Advertisement

29ಕ್ಕೆ ಸಾಮೂಹಿಕ ವಿವಾಹ: ಬಿ. ಮಾಳಮ್ಮ

06:39 PM Dec 09, 2019 | Naveen |

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿ ಸಮುದಾಯ ಭವನದಲ್ಲಿ ಡಿ. 29ರಂದು ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮದಿನದ ನಿಮಿತ್ತ 3ನೇ ವರ್ಷದ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವದಾಸಿ ವಿಮೋಚನೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ತಿಳಿಸಿದರು.

Advertisement

ಪಟ್ಟಣದ ದೇವದಾಸಿ ವಿಮೋಚನೆ ಸಂಘದ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. 2 ವರ್ಷಗಳಿಂದಲೂ ಸಾಮೂಹಿಕ ಮದುವೆ ಹಮ್ಮಿಕೊಳ್ಳಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಡ ಜನರ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮೂಹಿಕ ಮದುವೆಯಿಂದ ರೈತರು, ಕೃಷಿ ಕಾರ್ಮಿಕರು ಹೊಲಮನೆ ಒತ್ತೆ ಇಡುವುದು ತಪ್ಪುತ್ತದೆ. ದೇವದಾಸಿ ವಿಮೋಚನೆ ಸಂಘದ ಸದಸ್ಯರೆ ಮದುವೆ ಹೊಣೆ ಹೊತ್ತಿದ್ದು, ರೊಟ್ಟಿ, ಕಾಳ ಸೇರಿ ವಿವಿಧ ಆಹಾರ ಸಾಮಗ್ರಿಗಳ ನೆರವು ನೀಡುತ್ತಿದ್ದಾರೆ. ಮಸಣ ಕಾರ್ಮಿಕರ ಸಂಘ ಮತ್ತು ದೇವದಾಸಿಯರ ಮಕ್ಕಳ ಸಂಘದ ಸದಸ್ಯರೂ ಮದುವೆ ಸಹಭಾಗಿತ್ವ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಹಿರಿಯ ಬರಹಗಾರ ಹುರುಕಡ್ಲಿ ಶಿವಕುಮಾರ್‌ ಮಾತನಾಡಿ, ಈಗಾಗಲೇ 10 ಜೋಡಿ ಸಾಮೂಹಿಕ ಮದುವೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 15 ಜೋಡಿ ಮದುವೆ ಗುರಿ ಹೊಂದಲಾಗಿದೆ. ದೇವದಾಸಿಯರ ಮಕ್ಕಳನ್ನು ಮದುವೆಯಾಗುವವರಿಗೆ ಸರಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಉದ್ದೇಶಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಈ ಕುರಿತು ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯವಹಿಸುವರು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್‌.ಎಸ್‌.ಬಸವರಾಜ ತಿಳಿಸಿದರು. ಸಂಘದ ಅಧ್ಯಕ್ಷೆ ಬಿ. ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದ್‌ಬಿ, ಸಿಐಟಿಯು ತಾಲೂಕು ಕಾರ್ಯದರ್ಶಿ ಎಸ್‌.ಜಗನ್ನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next