ಕಲಬುರಗಿ: ಕೈಗೆ ಅಧಿಕಾರ ಸಿಕ್ಕಿದೆ. ಮೊದಲು ಕೆಲಸ ಮಾಡಿ, ತದನಂತರ ಮಾತನಾಡಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು. ಗುರುವಾರ ಎಚ್‌ಕೆಇ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಭವನ ಉದ್ಘಾಟನೆ ನೆರವೇರಿಸಿ ತದನಂತರ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಸಚಿವರಾಗಿ ಹೈ.ಕ ಭಾಗಕ್ಕೆ ಅದರಲ್ಲೂ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ಒಂದು ಸಂಸ್ಥೆಯನ್ನು ತರದೇ ತಳಬುಡವಿಲ್ಲದ ಟೀಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಧಿಕಾರ ಸಿಕ್ಕಿದೆ. ಮೊದಲು ಕೆಲಸ ಮಾಡಿ, ನಂತರ ಮಾತನಾಡಿ ಎಂದು ವಾಗ್ಧಾಳಿ ನಡೆಸಿದರು. ಗುಲಾಮರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆದ ನಾವು ಆರಂಭದಿಂದಲೂ ಹಿಂದೆ ಇದ್ದೇವೆ ಎಂದರು.
ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಮೈಸೂರು, ಕರಾವಳಿ ಭಾಗದಲ್ಲಿ ಹಲವು ಕಾಲೇಜುಗಳಿದ್ದರೆ ಕಲಬುರಗಿಯಲ್ಲಿ ಒಂದೇ ಕಾಲೇಜಿತ್ತು. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಮೊದಲು ಆ ಭಾಗದಲ್ಲಿ ಆರಂಭಗೊಂಡ ನಂತರ ಈ ಕಡೆ ಬರುತ್ತಿದ್ದವು. ಇದೇ ಹಿನ್ನೆಲೆಯಲ್ಲಿ ಅಭಿವೃದ್ಧಿಯಲ್ಲಿ ಸಮಾನತೆ ಸಾಧಿಸಲು 371ನೇ (ಜೆ) ವಿಧಿ ತರಲಾಗಿದೆ. 371ನೇ ವಿಧಿಗೆ ಇದೇ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರು ಎಂದರು.
ಈ ಹಿಂದೆ ತಾವು ಕೈಗಾರಿಕಾ ಸಚಿವರಾಗಿದ್ದಾಗ ಕಲಬುರಗಿಗೆ ಜರ್ಮನ್ ಸಹಾಯದೊಂದಿಗೆ 12 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ತಾಂತ್ರಿಕ ಉಪಕರಣಗಾರ (ಜಿಟಿಡಿಸಿ) ಕಾಲೆಜು ಸ್ಥಾಪನೆಗೆ ತಿಂಗಳೊಳಗೆ ಅಗತ್ಯ ಭೂಮಿ ನೀಡಿ ಕಾಲೇಜನ್ನು ಪ್ರಾರಂಭಿಸಿ ಕೌಶಲ್ಯಾಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದು ಹೇಳಿದರು.
ಜಿಟಿಡಿಸಿಯಲ್ಲಿ ಶಿಕ್ಷಣ ಪಡೆದು ಪ್ರಮಾಣ ಪತ್ರ ಪಡೆದರೆ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ನೌಕರಿ ದೊರೆಯುತ್ತದೆ. ಆದರೆ ಇವರು ಈ ಭಾಗಕ್ಕೆ ಏನನ್ನೂ ತರದೇ ಕೌಶಲ್ಯಾಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಇದನ್ನೆಲ್ಲ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ತಾವು ಕೇಂದ್ರದ ಕಾರ್ಮಿಕ ಸಚಿವರಾಗಿದ್ದಾಗ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಕೇವಲ ಐದು ಸಾವಿರವಿದ್ದ ಐಟಿಐ ಕಾಲೇಜುಗಳನ್ನು ದ್ವಿಗುಣ ಗೊಳಿಸಿದ್ದೆವು. ಕಲಬುರಗಿ-ಹಾಗೂ ಬೆಂಗಳೂರಿಗೆ ಇಎಸ್‌ಐ ಕಾಲೇಜು ಹಾಗೂ ಆಸ್ಪತ್ರೆ ತರಲಾಯಿತು. ಅದೇ ರೀತಿ ರೈಲ್ವೆ ಸಚಿವರಾಗಿದ್ದ ಒಂಭತ್ತು ತಿಂಗಳ ಅವಧಿಯಲ್ಲಿಯೇ 27 ಹೊಸ ರೈಲುಗಳನ್ನು ಓಡಿಸಲಾಯಿತು. ಹೀಗೆ ಅಭಿವೃದ್ಧಿ ಕಾರ್ಯಗಳನ್ನು ಹೇಳುತ್ತಾ ಹೋದರೆ ಒಂದು ದಿನ ಸಾಕಾಗುವುದಿಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಳ್ಳದೇ ಜೋರಾಗಿ ಮಾತನಾಡಿದರೆ ಸಾಧನೆ ಎನ್ನಬಹುದೇ? ಎಂದು ಪ್ರಶ್ನಿಸಿ ಸಂಸದ ಖರ್ಗೆ ವಿರೋಧಿಗಳಿಗೆ ತಿರುಗೇಟು ನೀಡಿದರು.
ನಿಷ್ಠೆಗೆ ಫಲ ಸಿಗುತ್ತದೆಂದು ನಂಬಿರುವೆ ತಾವು ಮುಖ್ಯಮಂತ್ರಿಯಾಗಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಹಲವರು ಕೇಳುತ್ತಲೇ ಇರುತ್ತಾರೆ. ಆದರೆ ಮುಖ್ಯಮಂತ್ರಿ ಆಗ್ತೀನೆ ಎಂದು ಬಹಿರಂಗವಾಗಿ ಹೇಳಲಿಕ್ಕಾಗುತ್ತದೆಯೇ? ಎಲ್ಲಿ ಹೇಳಬೇಕೋ ಹಾಗೂ ಯಾರಿಗೆ ಹೇಳಬೇಕೋ ಅವರಿಗೆ ಹೇಳೆದ್ದೆವೆ. ಶಾಸಕಾಂಗ ಪಕ್ಷದ ನಾಯಕನಾಗಿದ್ದ ವೇಳೆ ತಮ್ಮನ್ನು ಲೋಕಸಭೆಗೆ ಸ್ಪರ್ಧಿಸುವಂತೆ ಪಕ್ಷದ ಅಧಿನಾಯಕರು ಹೇಳಿದರು. ಅವರ ಸೂಚನೆಯಂತೆ ಸ್ಪರ್ಧಿಸಿ ಸಂಸತ್‌ಗೆ ಪ್ರವೇಶಿಸಿದೆ. ಸಚಿವ ಪದವಿ ಆಸೆ ಹೊಂದಿರಲಿಲ್ಲ. ಆದರೆ ಸಚಿವ ಪದವಿ ನೀಡಲಾಯಿತು. ಎರಡನೇ ಬಾರಿಗೆ ಮತ್ತೆ ಸಂಸತ್ ಚುನಾವಣೆಗೆ ಸ್ಪರ್ಧಿಸಿದೆ. ಮೋದಿ ಗಾಳಿ ನಡುವೆ ಕಲಬುರಗಿ ಮತದಾರರು ದೊಡ್ಡ ರೀತಿಯಲ್ಲಿ ತಮಗೆ
ಆಶೀರ್ವಾದ ಮಾಡಿದರು. ತಾವಂತು ಪಕ್ಷಕ್ಕೆ ನಿಷ್ಠೆ ಇಟ್ಟು ದುಡಿಯುತ್ತಾ ಬಂದಿದ್ದೇವೆ. ನಿಷ್ಠೆಗೆ ಫಲ ಸಿಗುತ್ತದೆ ಎಂದು ನಂಬಿದ್ದೇನೆ.
●ಮಲ್ಲಿಕಾರ್ಜುನ ಖರ್ಗೆ, ಸಂಸದ