ಲಾಹೋರ್ : 2008ರ ಮುಂಬಯಿ ದಾಳಿಗಳ ಪ್ರಮುಖ ರೂವಾರಿಯಾಗಿರುವ ಹಫೀಜ್ ಸಯೀದ್ ವಿರುದ್ಧ ಸರಕಾರ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸದಿದ್ದರೆ ಆತನ ಗೃಹ ಬಂಧನವನ್ನು ಕೊನೆಗೊಳಿಸುವುದಾಗಿ ಪಾಕಿಸ್ಥಾನದ ನ್ಯಾಯಾಲಯವೊಂದು ಎಚ್ಚರಿಕೆ ನೀಡಿದೆ.
ಜಮಾತ್ ಉದ್ ದಾವಾ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ ಮತ್ತು ಆತನ ಇತರ ನಾಲ್ಕು ಸಹಚರರನ್ನು ಪಾಕ್ ಸರಕಾರ ಉಗ್ರ ನಿಗ್ರಹ ಕಾಯಿದೆಯಡಿ ಈ ವರ್ಷ ಜನವರಿಯಲ್ಲಿ ಗೃಹ ಬಂಧನದಲ್ಲಿ ಇರಿಸಿತ್ತು.
ಸಯೀದ್ ಬಂಧನದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಲಾಹೋರ್ ಹೈಕೋರ್ಟ್ ನಿನ್ನೆ ಮಂಗಳವಾರ ನಡೆಸಿತ್ತು. ಸಯೀದ್ ಗೃಹ ಬಂಧನ ಕುರಿತಾದ ದಾಖಲೆ ಪತ್ರ ಹಾಗೂ ಸಾಕ್ಷ್ಯಗಳನ್ನು ಕೋರ್ಟಿಗೆ ತರುವ ನಿರೀಕ್ಷೆಯಿದ್ದ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ ಆವಶ್ಯಕ ದಾಖಲೆ ಪತ್ರಗಳೊಂದಿಗೆ ಕೋರ್ಟಿಗೆ ಹಾಜರಾಗಲು ವಿಫಲರಾದರು ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳ ಕ್ಲಿಪ್ಪಿಂಗ್ ಆಧರಿಸಿಕೊಂಡು ಯಾವನೇ ವ್ಯಕ್ತಿಯನ್ನು ದೀರ್ಘಕಾಲ ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಒಳಾಡಳಿತ ಸಚಿವಾಲಯದ ಕಾರ್ಯದರ್ಶಿಯ ಗೈರು ಹಾಜರಿಯಿಂದ ಸಿಡಿಮಿಡಿಗೊಂಡ ನ್ಯಾಯಾಧೀಶ ಸಯ್ಯದ್ ಮುಜಾಹರ್ ಅಲಿ ಅಕ್‌ಬರ್ ನಖ್‌ವಿ ಹೇಳಿದರು. ಜನರ ಮೂಲಭೂತ ಹಕ್ಕನ್ನು ರಕ್ಷಿಸುವ ಬಾಧ್ಯತೆ ಸರಕಾರಕ್ಕೆ ಇದೆ ಎಂದವರು ಎಚ್ಚರಿಸಿದರು.
ಅಕ್ಟೋಬರ್ 13ರಂದು ಮತ್ತೆ ಸೂಕ್ತ ದಾಖಲೆ ಪತ್ರಗಳೊಂದಿಗೆ ಕೋರ್ಟಿಗೆ ಹಾಜರಾಗುವಂತೆ ನ್ಯಾಯಾಧೀಶರು ಒಳಾಡಳಿ ಕಾರ್ಯದರ್ಶಿಗೆ ಆದೇಶ ನೀಡಿದರು.