ಹಗರಿಬೊಮ್ಮನಹಳ್ಳಿ: ರೈತರ ಬೆಳೆಗಳನ್ನು ಖರೀದಿಸಲು ಖರೀದಿ ಕೇಂದ್ರದ ತೆರೆಯುವ ಮೂಲಕ ಸರಕಾರ ರೈತರ ಬೇಡಿಕೆ ಈಡೇರಿಸಿದೆ ಎಂದು ಎಪಿಎಂಸಿ ಅಧ್ಯಕ್ಷ ಜಿ.ಶಿವಾನಂದಪ್ಪ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖರೀದಿ ಕೇಂದ್ರದಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲಾಗುತ್ತಿದೆ. ಕೇಂದ್ರದಿಂದ ರೈತರಿಗೆ ಬೆಂಬಲ ಬೆಲೆ ಒದಗುವ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ತಗ್ಗಿಸಬಹುದಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ನೋಂದಣಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.
ಎಪಿಎಂಸಿ ಕಾರ್ಯದರ್ಶಿ ಮರುಳಸಿದ್ದಯ್ಯ ಮಾತನಾಡಿ, ರೈತರ ಬೆಳೆಗಳ ಮಾರಾಟಕ್ಕೆ ಖರೀದಿ ಕೇಂದ್ರದಲ್ಲಿ ಪೂರಕ ವ್ಯವಸ್ಥೆ ಮಾಡಲಾಗಿದೆ. ಖರೀದಿ ಕೇಂದ್ರದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಬೆಳೆದ ಧಾನ್ಯ ಖರೀದಿಸಲಾಗುವುದು. ಜ.1ರಿಂದ ಮಾ.31ರವರೆಗೆ ಖರೀದಿ ಕೇಂದ್ರ ಮುಂದುವರಿಯಲಿದೆ. ರೈತರು ಕೃಷಿ ಇಲಾಖೆಯಿಂದ ನೀಡಲಾಗುವ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಅಗತ್ಯ ದಾಖಲೆಯೊಂದಿಗೆ ರೈತರು ಕೃಷಿ ಇಲಾಖೆಯಲ್ಲಿ ಜ.10ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದರು.
ಉಗ್ರಾಣ ವ್ಯವಸ್ಥಾಪಕ ಎನ್.ಬಸವರಾಜ ಮಾತನಾಡಿ, ಕೇಂದ್ರದಲ್ಲಿ ಪ್ರತಿ ರೈತರ 40 ಕ್ವಿಂ.ನಷ್ಟು ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂ.ಗೆ 1815ರೂ., ಗ್ರೇಡ್ ಎ ಭತ್ತವನ್ನು ಕ್ವಿಂ.ಗೆ 1835ರೂ. ದರದಲ್ಲಿ ಖರೀದಿಸಲಾಗುವುದು. ಪ್ರತಿ ರೈತರಿಂದ 75 ಕ್ವಿಂಟಲ್ ಮೀರದಂತೆ ಬಿಳಿಜೋಳ ಪ್ರತಿ ಕ್ವಿಂ. ಗೆ 2550ರೂ., ಮಾಲ್ಡಂಡಿ ಬಿಳಿ ಜೋಳ ಕ್ವಿಂ.ಗೆ 2570ರೂ., ರಾಗಿ ಕ್ವಿಂ.ಗೆ 3150ರೂ.ದರದಲ್ಲಿ ಖರೀದಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ನಿರ್ದೇಶಕರಾದ ಅಳವಂಡಿ ವೀರಣ್ಣ, ಬನ್ನಿಗೋಳ ವೆಂಕಣ್ಣ, ಬಾವಿ ಪ್ರಕಾಶ, ಕೆ.ರಾಮಪ್ಪ, ಮಂಜುನಾಥ ಗೌಡ ಇದ್ದರು. ಮಾರುಕಟ್ಟೆ ಮೇಲ್ವಿಚಾರಕ ಎಸ್.ಮಂಜುನಾಥ, ಮಾರಾಟ ಸಹಾಯಕ ಆರ್.ವೆಂಕಟೇಶ ನಿರೂಪಿಸಿದರು.