವಿಧ ಕಡೆ ನಾಯಿಗಳು ಬೀಡುಬಿಟ್ಟಿದ್ದು ಮಕ್ಕಳನ್ನು ಪದೇಪದೇ ಕಚ್ಚುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಹಿಂಡುಹಿಂಡಾಗಿ ಗುಂಪುಗೂಡುವ ನಾಯಿಗಳು ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬೆನ್ನತ್ತಿ ಕಚ್ಚಲು ಹೋದಾಗ ಜನರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಬೀದಿ ನಾಯಿಗಳು ಹಸುಗಳ ಎಳೆ ಕರುಗಳನ್ನು ಕಚ್ಚಿ ಸಾಯಿಸಿರುವ ಪ್ರಸಂಗಗಳು ಹಸು ಸಾಕಣೆದಾರರನ್ನು ಬೆಚ್ಚಿ ಬೀಳಿಸಿದೆ. ಇತ್ತೀಚೆಗಷ್ಟೆ ಕೋತಿಯೊಂದನ್ನು ಅಟ್ಟಾಡಿಸಿ ಕಡಿದು ಸಾಯಿಸಿದ್ದರಿಂದ ಗ್ರಾಮದ ಯುವಕರು ನಾಯಿಗಳ ನಿಯಂತ್ರಣಕ್ಕೆ ಮನವಿ ಮಾಡಿದ್ದು ಕೇವಲ ಮನವಿಯಾಗಿಯೇ ಉಳಿದಿದೆ.

ನೋಟೀಸ್‌ಗೆ ಬೆಲೆ ಇಲ್ಲ: ಇಲ್ಲಿರುವ ಚಿಕನ್‌ ಸೆಂಟರ್‌ ಸೇರಿ 16 ಅಂಗಡಿಗಳಿಗೆ 3ದಿನಗಳೊಳಗೆ ಸ್ಥಳಾಂತರ ಮಾಡಿಕೊಳ್ಳುವುದಕ್ಕೆ ಗ್ರಾಪಂ ನೋಟಿಸ್‌ ನೀಡಿ ಕೈತೊಳೆದುಕೊಂಡಂತಿದೆ. ನೋಟಿಸ್‌ ಪಡೆದವರು ಈವರೆಗೂ ಒಬ್ಬರು ಸ್ಥಳಾಂತರಕ್ಕೆ ಮುಂದಾಗಿಲ್ಲ. ಗ್ರಾಪಂ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿದೆ. ನಾಯಿಗಳನ್ನು ಸಾಗಾಣೆ ಮಾಡುವಷ್ಟು ಮೊತ್ತ ಪಂಚಾಯ್ತಿ ಖಾತೆಯಲ್ಲಿಲ್ಲ ಎಂದು ಗ್ರಾಪಂ ಅಧಿಕಾರಿಗಳು ಹೇಳುತ್ತಾರೆ. ನಾಯಿಗಳ ದಾಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು ಜೀವಭಯದಿಂದ ಹೊರಗೆ ಸಂಚರಿಸಲು ಹೆದರುತ್ತಿದ್ದಾರೆ. ನಾಯಿ ಕಡಿತಕ್ಕೆ ಒಳಗಾಗಿರುವವರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಲೆಕ್ಕಕ್ಕಿಲ್ಲ. ನಾಯಿ ಕಡಿತಕ್ಕೆ ಬೇಕಾದ ಇಂಜೆಕ್ಷನ್‌ಗಳು ಸರಕಾರಿ ಆಸ್ಪತ್ರೆ, ಮೆಡಿಕಲ್ ಶಾಪ್‌ ಸೇರಿ ಜಿಲ್ಲೆಯಾದ್ಯಂತ ಎಲ್ಲೂ ಸಿಗದೇ ರೋಗಿಗಳು ಪರದಾಡುತ್ತಿದ್ದು ವ್ಯವಸ್ಥೆಗೆ ಹಿಡಿಶಾಪ ಹಾಕುತಿದ್ದಾರೆ.

ಆಸ್ಪತ್ರೆಗೆ ಹೋಗಲು ಭಯ: ಬಸ್‌ ನಿಲ್ದಾಣದಿಂದ ಪ್ರಾಥಮಿಕ ಆಸ್ಪತ್ರೆಗೆ ಸಾಗುವ ಎಸ್ಸಿ ಕಾಲೋನಿ ರಸ್ತೆ ಸಂಪೂರ್ಣ ಕೊಳಚೆಯಾಗಿದ್ದು ನಾಯಿಗಳ ಹಾವಳಿ ಹೆಚ್ಚಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ದಾರಿಹೋಕರು ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಬೈಕ್‌ ಸವಾರರಂತೂ ಈ ದಾರಿ ಬಿಟ್ಟು ಮತ್ತೂಂದು ದಾರಿಯಲ್ಲಿ ಆಸ್ಪತ್ರೆಗೆ ಹೋಗುತ್ತಾರೆ. ಈ ದಾರಿಯುದ್ದಕ್ಕೂ ಕತ್ತಲು ಆವರಿಸಿದ್ದು, ರಸ್ತೆ ಮದ್ಯಭಾಗದವರೆಗೆ ಸ್ವಚ್ಛತೆ ಮಾಯವಾಗಿದೆ. ಸಾಕಷ್ಟು ಬಾರಿ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವಂತೆ ಕಾಲೋನಿಯವರು ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.

Advertisement

ಆಸ್ಪತ್ರೆ ದಾರಿಯಲ್ಲಿ ವಿದ್ಯುತ್‌ ದೀಪಗಳು ಇಲ್ಲದ್ದರಿಂದ ಕತ್ತಲು ಆವರಿಸಿದ್ದು ಹೆರಿಗೆ ಇತರೆ ಚಿಕಿತ್ಸೆಗೆಂದು ಬರುವ ರೋಗಿಗಳು ಭಯ ಪಡುತ್ತಿದ್ದಾರೆ. ಗ್ರಾಮದ ಇದೇ ದಾರಿಯಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿವೆ. ತಿಂಗಳ ಅವಧಿಯಲ್ಲಿಯೇ 15ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತಕ್ಕೆ ತುತ್ತಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿ ಕಡಿತಕ್ಕೆ ನೀಡುವ ರ್ಯಾಬಿಪರ್‌ಇಂಜೆಕ್ಷನ್‌ ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ನಾಯಿಗಳ ನಿಯಂತ್ರಣಕ್ಕೆ ಗ್ರಾಪಂಗೆ ಮೂರ್‍ನಾಲ್ಕೂ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
•ಡಾ| ಮೋಹನ್‌ಕುಮಾರ್‌,
ಪ್ರಾಥಮಿಕ ಆರೋಗ್ಯ ಕೇಂದ್ರ ತಂಬ್ರಹಳ್ಳಿ

ನಾಯಿಗಳ ಕಾಟದಿಂದ ಗ್ರಾಮದ ಎಸ್‌ಸಿ ಕಾಲೋನಿಯಿಂದ ಆಸ್ಪತ್ರೆಗೆ ಹೋಗಲು ತೊಂದರೆಯಾಗಿದೆ. ಈ ರಸ್ತೆಯುದ್ದಕ್ಕೂ ಕತ್ತಲು ಆವರಿಸಿರುವ ಕುರಿತು ಗ್ರಾಪಂಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ನಾಯಿ ಕಡಿತದಿಂದ ಜೀವ ಬಲಿಯಾಗುವ ಮುನ್ನ ಗ್ರಾಪಂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ನಾಯಿಗಳನ್ನು ಹೊರಗೆ ಸಾಗಿಸಬೇಕು.
ಹಿರೇಮನಿ ಮರಿಯಪ್ಪ

ಬೀದಿ ನಾಯಿಗಳನ್ನು ಅರವಳಿಕೆ ಮದ್ದು ಮೂಲಕ ಕಾಡಿಗೆ ಸಾಗಿಸಲು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಇಲ್ಲವೆ ಬಲೆ ಮೂಲಕವಾದರೂ ನಾಯಿಗಳನ್ನು ಸಾಗಿಸಲು ಕ್ರಮ ಕೈಗೊಳ್ಳಲಾಗುವುದು. ವಾರದೊಳಗೆ ನಾಯಿ ಸಾಗಾಣೆ ಮಾಡುತ್ತೇವೆ.
ಕೃಷ್ಣಮೂರ್ತಿ,
ಗ್ರಾಪಂ ಪಿಡಿಒ ತಂಬ್ರಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next