Advertisement

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಿ

03:23 PM Aug 16, 2019 | Naveen |

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಆವರಿಸಿದ ಭೀಕರ ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ತತ್ತರಿಸಿವೆ. ಇದರಿಂದಾಗಿ ಸ್ವಾತಂತ್ರ ದಿನಾಚರಣೆಯನ್ನು ಆಡಂಬರಕ್ಕಿಂತಲೂ ಅರ್ಥಪೂರ್ಣವಾಗಿ ಅತ್ಯಂತ ಸರಳವಾಗಿ ಆಚರಿಸುವುದು ಸೂಕ್ತವಾಗಿದೆ ಎಂದು ರಾಬಕೊ ಅಧ್ಯಕ್ಷ ಶಾಸಕ ಭೀಮನಾಯ್ಕ ಹೇಳಿದರು.

Advertisement

ಪಟ್ಟಣದ ಗಂ.ಭೀ. ಪಪೂ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹಾಲು ಉತ್ಪಾದಕರಿಗೆ ಸರಕಾರದ ಪ್ರೊತ್ಸಾಹಧನದ ಜತೆಗೆ ಪ್ರತಿ ಲೀ.ಗೆ 1 ರೂ.ಹೆಚ್ಚುವರಿಯಾಗಿ ನೀಡಲಾಗುವುದು. ಮಾರ್ಚ್‌ ಅಂತ್ಯಕ್ಕೆ ರಾಬಕೋ ಒಟ್ಟು 1.28 ಕೋಟಿ ರೂ.ಲಾಭದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ನೇರವಾಗಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಸ್ವಾತಂತ್ರೊತ್ಸವದ ವೇಳೆಗೆ ಮಾಲವಿ ಜಲಾಶಯದಿಂದ ರೈತರ ಜಮೀನಿಗೆ ಶಾಶ್ವತ ನೀರುಣಿಸುವ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ದಿನಾಚರಣೆ ಸಂಭ್ರಮಕ್ಕಿಂತಲೂ ಸಂತ್ರಸ್ತರ ನೆರವಿಗೆ ಚಾಚುವ ಕೈಗಳೇ ಹೆಚ್ಚು ಶಕ್ತಿಶಾಲಿ ಎಂಬ ಭಾವನೆ ನನ್ನದಾಗಿದೆ. ಮಿಡಿಯುವ ಮನಗಳಿಗಾಗಿ ನಮ್ಮ ನೆರೆ ಸಂತ್ರಸ್ತರು ತುಡಿಯುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಹಗರಿಬೊಮ್ಮನಹಳ್ಳಿ ಸಮಸ್ತ ವರ್ತಕರು, ನಾಗರಿಕರು, ವಿದ್ಯಾರ್ಥಿಗಳು, ಹಲವು ಸಂಘಟನೆ ಪದಾಧಿಕಾರಿಗಳು ಉದಾರ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ. ನನಗೆ ನಿಮ್ಮ ರಕ್ತಕೊಡಿ, ನಾನು ಸ್ವಾತಂತ್ರ ಕೊಡುತ್ತೇನೆ ಎಂದ ಸುಭಾಷ್‌ಚಂದ್ರಬೋಸ್‌, ಸ್ವಾತಂತ್ರ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ ಬಾಲಗಂಗಾಧರ ತಿಲಕ್‌, ಮಾಡು ಇಲ್ಲವೆ ಮಡಿ ಎಂದ ಮಹಾತ್ಮ ಗಾಂಧೀಜಿ ಅವರ ಧ್ಯೇಯವಾಕ್ಯಗಳು ನಮ್ಮ ರಕ್ತದ ಕಣಕಣಗಳಿಗೆ ನವ ಭಾರತ ನಿರ್ಮಿಸಲು ಪ್ರೇರಣಾಶಕ್ತಿಗಳಾಗಬೇಕಿದೆ ಎಂದರು.

ತಹಶೀಲ್ದಾರ್‌ ಆಶಪ್ಪ ಪೂಜಾರ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ಇಂಥ ಮಹನೀಯರ ತ್ಯಾಗಬಲಿದಾನ ಸಾರ್ಥಕಗೊಳ್ಳಬೇಕಾದರೆ ದೇಶದ ಪ್ರಗತಿಗೆ ನಾವು ನೀವೆಲ್ಲರೂ ಜಾತಿಮತಪಂಥದ ಭೇದ ಎಣಿಸದೆ ಅಭಿವೃದ್ಧಿ ಮಂತ್ರ ಹೇಳಬೇಕಿದೆ. ನಾವು ಪಡೆದ ಸ್ವಾತಂತ್ರ ಸ್ವೇಚ್ಛಾಚಾರವಾಗದಿರಲಿ. ಅಭಿವೃದ್ಧಿಯೊಂದೆ ಮೂಲ ಮಂತ್ರವಾಗಬೇಕಿದೆ ಎಂದರು.

ಇದೇವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ ಮಾಡಲಾಯಿತು.

Advertisement

ತಾಪಂ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಸುಶೀಲಮ್ಮ, ಜಿ.ಪಂ. ಸದಸ್ಯ ಆನಂದ್‌, ಮಾಜಿ ಸದಸ್ಯರಾದ ಅಕ್ಕಿ ತೋಟೇಶ್‌, ಹೆಗ್ಡಾಳ್‌ ರಾಮಣ್ಣ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಯು. ಬಾಬುವಲಿ, ಸದಸ್ಯರಾದ ಕಲ್ಪನಾ ಕೊಟ್ರೇಶ್‌, ಜಾಹಿದಾ ರಹೇಮಾನ್‌, ಕವಿತಾ ಹಾಳ್ದಾಳ್‌, ಹಂಚಿನಮನಿ ಹನುಂತಪ್ಪ, ಹುಡೇದ್‌ ಗುರುಬಸವರಾಜ, ಇಒ ಮಲ್ಲಾನಾಯ್ಕ, ಬಿಇಒ ಶೇಖರಪ್ಪ ಹೊರಪೇಟೆ,ಪುರಸಭೆ ಮುಖ್ಯಾಧಿಕಾರಿ ಕೃಷ್ಣನಾಯ್ಕ, ಲೋಕೋಪಯೋಗಿ ಎಇಇ ಪ್ರಭಾಕರಶೆಟ್ರಾ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್‌, ಬನ್ನಿಗೋಳ ವೆಂಕಣ್ಣ, ಕನ್ನಿಹಳ್ಳಿ ಚಂದ್ರಶೇಖರ, ತುರಾಯಿನಾಯ್ಕ ಇತರರಿದ್ದರು. ಶಿಕ್ಷಕರಾದ ಪರಮೇಶ್ವರ ಸೊಪ್ಪಿಮಠ, ಬಿ.ಕೊಟ್ರಪ್ಪ, ವಿದ್ಯಾರ್ಥಿನಿ ನಂದಿನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next