ಮೊನ್ನೆ ನನ್ನ ಮಗನನ್ನು ಶಾಲೆಗೆ ಬಿಡಲು ಬಸ್ ಹತ್ತಿದ್ದೆ. ಮುಂದಿನ ಸ್ಟಾಪ್‌ನಲ್ಲಿ 17-18ರ ಯುವತಿಯೊಬ್ಬಳು ಬಸ್ ಹತ್ತಿದವಳು ನಿಂತಿದ್ದಳು. ನೋಡ ನೋಡುತ್ತಿದ್ದಂತೆಯೇ ನಿಂತಲ್ಲಿಂದಲೇ ಅವಳ ಶರೀರ ವಾಲತೊಡಗಿತು. ಎಲ್ಲರೂ ಬೊಬ್ಬೆ ಹೊಡೆದಾಗ ಚಾಲಕ ಬಸ್ ನಿಲ್ಲಿಸಿದರು. ಕುಸಿದು ಬಿದ್ದ ಅವಳನ್ನು ಎತ್ತಿ ಕುಳ್ಳಿರಿಸಿ ನೀರು ಸಿಂಪಡಿಸಿ, ಸ್ವಲ್ಪ ನೀರು ಕುಡಿಯುವಂತೆ ಹೇಳಿದರು. ಎಚ್ಚರಗೊಂಡ ಆಕೆಯಲ್ಲಿ, “”ಏನು ಬೆಳಗ್ಗೆ ತಿಂಡಿ ಮಾಡಲಿಲ್ಲವೇ” ಅಂತ ಯಾರೋ ಕೇಳಿದಾಗ, “”ಇಲ್ಲ ಸಮಯ ಸಿಗ್ಲಿಲ್ಲ” ಎಂದು ನಿಧಾನವಾಗಿ ಹೇಳಿದಳು.
ಒಂದು ಕಾಲವಿತ್ತು. ನಾವು ಶಾಲೆ-ಕಾಲೇಜಿಗೆ ಹೋಗುವಾಗ ಬೆಳಗಿನ ತಿಂಡಿ ತಿನ್ನುವುದು ಎಂದರೆ ಒಂದು ಉತ್ಸವದ ಹಾಗೆ. ಅಮ್ಮ ಕಾವಲಿಗೆ ದೋಸೆ ಹುಯ್ಯುವ ಸದ್ದು, ಅದರ ಪರಿಮಳ ಕೇಳಿದಾಗ ಓಡಿ ಹೋಗಿ ಮಕ್ಕಳೆಲ್ಲರೂ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತ, ತಿಂಡಿಗೆ ಕಾಯುತ್ತಿದ್ದೆವು. ಅಮ್ಮ ಮಾಡಿದ ಬಿಸಿಬಿಸಿ ದೋಸೆಚಟ್ನಿ ಸವಿಯೋದೆ ಆನಂದ. ಐದು ದೋಸೆಗಿಂತ ಕಡಿಮೆ ನಾವು ತಿಂದವರೇ ಅಲ್ಲ. ಅಮ್ಮನಾದರೋ ಮಕ್ಕಳು ಯಾವತ್ತಿಗಿಂತ ಕಡಿಮೆ ದೋಸೆ ತಿನ್ನುತ್ತಿದ್ದಾರೆ ಎಂದು ಅನಿಸಿದರೆ, “”ತಿನ್ನಿ, ಕಡಿಮೆ ತಿಂದ್ರೆ ಇಡೀ ದಿನ ಶಾಲೆಯಲ್ಲಿ ಕುಳಿತು ಪಾಠ ಕೇಳುವಾಗ ತಲೆ ತಿರುಗುತ್ತದೆ” ಅಂತ ಒತ್ತಾಯ ಮಾಡಿ ಹಾಕುವಳು. ಆ ಸಮಯದಲ್ಲಿ ನಾವು ಎಂದೂ ನಿಶ್ಶಕ್ತಿ ಹೊಂದಿದ ಮಾತೇ ಇಲ್ಲ. ಕಾಯಿಲೆ-ಕಸಾಲೆ ಬಂದರೂ, ಮನೆ ಔಷಧ.
ಬೆಳಗಿನ ಉಪಾಹಾರವನ್ನು ರಾಜನಂತೆ ಮಾಡು; ಮಧ್ಯಾಹ್ನದ ಊಟವನ್ನು ರಾಣಿಯಂತೆ ಸವಿ; ರಾತ್ರೆಯ ಊಟ ಭಿಕ್ಷುಕನಂತೆ ಹೊಟ್ಟೆಗೆ ತಗೊಳ್ಳಬೇಕು ಎನ್ನುವುದುಂಟು. ಬೆಳಗಿನ ತಿಂಡಿಯು ದಿನದ ಇಡೀ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ರಾತ್ರೆ ಇಡೀ ನಿ¨ªೆಮಾಡಿ ಏಳುವಾಗ ದಿನದ ಆರಂಭದಲ್ಲಿ ನಾವು ಉಪವಾಸ ಕುಳಿತರೆ ಅಥವಾ ಉಪಾಹಾರವನ್ನು ನಿರ್ಲಕ್ಷ್ಯ ಮಾಡಿದರೆ ಹೊಟ್ಟೆಯಲ್ಲಿ ನಡೆಯುವ ಪಚನಕ್ರಿಯೆಗೆ ತೊಂದರೆ ಆಗುತ್ತದೆ.
ಇತ್ತೀಚೆಗೆ ಅಮೆರಿಕದ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ನಡೆಸಿದ ಸಂಶೋಧನೆಯ ವರದಿ ಪ್ರಕಟವಾಯಿತು. ಆ ಪ್ರಕಾರ, ಬೆಳಿಗ್ಗೆ ಉಪಾಹಾರ ಸೇವಿಸಿದ ಬಳಿಕ ಶಾಲೆಗೆ ತೆರಳುವ ಮಕ್ಕಳು ಕಲಿಕೆಯಲ್ಲಿ ಮುಂದಿರುತ್ತಾರಂತೆ. ಹೊಟ್ಟೆಗಿಂತ ಹೆಚ್ಚಾಗಿ ಮೆದುಳಿಗೇ ಆಹಾರದ ಅಗತ್ಯ ಹೆಚ್ಚು. ಯಾಕೆಂದರೆ, ದೇಹದ ಇತರ ಅಂಗಾಂಗಳು ಆಹಾರದ ಪೂರೈಕೆ ಕಡಿಮೆ ಆದಾಗ ಶೇಖರಿಸಿಟ್ಟ ಕೊಬ್ಬನ್ನು ಕರಗಿಸಿ ಬಳಸುತ್ತವೆ. ಆದರೆ, ಮೆದುಳಿಗೆ ಈ ಸಾಮರ್ಥ್ಯ ಇಲ್ಲ. ಆದ್ದರಿಂದ ಅದಕ್ಕೆ ಆಹಾರದ ಅಗತ್ಯ ಇದ್ದೇ ಇದೆ ಎಂದು ಡಾ. ಆಮಿ ಸ್ನಿಡರ್ ಎಂಬವರು ಹೇಳಿರುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಅಧ್ಯಯನಕ್ಕಾಗಿ 16ರಿಂದ 18 ವರ್ಷದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗಿದೆ.
ಉಪಾಹಾರ ಮಾಡುವ ಮಕ್ಕಳು ತಮ್ಮನ್ನು ತಾವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ತರಗತಿಯ ಪರೀಕ್ಷೆಯ ಅಂಕಗಳಿಂದ ಹಿಡಿದು ಪಠ್ಯೇತರ ಚಟುವಟಿಕೆಗಳಲ್ಲೂ ಇವರು ಮುಂದೆ ಇರುತ್ತಾರೆ.ಇದನ್ನು ನಿರ್ಲಕ್ಷಿಸುವವರು ಹಸಿವಾದಾಗ ಯಾವುದಾದರೂ ಜಂಕ್ ಆಹಾರಕ್ಕೆ ಮೊರೆಹೋಗಿ ಶರೀರದ ತೂಕ ಹೆಚ್ಚಾಗಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
ರಜನಿ ಭಟ್, ಕಲ್ಮಡ್ಕ