Advertisement

ಕೆಲಸದ ಕರೆ ನಂಬಿ ಹಣ ವರ್ಗಾವಣೆ ಮಾಡೀರಿ ಜೋಕೆ!

10:58 AM Oct 11, 2018 | Team Udayavani |

ಬೆಂಗಳೂರು: “ನಿಮಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದೆ’ ಎಂದು ಯಾರಾದರೂ ಅಪರಿಚಿತರು ಕರೆ ಮಾಡಿದರೆ ಎಚ್ಚರದಿಂದಿರಿ! ನೌಕರಿ ಡಾಟ್‌ ಕಾಮ್‌ ಸೇರಿ ವಿವಿಧ ಸಂಸ್ಥೆಗಳಲ್ಲಿ ಹೆಸರು ಮಾಹಿತಿ ನೋಂದಾಯಿಸಿಕೊಂಡಿರುವ
ಉದ್ಯೋಗ ಆಕಾಂಕ್ಷಿಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಹಣ ಪಡೆದು ವಂಚಿಸುವ ಆನ್‌ಲೈನ್‌ ವಂಚಕರ ತಂಡ ನಗರದಲ್ಲಿ ಸಕ್ರಿಯವಾಗಿದೆ.

Advertisement

ಉದ್ಯೋಗ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸುವ ಖಾಸಗಿ ಸಂಸ್ಥೆಗಳನ್ನು ಟಾರ್ಗೆಟ್‌ ಮಾಡಿಕೊಂಡು, ದೂರವಾಣಿ ಕರೆ ಮಾಡಿ 15- 20 ದಿನಗಳಲ್ಲಿ ಆಫ‌ರ್‌ ಲೆಟರ್‌ ನೀಡುತ್ತೇವೆ ಎಂದು ನಂಬಿಸಿ, ಲಕ್ಷಾಂತರ ರೂ.ಗಳನ್ನು ತಮ್ಮ ಬ್ಯಾಂಕ್‌ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗುತ್ತಿದೆ. ವಂಚಕರ ಮಾತು ನಂಬಿ ಉದ್ಯೋಗದ ಆಸೆಯಿಂದ ಸಾವಿರ, ಲಕ್ಷಗಟ್ಟಲೆ ಹಣ ಕಳೆದುಕೊಂಡವರು ಸೈಬರ್‌ ಕ್ರೈಂ ಠಾಣೆ ಮೆಟ್ಟಿಲೇರುತ್ತಿದ್ದಾರೆ. 

ಇಂಥ ದೂರುಗಳನ್ನು ಹೊತ್ತು ನಿತ್ಯ ಕನಿಷ್ಠ ಇಬ್ಬರಾದರೂ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಸೈಬರ್‌ ಕ್ರೈ ವಿಭಾಗದ ಮೊರೆ ಹೋಗುತ್ತಿದ್ದಾರೆ.

ಶೈನ್‌ ಡಾಟ್‌ ಕಾಮ್‌ ಹೆಸರಲ್ಲಿ ವಂಚನೆ!: ಪದವಿ ಮುಗಿಸಿದ್ದ ನಟರಾಜ ಲೇಔಟ್‌ನ ಯುವತಿ ಯೊಬ್ಬರು ಕೆಲಸಕ್ಕಾಗಿ ಖಾಸಗಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸದ ಮಾಹಿತಿ ಹಂಚಿಕೊಂಡಿದ್ದರು. ಈ ಮಾಹಿತಿ ಪಡೆದ ಸೈಬರ್‌ ವಂಚಕ, ಯುವತಿಯ ತಾಯಿ ಲಕ್ಷ್ಮೀದೇವಿ ಎಂಬುವವರಿಗೆ ಕರೆ ಮಾಡಿ, ಶೈನ್‌ ಡಾಟ್‌ ಕಾಮ್‌ ನಿಂದ ಕರೆ ಮಾಡುತ್ತಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ನಿಮ್ಮ ಮಗಳ ನಂಬರ್‌ ಶಾರ್ಟ್‌ ಲಿಸ್ಟ್‌ನಲ್ಲಿದೆ. ಹೀಗಾಗಿ ಕೆಲಸ ಖಾಯಂ ಮಾಡಲು ಬ್ಯಾಂಕ್‌ ಖಾತೆಗಳ ಮಾಹಿತಿ ನೀಡುವಂತೆ ಕೇಳಿದ್ದಾನೆ.

ವಂಚಕನ ಮಾತು ಕೇಳಿದ ಲಕ್ಷ್ಮೀದೇವಿ, ಮಗಳ ಎಸ್‌ಬಿಐ ಖಾತೆಯ ವಿವರಗಳನ್ನು ನೀಡಿದ್ದಾರೆ. ಈ ಮಾಹಿತಿ ಪಡೆದ ವಂಚಕ ಅ.6ರಂದು ಖಾತೆಯಲ್ಲಿದ್ದ 56,111 ರೂ.ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
 
ಬಳಿಕ ಆತ ಕರೆ ಮಾಡಿದ್ದ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ಕಡೆಗೆ ಮೋಸ ಹೋಗಿರುವುದು ಗೊತ್ತಾಗಿ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ. ಎರಡೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದೇವೆ. ವಂಚಕರು ಉದ್ಯೋಗದ ಆಮಿಷವೊಡ್ಡಿ ಹಣ ಕೇಳಿದಾಗಲೇ ಯುವಜನ ಎಚ್ಚರ ವಹಿಸ ಬೇಕು ಎಂದು ಸೈಬರ್‌ ಕ್ರೈಂ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿ ಸಲಹೆ ನೀಡಿದ್ದಾರೆ.

Advertisement

ಡೆಲ್‌ ಕಂಪನಿ ಹೆಸರಲ್ಲಿ ಲಕ್ಷ ರೂ. ವಂಚನೆ!
ವಿಜಯನಗರದ ಯುವತಿಯೊಬ್ಬರು ಪದವಿ ಪೂರ್ಣಗೊಳಿಸಿ ಕೆಲಸದ ಹುಡುಕಾಟದಲ್ಲಿದ್ದರು. ಅದರಂತೆ, ಸೆಪ್ಟೆಂಬರ್‌ ತಿಂಗಳು, ನೌಕರಿ ಡಾಟ್‌ ಕಾಮ್‌ನಲ್ಲಿ ರೆಸ್ಯೂಮ್‌ ಅಪ್‌ಲೋಡ್‌ ಮಾಡಿದ್ದರು. ಈ ಮಾಹಿತಿ ಪಡೆದ ವಂಚಕನೊಬ್ಬ ಅಪರಿಚಿತ ನಂಬರ್‌ನಿಂದ ಕರೆ ಮಾಡಿ, ಡೆಲ್‌ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಅಲ್ಲದೆ, ಕೆಲಸ ಬೇಕೆಂದರೆ 50 ಸಾವಿರ ರೂ. ಅಡ್ವಾನ್ಸ್‌ ನೀಡಬೇಕು ಎಂದು ಕೇಳಿದ್ದಾನೆ. ಇದನ್ನು ನಂಬಿದ ಯುವತಿ, ವಂಚಕ ಹೇಳಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಇದಾದ ಬಳಿಕವೂ ಇಲ್ಲಸಲ್ಲದ ಸಬೂಬು ಹೇಳಿ ಯುವತಿಯಿಂದ ಸೆ.25ರಿಂದ ಅ.6ರ ನಡುವೆ ಒಟ್ಟು 1.14 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next