ಇಸ್ಲಾಮಾಬಾದ್ : ಗೃಹ ಬಂಧನದಿಂದ ಬಿಡುಗಡೆಯಾದೊಡನೆಯೇ 26/11ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, “ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವ’ ಪಣ ತೊಟ್ಟಿದ್ದಾನೆ.
“ನಾನು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇನೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರಕಿಸಲು ದೇವರು ನನಗೆ ಮತ್ತು ನನ್ನ ಸಮುದಾಯವರಿಗೆ ನೆರವಾಗಲಿ ಎಂದು ಹಾರೈಸುತ್ತೇನೆ’ ಎಂದು ಸಯೀದ್ ತನ್ನ ವಿಡಿಯೋ ಸಂದೇಶದಲ್ಲಿ ಹೇಳಿದ್ದಾನೆ.
ಗೃಹ ಬಂಧನದಿಂದ ತಾನು ಬಿಡುಗಡೆಯಾಗುವುದಕ್ಕೆ ಭಾರತದ ವಿರೋಧವನ್ನು ಲೇವಡಿ ಮಾಡಿದ ಸಯೀದ್, “ನನ್ನನ್ನು ಜೈಲಿನಲ್ಲೇ ಇಡಲು ದಿಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿತು; ಏಕೆಂದರೆ ಕಾಶ್ಮೀರದ ಕಾರಣಕ್ಕೆ ಭಾರತ ನನ್ನ ಬೆನ್ನಿಗೇ ಬಿದ್ದಿದೆ’ ಎಂದು ಹೇಳಿದ್ದಾನೆ.
ತನ್ನ ಗೃಹಬಂಧನದಿಂದ ಬಿಡುಗಡೆ ಮಾಡಿದ ನ್ಯಾಯಾಧೀಶರಿಗೆ ಧನ್ಯವಾದ ಹೇಳಿದ ಸಯೀದ್, “ದೇವರಿಗೆ ಕೃತಜ್ಞತೆಗಳು; ಇದು ನಿಜಕ್ಕೂ ಪಾಕ್ ಸ್ವಾತಂತ್ರ್ಯದ ವಿಜಯವೇ ಆಗಿದೆ’ ಎಂದು ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.
166 ಮಂದಿ ಅಮಾಯಕರ ಹತ್ಯೆಗೆ ಕಾರಣವಾದ ಮುಂಬಯಿ ಮೇಲಿನ ಉಗ್ರ ದಾಳಿಯ ಪ್ರಧಾನ ಸೂತ್ರಧಾರನಾಗಿರುವ ಸಯೀದ್, ಅನಂತರದಲ್ಲಿ ಪಾಕಿಸ್ಥಾನದಲ್ಲಿ ಮುಕ್ತವಾಗಿ ತಿರುಗಾಡಿಕೊಂಡಿದ್ದ; ಈ ವರ್ಷ ಜನವರಿಯಲ್ಲಿ ಆತನು ಪಾಕ್ ಸರಕಾರ ಗೃಹ ಬಂಧನದಲ್ಲಿ ಇರಿಸಿತು.