Advertisement

ಮೊಹರಂ: ಗಮನಸೆಳೆದ ವೇಷಧಾರಿಗಳು

05:24 PM Sep 11, 2019 | Naveen |

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ, ಬಲ್ಲಾಹುಣ್ಸಿ, ಹನಸಿ, ಕಿತ್ನೂರು ಚಿಂತ್ರಪಳ್ಳಿ, ವಿವಿಧ ಕಡೆಗಳಲ್ಲಿ ಹಿಂದೂ ಮುಸ್ಲಿಂ ಭಕ್ತರು ಅತ್ಯಂತ ಭಾವೈಕ್ಯತೆಯಿಂದ ಹಸೇನ್‌ಹುಸೇನ್‌ ತಾಬೂತುಗಳಿಗೆ ಬೆಲ್ಲಮೆಣಸು, ಮಾದಲಿ ಸಮರ್ಪಿಸಿ ಭಕ್ತಿಭಾವ ಮೆರೆದರು.

Advertisement

ಬಲ್ಲಾಹುಣಿಸಿ, ತಂಬ್ರಹಳ್ಳಿಯಲ್ಲಿ ವೇಷಧಾರಿಗಳು ಆಕರ್ಷಣೀಯವಾಗಿ ಗಮನಸೆಳೆದರು. ಸೋಮವಾರ ರಾತ್ರಿ ತಂಬ್ರಹಳ್ಳಿಯಲ್ಲಿ ಸುಣಗಾರ ದೊಡ್ಡಬಸಪ್ಪನ ಹಿಡಂಬಿ ಕುಣಿತ ರೋಚಕವಾಗಿತ್ತು. ಮೈಲಾರಿಯ ಗರ್ಭಿಣಿ ಹೆಣ್ಣುವೇಷಕ್ಕೆ ಜನರು ಖುಷಿಪಟ್ಟರು. ಕಿತ್ನೂರು ವಿಜಯಕುಮಾರನ ಚೂಡಿದಾರ ಧಿರಿಸು ಹೆಣ್ಣುಮಕ್ಕಳನ್ನು ನಾಚಿಸುವಂತಿತ್ತು. ನಂದಿಪುರ ವೇಷಧಾರಿಗಳು ಬೈಕ್‌ವೆುೕಲೆ ಸವಾರಿ ಹೊರಟಿದ್ದು ನೋಡುಗರ ಗಮನಸೆಳೆಯಿತು. ಕರಿ ಸುರೇಶನ ಬೇಡರ ಕಣ್ಣಯ್ಯನ ಕುಣಿತ ಬಣ್ಣದೋಕುಳಿಯಲ್ಲಿ ಮಿಂದಿತ್ತು. ಅಲೆ ದೇವರುಗಳ ಮುಂಭಾಗ ತಂಬ್ರಹಳ್ಳಿ ಕ್ರಿಯೇಟಿವ್‌ ಮೆಲೋಡಿವ್ಸ್‌ ತ್ರಿಸ್ಟಾರ್‌ಗಳು ನಡೆಸಿದ ರಸಮಂಜರಿ ಕಾರ್ಯಕ್ರಮಕ್ಕೆ ಯುವಕರು ಹೆಜ್ಜೆ ಹಾಕಿದರು.

ಹಲಗೆಗಳ ನಾದಕ್ಕೆ ತಕ್ಕಂತೆ ಗ್ರಾಮದ ಯುವಕರು ಹೆಜ್ಜೆಹಾಕಿ ನೋಡುಗರ ಗಮನಸೆಳೆದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಬಾಂಧವರು ಜೊತೆಜೊತೆಯಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುವುದು ವಿಶೇಷವಾಗಿದೆ. ಮೋಹರಂ ಹಬ್ಬವನ್ನು ಎಲ್ಲ ಗ್ರಾಮಗಳಲ್ಲಿ ಭೇದಭಾವವಿಲ್ಲದೆ ಆಚರಿಸುತ್ತಾರೆ. ಬಲ್ಲಾಹುಣ್ಸಿ ಗ್ರಾಮದಲ್ಲಿ ಸಾವಿರಾರು ಜನರು ತಾಬೂತುಗಳಿಗೆ ಭಕ್ತಿಯ ಕಾಣಿಕೆ ಸಮರ್ಪಿಸಿದರು.

ಅಲೆ ಕುಣಿಯ ಸುತ್ತ ಅಲಾಯಿಮೇಳ ನಡೆಸಿದರು. ತಬೂತುಗಳನ್ನು ಹೊತ್ತವರು ಕೆಂಡ ಹಾಯುವುದನ್ನು ಭಕ್ತರು ತುದಿಗಾಲಲ್ಲಿ ನಿಂತು ವೀಕ್ಷಿಸುತ್ತಿದ್ದರು. ಹಿರಿಯರು, ಮಕ್ಕಳು ಭಕ್ತಿಯಿಂದ ಅಲೆ ದೇವರುಗಳು ಸಾಗುವ ದಾರಿಯಲ್ಲಿ ಮಲಗಿ ಭಕ್ತಿ ಸಮರ್ಪಿಸಿದರು. ಚಿಂತ್ರಪಳ್ಳಿ ಗ್ರಾಮದಲ್ಲಿ ಸವಾಲ್ಜವಾಬ್‌ ನಡೆಸಲಾಯಿತು. ಎಲ್ಲೆಡೆಯೂ ಅಚ್ಚಳ್ಳಿ, ಹುಲಿ ವೇಷಧಾರಿಗಳ ಕುಣಿತ ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next