Advertisement

ಜೆಹಾದ್‌ ಹೆಸರಲ್ಲಿ ಹಫೀಜ್‌ ಸಯೀದ್‌ನಿಂದ ಉಗ್ರವಾದ

09:43 AM May 15, 2017 | Team Udayavani |

ಲಾಹೋರ್‌: ಇದೇ ಮೊದಲ ಬಾರಿಗೆ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಜಮಾತ್‌ ಉದ್‌ ದಾವಾದ ಮುಖ್ಯಸ್ಥ, ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ‘ಉಗ್ರ’ನೆಂದು ಒಪ್ಪಿಕೊಂಡಿದೆ! ಜೆಹಾದ್‌ ಹೆಸರಲ್ಲಿ ಹಫೀಜ್‌ ಭಯೋತ್ಪಾದನೆ ಹರಡುತ್ತಿದ್ದಾನೆ ಎಂದು ಪಾಕ್‌ನ ಗೃಹ ಸಚಿವಾಲಯ ಅಲ್ಲಿನ ಕಾನೂನು ಪರಾಮರ್ಶೆ ಮಂಡಳಿಗೆ ಹೇಳಿದೆ.

Advertisement

ಈ ಮೂಲಕ ಭಾರತದ ವಿರುದ್ಧ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡಲು ಹಫೀಜ್‌ನನ್ನು ಸಲಕರಣೆಯಾಗಿ ಬಳಸುತ್ತಿದ್ದ ಪಾಕ್‌ ಅಚ್ಚರಿ ಎಂಬಂತೆ ಈ ಹೇಳಿಕೆ ನೀಡಿದೆ. ಸದ್ಯ ಹಫೀಜ್‌ ಮತ್ತು ಆತನ ನಾಲ್ವರು ಸಹಚರರಾದ ಜಾಫ‌ರ್‌ ಇಕ್ಬಾಲ್‌, ರೆಹ್ಮಾನ್‌ ಅಬಿಡ್‌, ಅಬ್ದುಲ್ಲಾ ಉಬೈದ್‌, ಮತ್ತು ಕಾಜಿ ಕಾಶಿಫ್ ನಿಯಾಜ್‌ ಗೃಹಬಂಧನಲ್ಲಿದ್ದು, ಅಲ್ಲಿನ ಪಂಜಾಬ್‌ ಸರಕಾರ ಗೃಹಬಂಧನಕ್ಕೆ ಒಳಪಡಿಸಿದ್ದರ ವಿರುದ್ಧ ಆತ ಲಾಹೋರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ. ಈ ಬಗ್ಗೆ ಪಾಕ್‌ ಸುಪ್ರೀಂಕೋರ್ಟ್‌ನ ನ್ಯಾ| ಇಜಾಜ್‌ ಅಫ್ಜಲ್‌ ಖಾನ್‌ ನೇತೃತ್ವದ ನ್ಯಾಯ ಮಂಡಳಿಯೊಂದನ್ನು ರಚಿಸಲಾಗಿತ್ತು. ನ್ಯಾಯ ಮಂಡಳಿ ಎದುರು ಶನಿವಾರ ಹಾಜರಾಗಿದ್ದ ಹಫೀಜ್‌ ಸಯೀದ್‌, ಕಾಶ್ಮೀರ ವಿಚಾರದಲ್ಲಿ ತಾನು ದನಿ ಎತ್ತಿದ್ದಕ್ಕಾಗಿ ಪಾಕ್‌ ಸರಕಾರ ತನ್ನನ್ನು ಗೃಹಬಂಧನಕ್ಕೆ ಒಳಪಡಿಸಿದ್ದಾಗಿ ಹೇಳಿದ್ದ. ಆದರೆ ಆತನ ವಾದವನ್ನು ಪಾಕ್‌ ಗೃಹ ಸಚಿವಾಲಯ ತಿರಸ್ಕರಿಸಿದ್ದು, ಹಫೀಜ್‌ ಮತ್ತು ಆತನ ನಾಲ್ವರು ಸಹಚರರು ಜೆಹಾದ್‌ ಹೆಸರಲ್ಲಿ ಭಯೋತ್ಪಾದನೆ ಹರಡುತ್ತಿದ್ದಾರೆ ಎಂದು ಹೇಳಿದೆ. ಮುಂದಿನ ವಿಚಾರಣೆ ಮೇ 15ರಂದು ನಿಗದಿಯಾಗಿದ್ದು, ಮುಂದಿನ ವಿಚಾರಣೆಗೆ ಪಾಕ್‌ನ ಅಟಾರ್ನಿ ಜನರಲ್‌ ಅವರನ್ನು ಹಾಜರಾಗುವಂತೆ ಸೂಚಿಸಲಾಗಿದೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಒತ್ತಡದ ಮೇರೆಗೆ ಪಾಕ್‌ ಸರಕಾರ ಸಯೀದ್‌ನನ್ನು ಗೃಹಬಂಧನದಲ್ಲಿ ಇಟ್ಟಿದೆ ಎಂದು ಅಲ್ಲಿನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಜ.30ರಂದು ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಸಯೀದ್‌ನನ್ನು ಪಾಕಿಸ್ಥಾನ ಗೃಹಬಂಧನದಲ್ಲಿ ಇರಿಸಿತ್ತು.

ಹಫೀಜ್‌, ದಾವೂದ್‌ ಗಡೀಪಾರಿಗೆ ಅರ್ಜಿ ಸಲ್ಲಿಸಿಲ್ಲ  
ಇತ್ತ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಾದ ದಾವೂದ್‌ ಇಬ್ರಾಹಿಂ ಮತ್ತು ಮುಂಬಯಿ ದಾಳಿಯ ಸೂತ್ರಧಾರಿ ಹಫೀಜ್‌ ಸಯೀದ್‌ನ ಗಡೀಪಾರಿಗೆ ತನಿಖಾ ಸಂಸ್ಥೆಗಳಿಂದ ಯಾವುದೇ ಕೋರಿಕೆ ಬಂದಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ. 1993ರ ಮುಂಬಯಿ ಬಾಂಬ್‌ ಸ್ಫೋಟ ಮತ್ತು 26/11 ಮುಂಬಯಿ ದಾಳಿ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇವು ಹೆಚ್ಚಿನ ವಿಚಾರಣೆಗೆ ಇದುವರೆಗೂ ಗಡೀಪಾರಿಗೆ ಕೇಳಿಕೊಂಡಿಲ್ಲ  ಎಂದು ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ಕೇಂದ್ರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next