ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ತುಂಬಿದೆ. ತಾಲೂಕಿನ ತಂಬ್ರಹಳ್ಳಿ, ಹಗರಿಬೊಮ್ಮನಹಳ್ಳಿ ಹೋಬಳಿಗಳಲ್ಲಿ ದಾಖಲೆ ಮಳೆಯಾಗಿದೆ.
ತಾಲೂಕಿನ ಮಾಲವಿ ಜಲಾಶಯಕ್ಕೆ 12.1ಅಡಿ ಮಳೆ ನೀರು ಹರಿದು ಬಂದಿದ್ದು ಅಂತರ್ಜಲ ಕುಸಿತದ ಭಯ ಇಲ್ಲವಾಗಿದೆ. ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿ ವಾಸವಾಗಿರುವ ಸಿಂದೋಳ ಸಮಾಜದ ಗುಡಿಸಲುಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಆಶಪ್ಪ ಪೂಜಾರ್ ಭೇಟಿ ನೀಡಿ ನಷ್ಟಕ್ಕೊಳಗಾದವರ ಅಹವಾಲು ಸ್ವೀಕರಿಸಿದರು.
ನಿಂತ ಮಳೆ ನೀರನ್ನು ಹೊರ ಸಾಗಿಸಲು ತಹಶೀಲ್ದಾರ್ ಕೂಡಲೇ ಕ್ರಮಕೈಗೊಂಡರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಎ. ಕೊಟ್ರೇಶ್ ಸಿಂದೋಳ ಸಮಾಜದವರ ಸ್ಥಿತಿಗತಿಗಳನ್ನು ತಹಶೀಲ್ದಾರರಿಗೆ ವಿವರಿಸಿದರು. ಅಂಕಸಮುದ್ರ ಪಕ್ಷಿಧಾಮದ ಕೆರೆಗೆ 5ಅಡಿ ನೀರು ಬಂದಿದ್ದು ಪಕ್ಷಿಸಂಕುಲ ವಾಸಕ್ಕೆ ಪೂರಕ ವಾತಾವರಣ ನಿರ್ಮಾಣವಾದಂತಿದೆ. ನಂದಿಪುರ ಗ್ರಾಮದ ಬಳಿ ಇರುವ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿದ್ದನ್ನು ಜನರು ತಂಡೋಪ ತಂಡವಾಗಿ ವೀಕ್ಷಿಸಿದರು. ಚಿಂತ್ರಪಳ್ಳಿ, ಬನ್ನಿಕಲ್ಲು ಕೆರೆಗಳಿಗೆ ಮಳೆ ನೀರು ಹೆಚ್ಚು ಸಂಗ್ರವಾಗಿದೆ. ಪಟ್ಟಣದ ಹಗರಿಹಳ್ಳ ಹರಿಯುತ್ತಿರುವುದನ್ನು ಜನರು ಕಿಕ್ಕಿರಿದು ವೀಕ್ಷಿಸಿದರು. ತಂಬ್ರಹಳ್ಳಿ ಹೊಲ ಗದ್ದೆಗಳ ನೀರು ಹಳ್ಳಗಳ ಮೂಲಕ ತುಂಗಭದ್ರಾ ಹಿನ್ನೀರನ್ನು ಧುಮ್ಮಿಕ್ಕಿ ಸೇರುತ್ತಿರುವುದು ವಿಶೇಷವಾಗಿತ್ತು.
ಈ ಬಾರಿ ಹಿಂಗಾರು ಮಳೆಗಳು ಉತ್ತಮವಾಗಿ ಸುರಿದಿರುವುದರಿಂದ ಹಿನ್ನೀರು ಸರಿಯುವುದು ತುಂಬಾ ತಡವಾಗಲಿದೆ ಎಂದು ಜನರು ಅಲ್ಲಲ್ಲಿ ಮಾತನಾಡುವುದು ಕಂಡುಬಂತು. ಮೆಕ್ಕೆಜೋಳ ಬೆಳೆಗಳಿಗೆ ಈ ಮಳೆ ಖುಷಿ ಕೊಟ್ಟರೆ, ಈರುಳ್ಳಿ ಬೆಳೆಗೆ ಈ ಮಳೆಯಿಂದಾಗಿ ನಷ್ಟವೇ ಹೆಚ್ಚು ಎಂಬಂತಾಗಿದೆ. ಈರುಳ್ಳಿಗೆ ಕೊಳೆ ರೋಗದ ಆತಂಕ ಒಂದೆಡೆಯಾದರೆ, ಬೆಲೆ ಇಳಿಕೆ ಬೆಳೆಗಾರರನ್ನು ಚಿಂತೆಗೆ ದೂಡಿದೆ.
ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 111.1ಮಿಮೀ, ಹಗರಿಬೊಮ್ಮನಹಳ್ಳಿ 100.8 ಮಿಮೀ, ಮಾಲವಿ 84.4 ಮಿಮೀ, ಹಂಪಸಾಗರ 28.6 ಮಿಮೀ ಮಳೆ ದಾಖಲಾಗಿದ್ದು ಈ ವರ್ಷದ ವಿಶೇಷ.